ಮಡಿಕೇರಿ ಜು.7 NEWS DESK : ಆರ್ಥಿಕ ಅಪರಾಧಿಗಳು, ಕಾಳಸಂತೆಕೋರರು ಹಾಗೂ ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ಕಪ್ಪು ಹಣವನ್ನು ಬಿಳಿ ಮಾಡುವ ಉದ್ದೇಶದಿಂದ ಪವಿತ್ರ ಕೊಡವ ಲ್ಯಾಂಡ್ ನ್ನು ಬೃಹತ್ ಪ್ರಮಾಣದಲ್ಲಿ ಭೂಪರಿವರ್ತನೆ ಮಾಡುತ್ತಿದ್ದು, ಇದು ಮುಂದೊಂದು ದಿನ ಮೂಲನಿವಾಸಿ ಆದಿಮಸಂಜಾತ ಕೊಡವರ ಅಸ್ತಿತ್ವಕ್ಕೆ ದಕ್ಕೆ ಉಂಟು ಮಾಡಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಚೆಟ್ಟಳ್ಳಿ ಪಟ್ಟಣದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕೊಡವರು ಅತ್ಯಂತ ಸೂಕ್ಷö್ಮ ಸಮುದಾಯಕ್ಕೆ ಸೇರಿದವರಾಗಿದ್ದು, ಚಿಕ್ಕ ಪ್ರದೇಶದಲ್ಲಿ ಪ್ರಕೃತಿಯ ಆರಾಧನೆಯೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಇಂದು ಈ ಪವಿತ್ರ ಕೊಡವ ಪ್ರದೇಶದ ಮೇಲೆ ಆರ್ಥಿಕ ಅಪರಾಧಿಗಳು, ಕಾಳಸಂತೆಕೋರರು, ಕಪ್ಪು ಹಣ ಹೊಂದಿರುವವರು, ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು, ರೆಸಾರ್ಟ್ ಧಣಿಗಳು ಹಾಗೂ ಆಂಧ್ರ ಪ್ರದೇಶದ ಸಾಫ್ಟ್ ಮನಿ ಫಲಾನುಭವಿಗಳು ದೃಷ್ಟಿ ಬೀರಿದ್ದಾರೆ. ಬೃಹತ್ ಮಟ್ಟದಲ್ಲಿ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಾಡುತ್ತಿದ್ದು, ಕೊಡವ ಲ್ಯಾಂಡ್ ಹಾಗೂ ಕೊಡವರ ಆರಧಾನೆಯ ಪ್ರಕೃತಿ ಆತಂಕದೆಡೆಗೆ ಸಾಗುತ್ತಿದೆ. ಇವುಗಳು ನಾಶವಾದರೆ ಆದಿಮಸಂಜಾತ ಕೊಡವರು ಕೂಡ ನಾಶವಾದಂತೆ ಎನ್ನುವುದನ್ನು ಕೊಡವರು ಅರ್ಥ ಮಾಡಿಕೊಳ್ಳಬೇಕೆಂದು ನಾಚಪ್ಪ ಹೇಳಿದರು.
ವಿಶ್ವದಾದ್ಯಂತ ಇರುವ ಆರ್ಥಿಕ ಅಪರಾಧಿಗಳು, ಕಾಳಸಂತೆಕೋರರು ಹಾಗೂ ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ಕಪ್ಪು ಹಣವನ್ನು ಬಿಳಿ ಮಾಡಲು ಕೊಡವ ಲ್ಯಾಂಡ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ರೆಸಾರ್ಟ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯದಿದ್ದರೂ ಕಾಫಿ ತೋಟಗಳ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಾಡಲಾಗುತ್ತಿದೆ. ನಷ್ಟ ತೋರಿಸುವುದಕ್ಕಾಗಿ ರೆಸಾರ್ಟ್ಗಳನ್ನು ನಿರ್ಮಿಸುತ್ತಿದ್ದು, ಕಪ್ಪು ಹಣವನ್ನು ಚಲಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಕ್ರಮ ದಂಧೆಕೋರ ಬಂಡವಾಳಶಾಹಿ ಕಂಪೆನಿಗಳು ಕಾನೂನು ದುರುಪಯೋಗ ಪಡಿಸಿಕೊಂಡು ರಾತೋರಾತ್ರಿ ಪ್ರಭಾವ ಬೀರಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಜಮೀನನ್ನು ಒಟ್ಟಾಗಿ ಖರೀದಿಸದೆ ಬಿಡಿ ಬಿಡಿಯಾಗಿ ಬೇನಾಮಿ ಹೆಸರಿನಲ್ಲಿ ಖರೀದಿಸಿ ನಂತರ ಭೂಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ.
ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್ ಗಳಿಂದ ಸುಲಭವಾಗಿ ಸಾಲ ಪಡೆಯುವ ಬಂಡವಾಳಶಾಹಿಗಳು ರೆಸಾರ್ಟ್, ವಿಲ್ಲಾಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ಸ್ಥಳೀಯರು ಕೇವಲ ಸ್ವಂತ ಮನೆ ಕಟ್ಟಲು ಅನುಮತಿಗಾಗಿ ಕಚೇರಿಯಿಂದ ಕಚೇರಿಗೆ ವರ್ಷ ಗಟ್ಟಲೆ ಅಲೆಯಬೇಕಾಗಿದೆ. ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ ಎಂದು ನಾಚಪ್ಪ ದೂರಿದರು.
ಜಿಲ್ಲೆಯ ಇತರೆಡೆಯಂತೆ ಕಕ್ಕಬ್ಬೆ ನಾಲಡಿ ಪೂಮಾಲೆ ಎಸ್ಟೇಟ್ ನ 300 ಎಕರೆ ಜಾಗವನ್ನು ಭೂಪರಿವರ್ತನೆ ಮಾಡಲು ಹುನ್ನಾರ ನಡೆದಿದೆ. ಜನರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರೂ ದೆಹಲಿ ಮತ್ತು ಮುಂಬೈ ಭಾಗದ ರಾಜಕೀಯ ಸಂಕುಲಗಳು ಭೂಮಾಫಿ ಯಾದ ಪರವಾಗಿ ರೆಸಾರ್ಟ್ ನಿರ್ಮಾಣದ ಅನುಮತಿಗೆ ಪ್ರಭಾವ ಬೀರುತ್ತಿದ್ದಾರೆ. ಮರಂದೋಡು ಗ್ರಾಮದ ಮೇರಿಯಂಡ ಅಂಗಡಿ ಪ್ರದೇಶದಲ್ಲಿ ಭತ್ತದ ಗದ್ದೆ ಮತ್ತು ಪರ್ವತ ಕೊರೆದು ಟೌನ್ ಶಿಪ್ ಗಾಗಿ ಭೂಪರಿವರ್ತನೆಯಾ ಗುತ್ತಿದ್ದು, ಕೊಡವ ಲ್ಯಾಂಡ್ ನ ಕಾವೇರಿ ಒಡಲು ನಾಶವಾಗುತ್ತಿದೆ. ವ್ಯಕ್ತಿಯೊಬ್ಬರು ಒಂದು ಸಾವಿರ ಮರ ಕತ್ತರಿಸುವ ಅನುಮತಿಯಲ್ಲಿ ಮೂರು ಸಾವಿರ ಬೀಟೆ ಮರಗಳನ್ನು ಹನನ ಮಾಡಿದ್ದಾರೆ ಎಂದು ಆರೋಪಿಸಿದರು.
ಭೂಮಾಫಿಯಾಗಳು ಹಾಗೂ ರಾಜಕೀಯ ಬೆಂಬಲಿತರು ಕೊಡಗಿನ ಕಾವೇರಿ ಜಲಾನಯನ ಪ್ರದೇಶದ ಭೂಮಿಗಳನ್ನು ದೊಡ್ಡ ಮಟ್ಟದಲ್ಲಿ ಖರೀದಿಸುತ್ತಿದ್ದು, ಕಪ್ಪು ಹಣದ ಚಲಾವಣೆಯಾಗುತ್ತಿದೆ. ಬೃಹತ್ ಕಾಫಿ ತೋಟಗಳ ಖರೀದಿಯ ನಂತರ ಅಕ್ಕಪಕ್ಕದ ಸಣ್ಣ ಹಿಡುವಳಿದಾರರ ಭೂಮಿಯನ್ನು ಹಣದ ಆಮಿಷವೊಡ್ಡಿ ಕಬಳಿಸಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲೂ ಆಂಧ್ರದ “ಸಾಫ್ಟ್ ಮನಿ” ಹೆಸರಿನ ಬಡ್ಡಿ ರಹಿತ ಸಾಲದ ಹಣ ಬಳಕೆಯಾಗುತ್ತಿದ್ದು, ದೊಡ್ಡ ಪ್ರಮಾಣದ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ. ಪವಿತ್ರ ಕೊಡವ ಲ್ಯಾಂಡ್ ನಲ್ಲಿ ನಿತ್ಯ ಪ್ರವಾಸಿಗರಮೋಜು ಮಸ್ತಿ, ದೌರ್ಜನ್ಯ ನಡೆಯುತ್ತಿದೆ. ಆದಾಯ ಕ್ರೋಢಿಕರಣಕ್ಕಾಗಿ ಸರ್ಕಾರ ಪ್ರವಾಸೋದ್ಯಮದ ಹೆಸರಿನಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಂತಹ ಪ್ರಕೃತಿಗೆ ವಿರುದ್ಧವಾದ ಪ್ರಕ್ರಿಯೆಗಳಿಗೆ ಅವಕಾಶ ಹಾಗೂ ಅನುಕೂಲ ಕಲ್ಪಿಸುತ್ತಿದೆ. ಇದರ ಪರಿಣಾಮ ಪ್ರವಾಸಿಗರಿಂದಾಗಿ ಮೂಲನಿವಾಸಿಗಳಿಗೆ ರಕ್ಷಣೆ ಮತ್ತು ನೆಮ್ಮದಿ ಇಲ್ಲದಾಗಿದೆ. ಪ್ರವಾಸಿಗರ ದೌರ್ಜನ್ಯಕ್ಕೆ ಸಂಬಪಟ್ಟ ಇಲಾಖೆಗಳು ಕಡಿವಾಣ ಹಾಕಬೇಕು. ತಪ್ಪಿದಲ್ಲಿ ಸ್ಥಳೀಯರಿಗೆ ಉಳಿಗಾಲವಿಲ್ಲದಂತ್ತಾಗುತ್ತದೆ ಎಂದು ನಾಚಪ್ಪ ಆರೋಪಿಸಿದರು.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ರೆಸಾರ್ಟ್ಗಳು, ದೈತ್ಯಾಕಾರದ ವಿಲ್ಲಾಗಳು, ಲೇಔಟ್ ಗಳು, ಮನೆಗಳು ಟೌನ್ ಶಿಪ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಿಜ್ಯ ಉದ್ದೇಶದ ಯೋಜನೆಗಳು ತಯಾರಾಗುತ್ತಿದೆ. ಇದು ಪವಿತ್ರ ಕೊಡವ ಲ್ಯಾಂಡ್ ನ ನಾಶಕ್ಕೆ ಕಾರಣವಾಗಬಹುದು.
ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಕಾಫಿ ತೋಟವನ್ನು ಸಂಪೂರ್ಣವಾಗಿ ಖರೀದಿಸಿ ನಿವೇಶನಗಳನ್ನಾಗಿ ಮಾರಾಟ ಮಾಡಿದ ನಂತರ ಭೂಪರಿರ್ತನೆಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಇಡೀ ಕಾಫಿ ತೋಟದ ಭೂಪರಿವರ್ತನೆಗೆ ಮುಂದಾದರೆ ಕಾನೂನಿನ ಅಡ್ಡಿ ಮಾತ್ರವಲ್ಲ ಹೋರಾಟಗಳು ನಡೆಯುತ್ತವೆ ಎನ್ನುವ ಆತಂಕ ಭೂಮಾಪಿಯಾಗಳಿಗಿದೆ.
ಸರ್ಕಾರಗಳು ಡಾ.ಸ್ವಾಮಿನಾಥನ್ ಸಮಿತಿಯ ವರದಿಯನ್ನು ಉಲ್ಲಂಘಿಸಿವೆ. ಸ್ವಾಮಿನಾಥನ್ ತಮ್ಮ ವರದಿಯಲ್ಲಿ ಕೃಷಿಭೂಮಿಯನ್ನು ಹಾಗೆಯೇ ಉಳಿಸಿಕೊಳ್ಳಲು ಶಿಫಾರಸ್ಸು ಮಾಡಿದ್ದಾರೆ. ಲಭ್ಯವಿರುವ ಕೃಷಿಭೂಮಿಯ ಪ್ರಮಾಣ ಕಡಿಮೆಯಾದಂತೆ ಗ್ರಾಹಕರಿಗೆ ಲಭ್ಯವಿರುವ ಆಹಾರದ ಗುಣಮಟ್ಟ ಕಡಿಮೆಯಾಗುತ್ತದೆ. ಇದು ಆರ್ಥಿಕತೆಗೆ ಮಾತ್ರವಲ್ಲದೆ ಆರೋಗ್ಯದ ಮೇಲೆ ಹಾನಿ ಮಾಡುತ್ತದೆ. ಆರ್ಟಿಕಲ್ 51(ಎ), 51ಎ (ಎಫ್) – ನಮ್ಮ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಮೌಲ್ಯೀಕರಿಸಲು ಮತ್ತು ಸಂರಕ್ಷಿಸಲು, 51ಎ(ಜಿ)-ಕಾಡುಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡAತೆ ನೈಸರ್ಗಿಕ ಆರ್ಥಿಕತೆಯನ್ನು ಮೌಲ್ಯೀಕರಿಸಲು, ರಕ್ಷಿಸಲು, ಸುಧಾರಿಸಲು ಮತ್ತು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಲು, 51ಎ(ಎನ್)-ವೈಜ್ಞಾನಿಕ ಮನೋಭಾವ, ಮಾನವತಾವಾದ, ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಕುಟ್ಟ-ಶ್ರೀಮಂಗಲದಲ್ಲಿ ಉದ್ದೇಶಿತ ಪಟ್ಟಣಗಳು ಮತ್ತು ಆರ್ಥಿಕ ಕಾರಿಡಾರ್‌ಗಳಿಗಾಗಿ ಭೂಮಿಯನ್ನು ಜೂಜಾಟದ ರೀತಿಯಲ್ಲಿ ಖರೀದಿಸಲಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೆ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ ಎಂದು ನಾಚಪ್ಪ ಆರೋಪಿಸಿದರು.
ಆದ್ದರಿಂದ ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವೆಂದು ತಿಳಿಸಿದರು.
ನಮ್ಮ ಅನುವಂಶಿಕ ಭೂಮಿಯನ್ನು ಉಳಿಸಿಕೊಳ್ಳಲು, ಮಾತೃಭೂಮಿ, ಶಾಶ್ವತವಾದ ದೀರ್ಘಕಾಲಿಕ ಜಲಸಂಪನ್ಮೂಲಗಳು, ನಯನ ಮನೋಹರ ಪರಿಸರ, ಭೂಗೋಳವನ್ನು ನೈಸರ್ಗಿಕವಾಗಿ ವಿಹಂಗಮ ಪರ್ವತಗಳು, ಬೆಟ್ಟಗಳು, ನಿತ್ಯಹರಿದ್ವರ್ಣದ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಜೈವಿಕ ವೈವಿಧ್ಯತೆ, ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಜಾನಪದ ಪರಂಪರೆ ಮತ್ತು ಭೂಮಿಯೊಂದಿಗೆ ಬೆಸೆದುಕೊಂಡಿರುವ ಕೊಡವರ ಯೋಧರ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಈ ಮಣ್ಣಿನಲ್ಲಿ ನಮ್ಮ ಐತಿಹಾಸಿಕ ನಿರಂತರತೆಗಾಗಿ ಸ್ವಯಂ-ಆಡಳಿತವನ್ನು ಸಂವಿಧಾನದ ವಿಧಿ 244, 371 ಆರ್/ಡಬ್ಲ್ಯೂ 6 ಮತ್ತು 8ನೇ ಶೆಡ್ಯೂಲ್ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳು ವಿಶ್ವ ರಾಷ್ಟ್ರ ಸಂಸ್ಥೆ ಹೊರಡಿಸಿರುವ ಆದಿಮಸಂಜಾತ ಜನಾಂಗದ ಹಕ್ಕುಗಳ ಅಂತರಾಷ್ಟ್ರೀಯ ಕಾನೂನಿನಂತೆ ಜಾರಿಯಾಗುವ ಅಗತ್ಯವಿದೆ ಎಂದರು.
ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ನಾಚಪ್ಪ ಹೇಳಿದರು.
ಜು.15ರಂದು ಪೊನ್ನಂಪೇಟೆ ಮತ್ತು ಜುಲೈ 24ರಂದು ವಿರಾಜಪೇಟೆಯಲ್ಲಿ ಮಾನವಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಇದೇ ಸಂದರ್ಭ ತಿಳಿಸಿದರು. ಪೊರಿಮಂಡ ಧನು, ಪಳಗಂಡ ಗೀತಾ ಸುಬ್ಬಯ್ಯ, ಮುಳ್ಳಂಡ ಸುಶೀಲಾ ತಮ್ಮಯ್ಯ, ಚೋಳಪಂಡ ಗಂಗಮ್ಮ ಕಾಳಯ್ಯ, ಕೆಚ್ಚೆಟ್ಟೀರ ರತಿ ಕಾರ್ಯಪ್ಪ, ಅಡಿಕೆರ ಶಾಂತಿ ಜಯ, ಬಲ್ಲಾರಂಡ ಮಲ್ಲಿಗೆ ಚಿಣ್ಣಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಪಳಂಗAಡ ಸುಮಿ ಅಪ್ಪಯ್ಯ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಬಿದ್ದಂಡ ಮಾದಯ್ಯ, ಬಟ್ಟೀರ ಕಾಳಪ್ಪ, ಚೋಳಂಡ ಪೂವಯ್ಯ, ಬಟ್ಟೀರ ಪೂಣಚ್ಚ, ಪೊರಿಮಂಡ ದಿನಮಣಿ, ಮುಳ್ಳಂಡ ರತ್ತು, ಮುಳ್ಳಂಡ ಸನ್ನಿ, ಬಲ್ಲಾರಂಡ ಚಿಣ್ಣಪ್ಪ, ಕೊಕ್ಕೇರ ಮಾದಪ್ಪ, ಬಲ್ಲಾರಂಡ ಅಚ್ಚಯ್ಯ, ಚೋಳಪಂಡ ನಾಣಯ್ಯ, ಕೂಪದಿರ ಸಾಬು, ಪುತ್ತರಿರ ಕರುಣ್ ಕಾಳಯ್ಯ, ಪುತ್ತರಿರ ರಾಬೀನ್, ಪುತ್ತರಿರ ಸುರೇಶ್ ಅಚ್ಚಯ್ಯ, ಕಡೆಮಾಡ ವಿನ್ಸಿ ಅಪ್ಪಯ್ಯ, ಪುತ್ತರಿರ ರವಿ ಮಂದಣ್ಣ, ಪುತ್ತರಿರ ರಾಜೇಶ್ ಮುತ್ತಪ್ಪ, ಪುತ್ತರೀರ ದೇವಿ ದೇವಯ್ಯ, ಐಚೆಟ್ಟಿರ ಪ್ರಮೋದ್, ಕೊಂಗೇಟಿರ ರಾಯ್ ಚೆಂಗಪ್ಪ, ಬಟ್ಟೀರ ಮಂದಣ್ಣ, ಬಟ್ಟೀರ ಉತ್ತಯ್ಯ, ಬದ್ಲೇರ ಕೌಶಿಕ್, ಬಲ್ಲಾರಂಡ ದೇವಯ್ಯ, ಅಡಿಕೆರ ಜಯ ಮುತ್ತಪ್ಪ, ಪೊರಿಮಂಡ ಲೋಕ, ಕಾಣತ್ತಂಡ ಸಾಸು ಚರ್ಮಣ, ಕೆಚೆಟ್ಟೀರ ನಿಶಾನ್ ಪೂವಯ್ಯ, ಮುಳ್ಳಂಡ ಪೂವಯ್ಯ, ಚೇಟ್ರಂಡ ಕೌಶಿಕ್ ಕಾರ್ಯಪ್ಪ, ಬಟ್ಟೀರ ಗಿರೀಶ್, ಕೊಂಗೆಟ್ಟೀರ ರಾಣಾ ಪೂವಯ್ಯ, ಮೂಕೊಂಡ ದಿಲೀಪ್, ಮಚ್ಚಂಡ ಕಟ್ಟಿ, ಬಟ್ಟೀರ ರಾಜ ಉತ್ತಯ್ಯ, ಬಲ್ಲಾರಂಡ ನಾಣಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೃಹತ್ ಭೂಪರಿವರ್ತನೆ, ಭೂವಿಲೇವಾರಿಯ ವಿರುದ್ಧ ಮತ್ತು ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು.
::: ಕೊಡವರಿಗೊಬ್ಬನೇ ನಾಚಪ್ಪ :::
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಳೆದ 35ವರ್ಷಗಳಿಂದ ಕೊಡಗಿನ ಹಾಗೂ ಕೊಡವ ಜನಾಂಗದ ಏಳಿಗೆಗಾಗಿ ಹಗಲಿರುಳು ಹೋರಾಡಿದೆ. ಹೈಕೋರ್ಟ್ ನಿಂದ ಸುಪ್ರೀಮ್ ಕೋರ್ಟ್ವರೆಗೆ ನ್ಯಾಯಯುತ ಹೋರಾಟ ನಡೆಸಿ ಜಯ ಸಿಕ್ಕಿದೆ. ಹಿರಿಯ ಸಾಹಿತಿ ಬಿ.ಡಿ.ಗಣಪತಿಯವರು ಬರೆದ “ಜಗತ್ತಿಗೊಂದೇ ಕೊಡಗು” ಎಂಬ ಪುಸ್ತಕದ ಶೀರ್ಷಿಕೆಯಂತೆ ಕೊಡವರಿಗೊಬ್ಬನೇ ಎನ್.ಯು.ನಾಚಪ್ಪ ಎಂದು ಹಿರಿಯ ರಾಜಕೀಯ ಮುತ್ಸದ್ಧಿ ಪೊರಿಮಂಡ ದಿನಮಣಿ ಪೂವಯ್ಯ ಇದೇ ಸಂದರ್ಭ ತಿಳಿಸಿದರು.