ಸೋಮವಾರಪೇಟೆ ಮೇ 28 NEWS DESK : ಪ್ರವಾಸಿತಾಣ ಎಂದೇ ಕರೆಸಿಕೊಳ್ಳುವ ಮಕ್ಕಳ ಗುಡಿ ಬೆಟ್ಟಕ್ಕೆ ತೆರಳುವ ರಸ್ತೆ ಎರಡೂ ಬದಿಯಲ್ಲಿ ಕಾಡು ಬೆಳೆದು, ಅಲ್ಲಲ್ಲಿ ಇದ್ದ ತ್ಯಾಜ್ಯದ ರಾಶಿಯನ್ನು ಕಂಡ ಬೆಂಗಳೂರಿನ ಉದ್ಯಮಿಯೊಬ್ಬರು ಜೇಸಿಬಿ ಮೂಲಕ ಸ್ವಚ್ಛಗೊಳಿಸಿದ್ದು, ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಿರಗಂದೂರು ಗ್ರಾ.ಪಂ ವ್ಯಾಪ್ತಿಯ ಮಕ್ಕಳ ಗುಡಿ ಪ್ರವಾಸಿ ತಾಣವಾಗಿದ್ದು, ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಪ್ರಕೃತಿಯ ಸೊಬಗನ್ನು ಸವಿಯುತ್ತಾರೆ. ಆದರೆ ಪ್ರವಾಸೋದ್ಯಮ ಇಲಾಖೆಗೆ ಸೇರ್ಪಡೆಗೊಳ್ಳದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಸೂಕ್ತ ಭದ್ರತೆಯೂ ಇಲ್ಲದಂತಾಗಿದೆ. ಆದರೂ ಪ್ರವಾಸಿಗರನ್ನು ಸೆಳೆಯುತ್ತಿದೆ.
ಮಕ್ಕಳಗುಡಿ ಬೆಟ್ಟದ ವ್ಯೂ ಪಾಯಿಂಟ್ ನಲ್ಲಿ ಯಾವುದೇ ರೀತಿಯ ಸುರಕ್ಷತೆಗಳು ಇಲ್ಲ. ಇಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲು, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ರಸ್ತೆಯ ಎರಡೂ ಬದಿಯ ಕಾಡುಗಳು ರಸ್ತೆಯನ್ನು ಆಕ್ರಮಿಸಿಕೊಂಡಿತ್ತು. ಇದರ ಸ್ವಚ್ಛತೆಗೆ ಸ್ಥಳೀಯ ಗ್ರಾ.ಪಂ ಮುಂದಾಗದಿರುವುದರಿಂದ, ಪ್ರವಾಸಿಗರು ಕಷ್ಟದಲ್ಲಿ ಈ ಸ್ಥಳಕ್ಕೆ ಆಗಮಿಸುತ್ತಿದ್ದರು. ಸಂಜೆ ಸಮಯವಾದರೆ ಬೆಟ್ಟಕ್ಕೆ ಹೋಗಲು ಜನರು ಭಯಪಡುವಂತಾಗಿತ್ತು.
ಉದ್ಯಮಿ ಸುರೇಶ್ ಮಾತನಾಡಿ, ಮಕ್ಕಳಗುಡಿ ಬೆಟ್ಟವು ನಿರ್ವಹಣೆ ಇಲ್ಲದೆ ರಸ್ತೆ ಕಾಡುಗಳಿಂದ ಮುಚ್ಚು ಹೋಗಿದ್ದು, ಪುಂಡಪೋಕರಿಗಳ ಹಾವಳಿಯಿಂದ ಸಾರ್ವಜನಿಕರು, ಪ್ರವಾಸಿಗರು ಹೋಗದಂತ ಪರಿಸ್ಥಿತಿ ಇತ್ತು. ರಸ್ತೆ ಸರಿಪಡಿಸಿಕೊಡಲಾಗಿದೆ. ಪಂಚಾಯಿತಿ ಆಡಳಿತ ಒಂದಷ್ಟು ಸೌಲಭ್ಯ ಒದಗಿಸಬೇಕು ಎಂದರು. ಇದರ ಬಗ್ಗೆ ಸ್ಥಳೀಯ ಪಂಚಾಯಿತಿ ಗಮನ ಹರಿಸಬೇಕು. ಸ್ವಚ್ಛತೆ, ಭದ್ರತೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.