ಮಡಿಕೇರಿ ಜು.6 NEWS DESK : ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ಮಾರ್ಗದರ್ಶಕರನ್ನು ನೇಮಿಸದೆ ಇರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಪ್ರವಾಸೋದ್ಯಮ ಇಲಾಖೆಗೆ ಸೂಚನೆ ನೀಡಿ ನೇಮಕಾತಿಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವೆಂದು ಕೆಪಿಸಿಸಿ ಸದಸ್ಯ ಬಿ.ಎಸ್.ರಮಾನಾಥ್ ತಿಳಿಸಿದ್ದಾರೆ.
ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಹಳ ವರ್ಷಗಳ ಹಿಂದೆಯೇ ಪ್ರವಾಸಿ ಮಾರ್ಗದರ್ಶಕರ ನೇಮಕವಾಗಿದೆ. ಆದರೆ ಕರ್ನಾಟಕದ ಪ್ರಮುಖ ಪ್ರವಾಸಿತಾಣವಾದ ಕೊಡಗಿನಲ್ಲಿ ಪ್ರವಾಸಿ ಮಾರ್ಗದರ್ಶಕರ ನೇಮಕವಾಗದೆ ನಿರ್ಲಕ್ಷಿಸಲ್ಪಟ್ಟಿತ್ತು. ಕೊಡಗು ಜಿಲ್ಲೆಯ ವಿಶಿಷ್ಟವಾದ ಸಂಸ್ಕೃತಿ ಮತ್ತು ಪ್ರವಾಸಿತಾಣಗಳನ್ನು ಪರಿಚಯಿಸಲು ಪ್ರವಾಸಿ ಮಾರ್ಗದರ್ಶಕರ ಅಗತ್ಯವಿತ್ತು. ಇದನ್ನು ಮನಗಂಡ ಶಾಸಕ ಮಂತರ್ ಗೌಡ ಅವರು ತಕ್ಷಣ ಸ್ಪಂದಿಸಿ ನೇಮಕಾತಿಗಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 32 ಪ್ರವಾಸಿ ಮಾರ್ಗದರ್ಶಕರು ಲೈಸನ್ಸ್ ಪಡೆದಿದ್ದು, ಇವರಲ್ಲಿ ಕೊಡಗಿನ ಯಾರೊಬ್ಬರು ಇಲ್ಲದೆ ಇರುವುದು ವಿಪರ್ಯಾಸ. ಇದೀಗ ಶಾಸಕರ ಕಾಳಜಿಯಿಂದ ಪ್ರವಾಸಿ ಮಾರ್ಗದರ್ಶಕರ ನೇಮಕಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದ್ದು, ಈ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಬಿ.ಎಸ್.ರಮಾನಾಥ್ ಕೋರಿದ್ದಾರೆ. 









