ಮಡಿಕೇರಿ ಜೂ.3 NEWS DESK : ಲೋಕಸಭಾ ಅಧಿವೇಶನದಲ್ಲಿ ಮುಕ್ತವಾಗಿ ಮಾತನಾಡುವ ವಿಶೇಷ ಅವಕಾಶವನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ವಿಧಾನಸಭೆಯ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು, ರಾಹುಲ್ ರಾಷ್ಟçದ ಜನತೆಯ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಜವಾಬ್ದಾರಿಯುತ ವಿರೋಧ ಪಕ್ಷದ ಸ್ಥಾನವನ್ನು ಅಲಂಕರಿಸಿರುವ ರಾಹುಲ್ ಗಾಂಧಿ ಅವರು, ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ದೊಡ್ಡ ಆಂದೋಲನವನ್ನೇ ನಡೆಸಬೇಕಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಷ್ಟ್ರಪತಿಗಳ ಭಾಷಣ ಎನ್ನುವುದು ಆಳುವ ಪಕ್ಷದ ಸರ್ಕಾರ ಮುನ್ನಡೆಯಬೇಕಾದ ಹಾದಿಯ ಕುರಿತಾದ ದಿಕ್ಸೂಚಿ ಭಾಷಣವಾಗಿರುತ್ತದೆ. ಈ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಸಂದರ್ಭ ಸರ್ಕಾರ ಮುನ್ನಡೆಸುವ ಬಗ್ಗೆ ಆರೋಗ್ಯಕರವಾದ ಸಲಹೆ ಸೂಚನೆಗಳನ್ನು ನೀಡಬೇಕಾದ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು, ತಮ್ಮ ಭಾಷಣದ ಬಹುತೇಕ ಅವಧಿಯನ್ನು ಹಿಂದೂ ಧರ್ಮದ ವಿರುದ್ಧವಾಗಿ ಮಾತನಾಡುವ ಮೂಲಕ, ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
::: ಸಿಬಿಐ ತನಿಖೆಯಾಗಲಿ :::
ಮೈಸೂರು ನಗರಾಭಿವ್ರದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಸೈಟ್ ಹಂಚಿಕೆಯಲ್ಲಿನ ಭ್ರಷ್ಟಾಚಾರ ಮೇಲ್ನೋಟಕ್ಕೆ ಸಾಬೀತಾಗಿದ್ದು, ಇದರ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಒಟ್ಟು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೊಬ್ಬ ನಿಷ್ಕಳಂಕ ಎನ್ನುವುದನ್ನು ಸಾಬೀತುಪಡಿಸಲಿ ಎಂದು ಕೆ.ಜಿ. ಬೋಪಯ್ಯ ಆಗ್ರಹಿಸಿದರು.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸೈಟ್ ಹಗರಣದ ಬೆನ್ನಲ್ಲೆ ಅದಕ್ಕೆ ಸಂಬಂಧಿಸಿದ ಅಧಿಕಾರಗಳನ್ನು ವರ್ಗಾವಣೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕೆ.ಜಿ.ಬೋಪಯ್ಯ ಅವರು, ಒಟ್ಟು ಪ್ರಕರಣದ ಸಮಗ್ರ ತನಿಖೆ ಅಗತ್ಯವಾಗಿ ನಡೆಯಬೇಕಿದೆ ಎಂದರು.
::: ರಾಜೀನಾಮೆ ನೀಡಲಿ :::
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ‘ಹಿಂದೂ’ ಅಂದರೆ ಹಿಂಸೆ ಎಂದು ಪ್ರತಿಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಹಿಂದೂ ಧರ್ಮವನ್ನು ಟೀಕಿಸುವುದನ್ನು ನಾವು ಒಪ್ಪುವುದಿಲ್ಲ. ಹಿಂದೂ ಧರ್ಮದ ಬಗ್ಗೆ ಅಭಿಮಾನವಿಲ್ಲದಿದ್ದರೆ ಅವರು ಈ ದೇಶದಲ್ಲ್ಲಿ ಇರುವುದೇ ಬೇಡ ಎಂದರು.
ಹಿಂದೂ ಧರ್ಮವನ್ನು ಅವಹೇಳನ ಮಾಡುವ ಮೂಲಕ ಹಿಂದೂ ಧರ್ಮೀಯರಿಗೆ ನೋವನ್ನುಂಟುಮಾಡಿರುವ ರಾಹುಲ್ ಗಾಂಧಿ ಅವರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ಅನರ್ಹರಾಗಿದ್ದು, ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಉಪಾಧ್ಯಕ್ಷ ಮನು ಮಂಜುನಾಥ್, ವಕ್ತಾರ ಬಿ.ಕೆ.ಅರುಣ್ ಕುಮಾರ್ ಹಾಗೂ ಮಾಧ್ಯಮ ಜಿಲ್ಲಾ ಪ್ರಮುಖ್ ಶಜಿಲ್ ಕೃಷ್ಣನ್ ಉಪಸ್ಥಿತರಿದ್ದರು.