ಮಡಿಕೇರಿ ಜೂ.25 NEWS DESK : ವಿರೋಧ ಪಕ್ಷದ ಜನಪರ ಹೋರಾಟವನ್ನು ದಮನ ಮಾಡುವುದಕ್ಕಾಗಿ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಸುಳ್ಳು ದೂರು ದಾಖಲಿಸಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಪ್ರತಿಭಟನೆಯ ಸಂದರ್ಭ ಪ್ರತಿಕೃತಿ ದಹಿಸುವುದು ಸಾಮಾನ್ಯ, ಪ್ರತಿಭಟನೆ ಮಾಡಲು ಮತ್ತು ಆಡಳಿತ ಪಕ್ಷದ ದುರಾಡಳಿತವನ್ನು ಖಂಡಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯನ್ನೇ ದೊಡ್ಡ ಅಪರಾಧ ಎನ್ನುವಂತೆ ಪ್ರತಿಬಿಂಬಿಸಿರುವ ಕಾಂಗ್ರೆಸ್ಸಿಗರು ಪ್ರತಿಕೃತಿ ದಹನದ ವಿಚಾರಕ್ಕೆ ಜಾತಿಯ ಬಣ್ಣ ಬಳಿಯುತ್ತಿದ್ದು, ಇದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಳ್ಳು ದೂರು ದಾಖಲಿಸಿ ಬಿಜೆಪಿ ಕಾರ್ಯಕರ್ತರ ಮನೋಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ. ಮುಂದೆಯೂ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟ ನಡೆಸಲಿದ್ದೇವೆ. ಕಾಂಗ್ರೆಸ್ಸಿಗರು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಒಡಕು ಮೂಡಿಸುವ ರಾಜಕಾರಣ ಮಾಡದೆ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲಿ ಎಂದು ಅನಿತಾ ಪೂವಯ್ಯ ಒತ್ತಾಯಿಸಿದರು.
ಮೋರ್ಚಾದ ಕಾರ್ಯದರ್ಶಿ ಅಲ್ಲಾರಂಡ ಬೀನಾ ಬೊಳ್ಳಮ್ಮ ಮಾತನಾಡಿ ವಿರಾಜಪೇಟೆಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿರುವುದನ್ನು ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ನಾಳನ ಕನ್ನಿಕೆ, ಉಮಾಪ್ರಭು ಹಾಗೂ ವಿರಾಜಪೇಟೆ ಮಂಡಲದ ಅಧ್ಯಕ್ಷೆ ಕವಿತಾ ಬೋಜಪ್ಪ ಉಪಸ್ಥಿತರಿದ್ದರು.