ಸೋಮವಾರಪೇಟೆ ಜೂ.12 NEWS DESK : ಜಿಲ್ಲಾ ಲೋಕಾಯುಕ್ತ ವತಿಯಿಂದ ಸಾರ್ವಜನಿಕರ ಕೊಂದುಕೊರತೆ ಸಭೆ ಹಾಗೂ ಅಹವಾಲು ಸ್ವೀಕಾರ ಸಭೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಲೋಕಾಯುಕ್ತ ಡಿವೈಎಸ್‌ಪಿ ಪವನ್‌ಕುಮಾರ್ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಕೃಷಿ ಜಮೀನಿಗೆ ತೆರಳಲು ಸೂಕ್ತ ರಸ್ತೆಯಿಲ್ಲ. ಒತ್ತುವರಿ ತೆಗೆಸುವಂತೆ ಕಂದಾಯ ಇಲಾಖೆಗೆ 2020ರಲ್ಲಿ ದೂರು ನೀಡಿದ್ದೇನೆ. ರಸ್ತೆಗೆ ಬೇಲಿ ಹಾಕಿಕೊಂಡಿರುವವರಿಂದ ಜೀವಬೆದರಿಕೆ ಇದೆ. ಪೊಲೀಸ್ ಠಾಣೆಗೆ ದೂರು ನೀಡಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತಲ್ತಾರೆಶೆಟ್ಟಳ್ಳಿ ಗ್ರಾಮದ ಕೆ.ಡಿ.ಗುರುಪ್ಪ ಸಮಸ್ಯೆ ಹೇಳಿಕೊಂಡರು.
ದೂರು ನೀಡಿದಾಗ ಪೊಲೀಸ್ ಇಲಾಖೆ ಎರಡು ಕಡೆಯವರನ್ನು ಕರೆಸಿ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು. ಒಂದು ಕಡೆಯಿಂದ ಕರೆದು ಚರ್ಚಿಸಿದರೆ ಯಾವುದೇ ಪ್ರಯೋಜನವಿಲ್ಲ. ಕೂಡಲೇ ಇಬ್ಬರನ್ನು ಕರೆದು ಸಮಸ್ಯೆ ಪರಿಹರಿಸುವಂತೆ ಠಾಣಾಧಿಕಾರಿ ರಮೇಶ್ ಅವರಿಗೆ ಸೂಚಿಸಿದರು. ಕಂದಾಯ ಇಲಾಖಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪೈಸಾರಿ ಜಾಗವಾದಲ್ಲಿ ಕೂಡಲೇ ಬಿಡಿಸಿಕೊಡುವ ಕೆಲಸ ಮಾಡಬೇಕು ಎಂದು ಡಿವೈಎಸ್‌ಸಿ ಸೂಚಿಸಿದರು.
ಕೊಡ್ಲಿಪೇಟೆ ಹೇಮಾವತಿ ಹಿನ್ನೀರಿನಲ್ಲಿ ಇಟ್ಟಿಗೆ ಮಾಡಲು ಹೊಳೆಯ ದಂಡೆಯ ಮಣ್ಣನ್ನು ತೆಗೆಯುತ್ತಿರುವ ಬಗ್ಗೆ ಕೊಡ್ಲಿಪೇಟೆಯ ತೇಜ್‌ಕುಮಾರ್ ದೂರಿಕೊಂಡರು. ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಸ್ವಂತ ಜಾಗದಲ್ಲಿ ಮರ ಕಡಿದು ಸ್ವಂತಕ್ಕೆ ಬಳಸಿದರೆ ದೂರು ದಾಖಲಿಸುತ್ತಾರೆ. ಆದರೆ, ಇಲ್ಲಿ ನೂರಾರು ಮರಗಳನ್ನು ಕಡಿದು 10 ಲಕ್ಷ ಇಟ್ಟಿಗೆ ಸುಡಲು ಸೌದೆ ಮಾಡಿ ಬಳಸುತ್ತಿದ್ದರೂ, ಅರಣ್ಯ ಇಲಾಖೆಯವರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.
ಮರಗಳ ಮೇಲಿನ ಕೊಂಬೆಗಳನ್ನು ಕಡಿದು ಬಳಸಿದಲ್ಲಿ ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಬುಡ ಸಹಿತ ಕಡಿದಲ್ಲಿ ಮಾತ್ರ ದೂರು ದಾಖಲಿಸಬಹುದು ಎಂದು ಆರ್‌ಎಫ್‌ಓ ಗಾನಶ್ರೀ ತಿಳಿಸಿದರು.
ಅಕ್ರಮ ಸಕ್ರಮ ಸಮಿತಿಯಿಂದ ಒಂದು ಎಕರೆ ಜಾಗ ಮಂಜೂರಾಗಿದೆ. ಸೂಕ್ತ ದಾಖಲಾತಿ ನೀಡದೆ ಕಂದಾಯ ಅಧಿಕಾರಿ ಸತಾಯಿಸುತ್ತಿದ್ದಾರೆ. ನನ್ನೊಂದಿಗೆ ಮಂಜೂರಾದ ಅನೇಕರಿಗೆ ಭೂಮಿಯ ದಾಖಲಾತಿ ಮಾಡಿಕೊಟ್ಟಿದ್ದಾರೆ. ನನಗೆ ಮಾತ್ರ ನೀಡುತ್ತಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು, ದಾಖಲಾತಿಯನ್ನು ಮಾಡಿಸಿಕೊಡಬೇಕೆಂದು ಕೊಡ್ಲಿಪೇಟೆಯ ಹೇಮಂತ್‌ಕುಮಾರ್ ಮನವಿ ಮಾಡಿದರು. ಸೂಕ್ತ ದಾಖಲಾತಿಯೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವಂತೆ ಡಿವೈಎಸ್ಪಿ ಹೇಳಿದರು.
ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ದ ಸಾರ್ವಜನಿಕರು ದೂರುಗಳನ್ನು ನಿಗದಿತ ನಮೂನೆಯಲ್ಲಿ ನೀಡಬಹುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಡಿವೈಎಸ್‌ಪಿ ಹೇಳಿದರು. ಹೆಚ್ಚಿನ ವಿವರಗಳಿಗೆ ಮಡಿಕೇರಿ ಲೋಕಾಯುಕ್ತ ಪೊಲೀಸ್ ಕಚೇರಿ, ದೂ.ಸಂ.08272-295297 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ನವೀನ್‌ಕುಮಾರ್, ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್, ಸಿಬ್ಬಂದಿಗಳಾದ ಮಂಜುನಾಥ್, ಲೋಹಿತ್, ಪೃಥ್ವಿಷಾ ಇದ್ದರು.









