ಮಡಿಕೇರಿ ಮೇ 28 NEWS DESK : ವಿಧಾನ ಪರಿಷತ್ ಗೆ ನಡೆಯುವ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯನೂರ್ ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಕೆ.ಕೆ.ಮಂಜುನಾಥ್ ಸ್ಪರ್ಧಿಸಿದ್ದು, ಜೂ.3 ರಂದು ನಡೆಯುವ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳೂ ಗೆಲ್ಲುವ ವಿಶ್ವಾಸವನ್ನು ವಿರಾಜಪೇಟೆ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ವ್ಯಕ್ತಪಡಿಸಿದರು.
ಗೋಣಿಕೊಪ್ಪಲು ಸಿಲ್ವರ್ ಸ್ಕೈ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಕಳೆದ ಒಂದು ವರ್ಷದಲ್ಲಿ ಕೊಡಗಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಹಾಗೂ ಗ್ಯಾರಂಟಿ ಯೋಜನೆಗಳಿಂದಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪದವೀಧರ ಕ್ಷೇತ್ರದ ಮತದಾರರನ್ನು ಶಾಲಾ ಕಾಲೇಜಿಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ದೂರವಾಣಿ ಮೂಲಕವೂ ಸಂಪರ್ಕಿಸಲಾಗುತ್ತಿದೆ. ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ 1800 ಕ್ಕೂ ಅಧಿಕ ಮತದಾರರು ಇರುವದಾಗಿ ಮಾಹಿತಿ ನೀಡಿದರು.
ಶಿಕ್ಷಕರಿಗೆ ಹಲವು ಸಮಸ್ಯೆಗಳಿವೆ. ಹೊಸಾ ಪಿಂಚಣಿ ಯೋಜನರ 7ನೇ ವೇತನ ಆಯೋಗದ ಶಿಫಾರಸ್ಸನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಶಿಕ್ಷಕರಿಗೆ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಶಿಕ್ಷಕರ ಹಲವು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಹೇಳಿದರು. ರಾಜಕೀಯ ಬದ್ಧತೆಯೊಂದಿಗೆ ಕೆಲಸ ಮಾಡಲು ಮತದಾರರು ಸ್ಪಂದನೆ ಹಾಗೂ ಶಕ್ತಿ ತುಂಬಲು ಮನವಿ ಮಾಡಿದರು.
ಮಡಿಕೇರಿಯ ಉಪನೋಂದಾವಣೆ ಅಧಿಕಾರಿಯ ಅಮಾನತ್ತು ಬಗ್ಗೆ ಪ್ರಸ್ತಾಪಿಸಿದ ಅವರು, ಯಾವುದೇ ಅಧಿಕಾರಿಗಳು ಜಿಲ್ಲೆಯಲ್ಲಿ ಜನಪರ ಕಾಳಜಿಯೊಂದಿಗೆ ಕೆಲಸ ಮಾಡದಿದ್ದಲ್ಲಿ ಅವರ ವಿರುದ್ಧ ಶಿಸ್ತು ಬದ್ಧ ಕ್ರಮ ಜರುಗಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಅಬಾಕರಿ ಹಾಗೂ ಪೊಲೀಸ್ ಇಲಾಖೆಗೆ ಹೊಸ ಅಧಿಕಾರಿಗಳು ಬಂದಿದ್ದು, ಭ್ರಷ್ಟತೆ ತಾಂಡವವಾಡುತ್ತಿದೆ. ವೈದ್ಯಾಧಿಕಾರಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಕರ್ತವ್ಯ ಲೋಪ ಮಾಡಿದ್ದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ನೀತಿ ಸಂಹಿತೆ ಮುಗಿದ ನಂತರ ಅಂತಹಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೂಕ್ಷ್ಮವಾಗಿ ಹೇಳಿದರು.
ಇದೇ ಸಂದರ್ಭ ಒಂದು ವರ್ಷ ಅವಧಿಯಲ್ಲಿ ತಾವು ಕೈಗೊಂಡ ಜನಪರ ಕೆಲಸದ ಬಗ್ಗೆ ವಿವರಿಸಿದರು.
ಸುದ್ದಿಗೊಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಎಂ.ಎಲ್.ಸಿ.ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಕ್ತಾರ ಟಾಟು ಮೊಣ್ಣಪ್ಪ, ವಿರಾಜಪೇಟೆಯ ರಾಜೇಶ್ ಪದ್ಮನಾಭ, ನರೇಂದ್ರ ಕಾಮತ್ ಹಾಗೂ ಶಿಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.