ಮಡಿಕೇರಿ ಜು.6 NEWS DESK : ವಿರಾಜಪೇಟೆ-ಭಾಗಮಂಡಲ-ಮಡಿಕೇರಿ ಮಾರ್ಗದ ಬಸ್ ಸಂಚಾರಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ ಅವರು ಶನಿವಾರ ಚಾಲನೆ ನೀಡಿದರು. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ ಶಾಸಕರು ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನಿಸಿ ವಿರಾಜಪೇಟೆ-ಭಾಗಮಂಡಲ-ಮಡಿಕೇರಿ ಮಾರ್ಗದಲ್ಲಿ ಬಸ್ ಕಲ್ಪಿಸಲಾಗಿದೆ ಎಂದು ಪೊನ್ನಣ್ಣ ಅವರು ಮಾಹಿತಿ ನೀಡಿದರು. ಬೆಂಗಳೂರಿನಿಂದ ಪ್ರತಿನಿತ್ಯ ರಾತ್ರಿ 11.15 ಗಂಟೆಗೆ ಬಸ್ ಹೊರಡಲಿದ್ದು, ವಿರಾಜಪೇಟೆಗೆ ಆಗಮಿಸಿ ಬೆಳಗ್ಗೆ 7.15 ಗಂಟೆಗೆ ಭಾಗಮಂಡಲಕ್ಕೆ ಆಗಮಿಸಲಿದೆ. ಬಳಿಕ ಬೆಳಗ್ಗೆ 7.30 ಗಂಟೆಗೆ ಭಾಗಮಂಡಲದಿಂದ ಹೊರಟು ಬೆಳಗ್ಗೆ 9 ಗಂಟೆಗೆ ಮಡಿಕೇರಿಗೆ ತಲುಪಲಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಮಾಹಿತಿ ನೀಡಿದರು. ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಎಚ್.ಇ.ವೀರಭದ್ರ ಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಇತರರು ಇದ್ದರು.