ಸೋಮವಾರಪೇಟೆ ಜೂ.27 NEWS DESK : ನಾಡಪ್ರಭು ಕೆಂಪೇಗೌಡರ ದೂರದರ್ಶಿತ್ವಕ್ಕೆ ಸಾಕ್ಷಿ ಎಂಬಂತೆ ಸುಮಾರು 500 ವರ್ಷಗಳ ಹಿಂದೆಯೇ ಸಾಮಾಜಿಕ ನ್ಯಾಯದ ಮೂಲಕ ಆದರ್ಶನೀಯ ಆಡಳಿತಗಾರರಾಗಿದ್ದರು ಎಂದು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ತಿಲೊತ್ತಮೆ ಬಣ್ಣಿಸಿದರು.
ಸೋಮವಾರಪೇಟೆ ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಐನೂರ ಹದಿನೈದನೆ ಜಯಂತಿ ಕಾಯ್ರ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕೆಂಪೇಗೌಡರು ಅಂದಿನ ರೈತರು ಮತ್ತು ಕೃಷಿ ಕಾರ್ಮಿಕರು ಸ್ವಾಭಿಮಾನದಿಂದ ಬದುಕಲು ಹಾಗೂ ಕುಲಕಸುಬುಗಳಲ್ಲಿ ತೊಡಗಿದ್ದ ಎಲ್ಲಾ ಸಾಮಾಜಿಕ ವರ್ಗಗಳಿಗೆ ಅನ್ನ, ನೀರು, ಆಶ್ರಯ, ಸಿಗಬೇಕೆಂಬ ದೂರ ದೃಷ್ಟಿ ಹೊಂದಿದ್ದರು ಎಂದರು.
ವ್ಯವಸಾಯಕ್ಕೆ ನೀರಿನ ಭದ್ರತೆ ಒದಗಿಸುವ ಹಲವಾರು ಕೆರೆಗಳನ್ನು ಕಟ್ಟಿಸಿದ್ದರು. ನಾವುಗಳು ಇಂದು ಜೀವನಾಡಿಗಳಾಗಿರುವ ಕೆರೆಗಳನ್ನೇ ನಾಶಮಾಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೇವಲ ಆಚರಣೆಗಷ್ಟೇ ಸೀಮಿತಗೊಳಿಸದೆ ಕೆಂಪೇಗೌಡರ ಆದರ್ಶಗಳನ್ನೂ ಪಾಲಿಸೋಣವೆಂದರು.
ವಕೀಲರಾದ ಅಭಿಮನ್ಯು ಕುಮಾರ್ ಮಾತನಾಡಿ, ಬೆಂಗಳೂರು ವಿಶ್ವಮಾನ್ಯತೆ ಪಡೆಯಲು ನಾಡಪ್ರಭು ಕೆಂಪೇಗೌಡರು ಮುಖ್ಯ ಕಾರಣರಾಗಿದ್ದಾರೆ. ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಬೆಂಗಳೂರನ್ನು ಆಶ್ರಯಿಸಿದ್ದೇವೆ. ಉನ್ನತ ಹುದ್ದೆಯನ್ನು ಬೆಂಗಳೂರಿನಲ್ಲೇ ಪಡೆದುಕೊಂಡು ನೆಮ್ಮದಿಯಾಗಿದ್ದೇವೆ. ಕೆಂಪೇಗೌಡರ ಕೊಡುಗೆ ಅಪಾರವಾದದ್ದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಕೆಂಪೇಗೌಡರು 376 ದೊಡ್ಡ ಕೆರಗಳು ಹಾಗೂ 1226 ಸಣ್ಣ ಕೆರೆಗಳನ್ನು ನಿರ್ಮಿಸಿದರು. ಅದರ ಉದ್ದೇಶ ಕೃಷಿ ಬೆಳೆಗಳ ಉತ್ಪಾದನೆ ಜಾಸ್ತಿಯಾಗಬೇಕು. ರೈತರು ನೆಮ್ಮದಿಯಿಂದ ಬದುಕಬೇಕು. ಅಂತರ್‍ಜಲ ಹೆಚ್ಚಿಸಬೇಕೆಂಬ ದೂರದೃಷ್ಟಿ ಇತ್ತು. ಆದರೆ ಪ್ರಭುಗಳ ಕಲ್ಪನೆಯನ್ನು ನಾಶಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೊಡಗು ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಬೇಕು. ಜನಪ್ರತಿನಿಧಿಗಳು, ಮುಖಂಡರುಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು. ಕೆಂಪೇಗೌಡ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ನವೀನ್ ಕುಮಾರ್ ವಹಿಸಿದ್ದರು. ಪ.ಪಂ ಸದಸ್ಯ ಪಿ.ಕೆ.ಚಂದ್ರು, ಶೀಲಾ ಡಿಸೋಜಾ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ವೀರಣ್ಣ, ಪ.ಪಂ ಮುಖ್ಯಾಧಿಕಾರಿ ನಾಚಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ನಂದಕುಮಾರ್ ಇದ್ದರು. ಇದೇ ಸಂದರ್ಭ ನ್ಯಾನೊ ತಂತ್ರಜ್ಞಾನ ಪಿಎಚ್‍ಡಿ ಪದವಿ ಗಳಿಸಿರುವ, ನಗರೂರು ಗ್ರಾಮದ ಗ್ಲೆನಿಟಾ ಡಿಸೋಜ ಅವರನ್ನು ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಜಯಂತಿ ಪ್ರಯುಕ್ತ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.











