ಮೂರ್ನಾಡು ಜು.5 NEWS DESK : ಸಾಲಿಗ್ರಾಮದ ಡಿವೈನ್ ಪಾರ್ಕ್ ಸಂಸ್ಥೆಯ ಅಂಗಸಂಸ್ಥೆಯಾದ ಮೂರ್ನಾಡುವಿನ ವಿವೇಕ ಜಾಗ್ರತ ಬಳಗದ ವತಿಯಿಂದ ರಕ್ತದಾನ ಶಿಬಿರ ನಡೆಯಿತು.
ಮೂರ್ನಾಡುವಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ರಕ್ತದಾನ ಶಿಬಿರವನ್ನು ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಕುಶನ್ ರೈ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಹೆಚ್ಚುವುದಲ್ಲದೆ ಇದರಿಂದ ಇನ್ನೊಬ್ಬರಿಗೆ ಜೀವದಾನ ನೀಡಿದಂತಾಗುತ್ತದೆ ಎಂದರು.
ಮೂರುತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಹಲವಾರು ಮನುಷ್ಯರ ಜೀವಗಳನ್ನು ಉಳಿಸಿಕೊಳ್ಳುವ ಕಾರ್ಯವಾಗುತ್ತದೆ ಎಂದು ಹೇಳಿದರು.
ಮೂರ್ನಾಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಜಯ ಕುಮಾರ್ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲೆಡೆ ಡೆಂಗ್ಯೂ ಇರುವ ಕಾರಣ ಪ್ಲೇಟ್ಲೆಟ್ ಆಭಾವವಿರುವುದರಿಂದ ಕಾರಣದಿಂದ ರಕ್ತದಾನ ಶಿಬಿರದ ಅಗತ್ಯವಿದೆ ಎಂದರು.
ಆರೋಗ್ಯಕ್ಕೆ ಸಂಬಂಧಿಸಿದ ಶಿಬಿರಗಳ ಆಯೋಜನೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮುಕ್ತ ಅವಕಾಶ ನೀಡುವುದಲ್ಲದೆ, ಎಲ್ಲಾ ರೀತಿಯ ಸಹಾಯ-ಸಹಕಾರವನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ, ವಿವೇಕ ಜಾಗ್ರತಬಳಗದ ಅಧ್ಯಕ್ಷೆ ದಿವ್ಯತೇಜಕುಮಾರ್, ಉಪಾಧ್ಯಕ್ಷ ಯಶವಂತ್ ಬಳಗದ ಸದಸ್ಯರು ಹಾಜರಿದ್ದರು. ಬಳಗದ ಸ್ಯೆಜೈನಿ ಶೃತಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಶಿಬಿರದಲ್ಲಿ ಮೂರ್ನಾಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಅಧಿಕ ಜನರು ಭಾಗವಹಿಸಿದ್ದು, ಸುಮಾರು 57ಕ್ಕೂ ಹೆಚ್ಚು ಸಾರ್ವಜನಿಕರು ರಕ್ತದಾನ ಮಾಡಿದರು.
ಚಿತ್ರ ಮತ್ತು ವರದಿ : ಟಿ.ಸಿ. ನಾಗರಾಜ್, ಮೂರ್ನಾಡು