ಮಡಿಕೇರಿ ಜು.10 NEWS DESK : ವೀರ ಯೋಧರ ನಾಡು ಕೊಡಗು. ಎಷ್ಟೋ ಆಟಗಾರರನ್ನು ಭಾರತಕ್ಕೆ ಆಡಿಸಿದ ಕೀರ್ತಿ ಕೊಡಗಿಗಿದೆ. ಅದೇ ರೀತಿ ಸೈನ್ಯದಲ್ಲಿ ಕೊಡಗಿನ ವೀರ ಯೋಧರು ಹಾಕಿಯನ್ನು ಆಡಿದ್ದಾರೆ. ಅಂತಹವರಲ್ಲಿ ಪ್ರಥಮ ಗೋಲ್ ಕೀಪರ್ ಆಗಿ ಸರ್ವಿಸಸ್ ಆಡಿದ ಹಾಕಿ ಆಟಗಾರನೇ ರಘು ತಿಮ್ಮಯ್ಯ.
ಚೌಕಿಮನೆ ಪುಟ್ಟಪ್ಪ ಹಾಗೂ ಮಾಚಮ್ಮ ದಂಪತಿಯರ ಪುತ್ರನಾಗಿ ರಘು ತಿಮ್ಮಯ್ಯನವರು 15 ಮಾರ್ಚ್ 1959ರಂದು ಜಂಬೂರಿನ ಮಾದಾಪುರದಲ್ಲಿ ಜನಿಸಿದರು.
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾದಾಪುರದಲ್ಲಿಯೇ ಮುಗಿಸಿ, ಪ್ರೌಢ ಶಿಕ್ಷಣವನ್ನು ಚೆನ್ನಮ್ಮ ಜೂನಿಯರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.
A.S.C ಗೆ ಸೇರ್ಪಡೆ : ಬಾಲ್ಯದಿಂದಲೇ ಫುಟ್ಬಾಲ್ ನಲ್ಲಿ ಆಸಕ್ತಿ ಇದ್ದಿದ್ದರಿಂದ ಗೋಲ್ ಕೀಪರ್ ಆಗಲು ದಾರಿಯು ಸುಗಮವಾಯಿತು. ಇವರು 1979ರಲ್ಲಿ ಆರ್ಮಿ ಸರ್ವಿಸಸ್ ಕೋರ್(A.S.C) ಗೆ ಪಾದರ್ಪಣೆ ಮಾಡಿದರು. ಪ್ರಥಮವಾಗಿ A.S.C ಪರ ಬೆಂಗಳೂರಿಗೆ, ತದನಂತರ ಜಲಂಧರ್ ಗೆ ಆಡಿದರು.
ಪಶ್ಚಿಮ ಕಮಾಂಡ್ : A.S.C ಗೆ ಆಡುವಾಗ ಇವರ ಗೋಲ್ ಕೀಪಿಂಗ್ ನ ಚಾತುರ್ಯತೆಯಿಂದ ಪಶ್ಚಿಮ ಕಮಾಂಡ್ ಗೆ 6 ಬಾರಿ ಆಯ್ಕೆಯಾದರು. ಇದು ಸರ್ವಿಸಸ್ ಆಡಲು ದಾರಿ ಮಾಡಿಕೊಟ್ಟಿತು.
ಸರ್ವಿಸಸ್ ಗೆ ಪದಾರ್ಪಣೆ : ಭಾರತಕ್ಕೆ ಹಾಕಿ ಆಡುವುದು ಎಷ್ಟು ಕಷ್ಟವೋ, ಅದೇ ರೀತಿ ಸೈನ್ಯದಲ್ಲಿ ಗೋಲ್ ಕೀಪರ್ ಆಗುವುದು ಅಷ್ಟೇ ಕಷ್ಟ. ಏಕೆಂದರೆ ಅಲ್ಲಿನ ಕಠಿಣ ಅಭ್ಯಾಸ ಹಾಗೂ ಚೆಂಡಿನ ಹೊಡೆತಗಳು ಬಹಳಷ್ಟು ಬಿರುಸಾಗಿರುತ್ತವೆ. ಇಂತಹ ಕಠಿಣ ಅಭ್ಯಾಸದ ಫಲದಿಂದ ರಘು ತಿಮ್ಮಯ್ಯನವರು ಕೊಡಗಿನಿಂದ ಪ್ರಥಮ ಬಾರಿಗೆ ಸರ್ವಿಸಸ್ ಆಡಿದ ಗೋಲ್ ಕೀಪರ್ ಆಗಿ ಹೊರಹೊಮ್ಮಿದರು. 1989-90ರಲ್ಲಿ ಜಮ್ಮುವಿನಲ್ಲಿ ನಡೆದ ರಂಗಸ್ವಾಮಿ ಕಪ್ ನಲ್ಲಿ ಆಡಿದರು. 1990-95 ವರೆಗೆ ಸರ್ವಿಸಸ್ ನ ಗೋಲ್ ಕೀಪರ್ ಆಗಿದ್ದರು. 1995ರಲ್ಲಿ ಬಾಂಬೆ ನ್ಯಾಷನಲ್ಸ್ ನಲ್ಲಿ ಭಾಗವಹಿಸಿದ್ದರು. ಇವರ ಚುರುಕುತನ ಹಾಗೂ ಆಡುವ ಶೈಲಿ ಎಲ್ಲರಿಗೂ ಬಹಳ ಹಿಡಿಸುತ್ತಿತ್ತು.
ಭಾರತದ ಆಯ್ಕೆ ಶಿಬಿರ : ಇವರ ಅದ್ಭುತ ಶೈಲಿಯ ಗೋಲ್ ಕೀಪಿಂಗ್ ನಿಂದ ಇವರು 1992ರಲ್ಲಿ ಪಾಟಿಯಾಲದಲ್ಲಿ ನಡೆದ ಭಾರತ ಆಯ್ಕೆ ಶಿಬಿರಕ್ಕೆ ಆಯ್ಕೆಯಾದರು.
ಅತ್ಯುತ್ತಮ ಗೋಲ್ ಕೀಪರ್ : ನೆಹರು ಗೋಲ್ಡ್ ಕಪ್, ಶಾಸ್ತ್ರಿ ಗೋಲ್ಡ್ ಕಪ್ ಹಾಗು ಅಮೃತ್ ಸರದಲ್ಲಿ ನಡೆದ ಗೋಲ್ಡ್ ಕಪ್ ನಲ್ಲಿ ಅತ್ಯುತ್ತಮ ಗೊಲ್ ಕೀಪರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಪೆನಾಲ್ಟಿ ಸ್ಟ್ರೋಕ್ ತಡೆಯುವುದರಲ್ಲಿ ಬಹಳಷ್ಟು ನೈಪುಣ್ಯತೆ ಹೊಂದಿದ್ದರು.
ಆರ್ಮಿ ರೆಡ್ : ಮೂರು ವರ್ಷಗಳ ಕಾಲ ಆರ್ಮಿ ರೆಡ್ ಗೆ ಆಡಿದರು. ಕಲ್ಕತ್ತಾದಲ್ಲಿ ಇವರ ನಾಯಕತ್ವದಲ್ಲಿ ನಡೆದ ಬೇಟನ್ ಕಪ್ ನಲ್ಲಿ ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಪಡೆದರು. ಭಾರತದಾದ್ಯಂತ ಬಹಳಷ್ಟು ಪಂದ್ಯಾವಳಿಗಳನ್ನು ಆಡಿದ ಕೀರ್ತಿ ಇವರದು.
ಮಾನ್ಯುಯಲ್ ಫೆಡ್ರಿಕ್ಸ್: ಭಾರತ ಕಂಡ ಅದ್ಭುತ ಒಲಂಪಿಯನ್ ಗೋಲ್ ಕೀಪರ್ ಆದ ಮಾನ್ಯುಯಲ್ ಫೆಡ್ರಿಕ್ಸ್ ಅವರು ನಿವೃತ್ತಿ ಹೊಂದಿದ ಬಳಿಕ ಊಂಐ ಗೆ ಸೇರ್ಪಡೆಗೊಂಡರು. A.S.C ಬೆಂಗಳೂರಿನಲ್ಲಿ ತಿಮ್ಮಯ್ಯ ಅವರಿಗೆ ಗೋಲ್ ಕೀಪಿಂಗ್ ನ ಬಗ್ಗೆ ತರಬೇತಿ ನೀಡಿದರು. ಇವರ ಯಶಸ್ವಿಗೆ ಫೆಡ್ರಿಕ್ಸ್ ಅವರೇ ಕಾರಣ ಎಂದು ತಿಮ್ಮಯ್ಯನವರು ಸದಾ ನೆನೆಯುತ್ತಾರೆ.
ಸರ್ವಿಸಸ್ ಗೋಲ್ ಕೀಪರ್ ಗಳು : ಭಾರತ ಹಾಕಿ ತಂಡಕ್ಕೆ ಬಹಳಷ್ಟು ಸರ್ವಿಸಸ್ ನಿಂದ ಆಡಿದ ಗೋಲ್ ಕೀಪರ್ ಗಳು ಒಲಂಪಿಕ್ ಹಾಗೂ ವಿಶ್ವಕಪ್ ನಲ್ಲಿ ಪದಕಗಳನ್ನು ಗೆದ್ದು ಕೊಟ್ಟಿದ್ದಾರೆ. ಹೆಸರಿಗೆ ಶಂಕರ್ ಲಕ್ಷ್ಮಣ್ 3 ಒಲಂಪಿಕ್ಸ್, ಲೆಸ್ಲಿ ಫರ್ನಾಂಡಿಸ್ ವಿಶ್ವಕಪ್, ಎಲೆನ್ ಶೋ ಫೀಲ್ಡ್ ಒಲಂಪಿಕ್ಸ್ ಇವರೆಲ್ಲ ಚಿನ್ನದ ಪದಕ ಗೆದ್ದ ಸರ್ವಿಸಸ್ ನ ಅತ್ಯುತ್ತಮ ಗೋಲ್ ಕೀಪರ್ ಗಳು. ಅಲ್ಲದೆ ಡಿಕ್ರೂಸ್, ರೋಮಿಯೋ ಜೇಮ್ಸ್ ಹಾಗು ರಮೇಶ್ ಚಂದ್ ಇವರುಗಳು ಕೂಡ ಅತ್ಯುತ್ತಮ ಗೋಲ್ ಕೀಪರ್ ಆಗಿ ಸೇವೆ ಸಲ್ಲಿಸಿದರು. ಇವರಂತೆ ತಿಮ್ಮಯ್ಯ ಕೂಡ ಭಾರತದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದರು.
2001ರಲ್ಲಿ ಇವರು ಸುಬೇದಾರ್ ಆಗಿ ನಿವೃತ್ತಿ ಪಡೆದರು.
ಇವರ ಪತ್ನಿ ಜಯಲಕ್ಷ್ಮಿ, ಮಕ್ಕಳು ಕಿರಣ್ ಕಾರ್ಯಪ್ಪ ಹಾಗೂ ಶಿಲ್ಪ. ಪ್ರಸ್ತುತ ಇವರು ತಮ್ಮ ಪತ್ನಿಯೊಂದಿಗೆ ಮಕ್ಕಂದೂರಿನಲ್ಲಿ ವಾಸಿಸುತ್ತಿದ್ದಾರೆ.
ರಘು ತಿಮ್ಮಯ್ಯ ಅವರ ವ್ಯಕ್ತಿತ್ವ : ಇವರು ಹಾಕಿಯಲ್ಲಿ ಬಹಳಷ್ಟು ಹೆಸರು ಮಾಡಿ, ಸೈನ್ಯದಿಂದ ನಿವೃತ್ತಿ ಹೊಂದಿದ ಬಳಿಕ ಕೊಡಗಿನಲ್ಲಿ 2 ವರ್ಷಗಳ ಕಾಲ ವಾಂಡರರ್ಸ್ ಹಾಗು ಮೂರ್ನಾಡು ತಂಡಕ್ಕೆ ಹಾಕಿಯನ್ನು ಆಡಿದರು. ನಂತರ ಯುವ ಆಟಗಾರರಿಗೆ ದಾರಿ ಮಾಡಿ ಕೊಟ್ಟು, ಇವರು ಮಕ್ಕಂದೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ 2ನೇ ಬಾರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಕೊಡಗು ಗೌಡ ಮಾಜಿ ಸೈನಿಕರ ಒಕ್ಕೂಟದ ಉಪಾಧ್ಯಕ್ಷರು ಹೌದು. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಎಲ್ಲಾ ಕ್ರೀಡಾ ಅಭಿಮಾನಿಗಳ ಪರವಾಗಿ ಹಾರೈಸುತ್ತೇನೆ.
ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ