ಮಡಿಕೇರಿ ಜೂ.12 NEWS DESK : ವೀರನಾಡು ರಕ್ಷಣಾ ವೇದಿಕೆಯ ನಿರಂತರ ಹೋರಾಟದ ಫಲವಾಗಿ ಮಡಿಕೇರಿ ನಗರದ ಗೌಳಿಬೀದಿಯ ಮುನೀಶ್ವರ ದೇವಾಲಯದ ರಸ್ತೆಯಿಂದ ರಾಜಾಸೀಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅತ್ಯಂತ ಗುಣಮಟ್ಟದ ಕಾಮಗಾರಿ ನಡೆದಿದೆ ಎಂದು ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮುನೀಶ್ವರ ದೇವಾಲಯದ ಬಳಿಯಿಂದ ಮೇಲ್ಭಾಗದ ರಾಜಾಸೀಟು ರಸ್ತೆಗೆ ಸಂಪರ್ಕ ಕಲ್ಪಿಸುವ ಹಾದಿ ಸುಮಾರು 30 ವರ್ಷಗಳಿಂದ ಹದಗೆಟ್ಟು ವಾಹನ ಸಂಚಾರ ಅಸಾಧ್ಯವಾಗಿತ್ತು. ಪಕ್ಕದ ಶಾಲಾ ವಿದ್ಯಾರ್ಥಿಗಳು ಮನೆಗಳಿಗೆ ತೆರಳಲು ಈ ದಾರಿಯನ್ನೇ ಅವಲಂಬಿಸಿದ್ದರಾದರೂ ತೀರಾ ಹದಗೆಟ್ಟ ಕಾರಣ ಸಮೀಪದ ಹಾದಿಯೊಂದು ನಿಷ್ಪ್ರಯೋಜಕವಾಗಿತ್ತು. ರಾಜಾಸೀಟ್ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿರುವುದರಿಂದ ಇಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಗೊಂಡರೆ ಇದರ ಮೂಲಕವೂ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿತ್ತು.
ಇದನ್ನು ಮನಗಂಡ ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕಳೆದ ಕೆಲವು ವರ್ಷಗಳಿಂದ ರಸ್ತೆ ನಿರ್ಮಾಣಕ್ಕಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಲೇ ಬಂದಿದ್ದರು. ಇದಕ್ಕೆ ಸ್ಪಂದಿಸಿದ ನಗರಸಭೆ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೊಂಡು ಇದೀಗ ಪೂರ್ಣಗೊಂಡಿದೆ. ಸಧ್ಯದಲ್ಲೇ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆಗೊಳ್ಳಲಿದೆ.
ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ ನಡೆಸಿ ಈಗ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಿದೆ. ಇದಕ್ಕೆ ಕಾರಣಕರ್ತರಾದ ನಗರಸಭಾ ಪ್ರತಿನಿಧಿಗಳು, ಅಧಿಕಾರಿಗಳು, ಗುತ್ತಿಗೆದಾರರು, ಸ್ಥಳೀಯ ನಿವಾಸಿಗಳು ಹಾಗೂ ಸಂಪೂರ್ಣ ಸಹಕಾರ ನೀಡಿದ ರಸ್ತೆ ಪಕ್ಕದ ನಿರ್ಮಾಣ ಹಂತದ ನೂತನ ಕಟ್ಟಡ ನಾರ್ನಿ ಹೊಟೇಲ್ ನ ಮುಖ್ಯಸ್ಥರಾದ ರಾಜಶೇಖರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹರೀಶ್ ಜಿ.ಆಚಾರ್ಯ ತಿಳಿಸಿದರು.
ಯಾವುದೇ ಸಮಸ್ಯೆಗಳಿದ್ದರೂ ಸಂಘಟನೆಯ ಹೋರಾಟದೊಂದಿಗೆ ಸಾರ್ವಜನಿಕರು ಕೈಜೋಡಿಸಿದರೆ ಜಯ ಲಭಿಸುವುದು ಖಚಿತ ಎನ್ನುವುದಕ್ಕೆ ನೂತನ ಕಾಂಕ್ರೀಟ್ ರಸ್ತೆಯೇ ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟರು.