ಮಡಿಕೇರಿ ಜು.10 NEWS DESK : ಮಣ್ಣಿನ ರಕ್ಷಣೆಯ ಮೂಲಕ ಉತ್ತಮ ಗುಣಮಟ್ಟದ ಅಭಿವೃದ್ಧಿಯೊಂದಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯುವಲ್ಲಿ ಸುಸ್ಥಿರ ಕೃಷಿಪದ್ಧತಿಯನ್ನು ಕಾಫಿ ಉತ್ಪಾದನೆಯಲ್ಲಿ ಅಳವಡಿಕೊಳ್ಳುವ ಮೂಲಕ ಅಭಿವೃದ್ಧಿ ಪಡಿಸಬೇಕೆಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಎಸ್.ಆಲೂರ ತಿಳಿಸಿದರು.
ಚೆಟ್ಟಳ್ಳಿಯ ಕಾಫಿ ಉಪ ಸಂಶೋಧನಾ ಕೇಂದ್ರದಲ್ಲಿ ಕಾಫಿಮಂಡಳಿ ಹಾಗೂ ಸುಡಾನ್ ಕಾಫಿ ಪೈ.ಲಿ. ಸಹಯೋಗದಲ್ಲಿ ಆಯೋಜಿಸಿದ ಕಾಫಿ ಅಭಿವೃದ್ಧಿ ಯೋಜನೆ ಅಡಿ ಕೊಡಗಿನ ಪ್ರದೇಶದ ಕಾಫಿ ಬೆಳೆಗಾರರಿಗೆ ಸುಸ್ಥಿರ ಕಾಫಿ ಉತ್ಪಾದನೆಗೆ ಉತ್ತಮ ಕೃಷಿಪದ್ಧತಿಗಳ ಸಾಮಥ್ರ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಣ್ಣ ಹಾಗೂ ಅತೀ ಸಣ್ಣ ಬೆಳೆಗಾರರು ಒಟ್ಟಾಗಿ ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ ನೂತನ ವೈಜ್ಞಾನಿಕ ಕ್ರಮವನ್ನು ಅನುಸರಿಸಲು ಸಾಧ್ಯ ಎಂದರು.
ಕಾಫಿ ಮಂಡಳಿಯ ಸದಸ್ಯರಾದ ಟಿ.ಕೆ.ಕಿಶೋರ್ ಕುಮಾರ್ ಮಾತನಾಡಿ, ಕಾಫಿ ತೋಟಗಳಲ್ಲಿ ಉತ್ತಮ ತಳಿಯ ಗಿಡಗಳನ್ನು ಬೆಳೆಸುವ ಮೂಲಕ ಹೆಚ್ಚಿನ ಇಳಿವರಿ ಸಾಧ್ಯ, ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದಲ್ಲಿ ಉತ್ತಮ ಇಳುವರಿ ನೀಡುವ ಕಾಫಿ ಗಿಡಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಬೆಳೆಗಾರರಿಗೆ ವಿತರಿಸಲಾಗುತ್ತಿದೆ ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿಗೆ ಬೇಡಿಕೆ ಇದ್ದು, ವಿದೇಶದಲ್ಲಿ ಕೃತಕವಾಗಿ ಬೆಳೆಯುವ ಕಾಫಿಗಿಂತ ಕೊಡಗಿನಲ್ಲಿ ನೈಸರ್ಗಿಕವಾಗಿ ಬೆಳೆದ ಕಾಫಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದರು.
ಕಾಫಿಯಲ್ಲಿ ಹೆಚ್ಚಿನ ಚಿಕೋರಿಯ ಬಳಕೆ ಆರೋಗ್ಯಕ್ಕೆ ಹಾನಿಕಾರಕ. ತೋಟಗಳಲ್ಲಿ ಅನಿಯಮಿತ ಕ್ರಿಮಿನಾಶಕಗಳ ಬಳಕೆಯಿಂದ ಗುಣಮಟ್ಟದಲ್ಲಿ ವ್ಯತ್ಯಾಸವಾಗಲಿದೆ. ಕೊಡಗಿನಲ್ಲಿ ಕಾಡಾನೆಗಳು, ಕಾಡೆಮ್ಮೆ ಹಾಗೂ ವಿವಿಧ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಗಾರರು ತೀವ್ರತೊಂದರೆ ಎದುರಿಸುವಂತಾಗಿರುವುದು ಒಂದೆಡೆಯಾದರೆ ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆ ಮತ್ತೊಂದು ಸಮಸ್ಯೆಯಾಗಿದೆ ಎಂದರು.
ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಬೆಳೆಗಾರರು ಕಾಫಿಬೋರ್ಡ್ ಮುಖಾಂತರ ಕಾಫಿಯನ್ನು ಮಾರಾಟ ಮಾಡಬೇಕಿತ್ತು. 1992-93ರಿಂದ ಬೆಳೆಗಾರರು ತಮ್ಮದೇಯಾದ ಬ್ರ್ಯಾಂಡ್ನಡಿ ಉತ್ತಮಗುಣಮಟ್ಟದ ಕಾಫಿಯನ್ನು ಮಾರಾಟ ಮಾಡುವಂತಾಗಿದೆ. ಮುಂದಿನ ದಿನಗಳಲ್ಲಿ ನಾವು ಬೆಳೆಯುವ ಕಾಫಿಗೆ ಬೇಡಿಕೆ ಹೆಚ್ಚಾಗಲಿದ್ದು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವಂತಾಗ ಬೇಕೆಂದರು.
ಕೃಷಿ ಬಳಕೆಗೆ ಬೇಕಾದ ಯಂತ್ರೋಪಕರಣವನ್ನು ಕಾಫಿಮಂಡಳಿ ಕಡಿಮೆ ಖರ್ಚಿನಲ್ಲಿ ನೀಡುವ ಮೂಲಕ ಕಾಫಿ ಕೃಷಿಗೆ ಉತ್ತೇಜನ ನೀಡಬೇಕೆಂದರು.
ಸುಡಾನ್ ಕಾಫಿ ಪೈ.ಲಿ.ನ ವ್ಯವಸ್ಥಾಪಕ ಎ.ಬಿ.ಹರೀಶ್ ಮಾತನಾಡಿ, ಉತ್ತಮ ಗುಣಮಟ್ಟ ಹಾಗೂ ಹೆಚ್ಚಿನ ಇಳುವರಿಯ ಮೂಲಕ ಉತ್ತಮ ಆದಾಯ ಪಡೆಯಲು ಸುಸ್ಥಿರ ಪದ್ಧತಿಯನ್ನು ಅಳವಳಿಕೊಳ್ಳಲು ಕಾಫಿಮಂಡಳಿಯೊಂದಿಗೆ ವಿವಿಧೆಡೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಬಗ್ಗೆ ವಿವರಿಸಿದರು.
ಕಾಫಿ ಮಂಡಳಿಯ ಉಪ ನಿರ್ದೇಶಕ ಡಾ.ಚಂದ್ರಶೇಖರ್ ಮಾತನಾಡಿ, ಕಾಫಿ ಮಂಡಳಿ ಕಳೆದ ಬಾರಿ ವಿವಿಧ ಯೋಜನೆಗೆ 8 ಕೋಟಿಯಷ್ಟು ಹಣ ಬಿಡುಗಡೆಗೊಳಿಸಿತ್ತು. ಈ ಬಾರಿ ವಿವಿಧ ಕೃಷಿಯಂತ್ರೋಪಕರಣ, ಮರುನಾಟಿ, ಕೆರೆ, ಬಾವಿ, ಸ್ಪ್ರಿಂಕ್ಲರ್ ನಂತಹ ನೀರಿನ ವ್ಯವಸ್ಥೆ, ಗುಣಮಟ್ಟ ಸುಧಾರಣೆಗೆ, ಸಾವಯವ ಕೃಷಿಗೆ ಒಟ್ಟು ಸೇರಿ ಕೊಡಗಿಗೆ 17 ಕೋಟಿ ಹಣ ಬಿಡುಗಡೆಗೊಂಡಿದೆ. ಅತೀ ಸಣ್ಣ ಬೆಳೆಗಾರರರಿಂದ ಹಿಡಿದು 25 ಹೆಕ್ಟೇರ್ ವರೆಗಿನ ಎಲ್ಲಾ ಬೆಳೆಗಾರರು ಕಾಫಿಮಂಡಳಿಗೆ ಅರ್ಜಿಸಲಿಸುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದೆಂದು ಡಾ.ಚಂದ್ರಶೇಖರ್ ತಿಳಿಸಿದರು.
ಕಾಫಿ ಮಂಡಳಿ 2047 ವಿವಿಧಯೋಜನೆಗಳ ಮೂಲಕ ಬೆಳೆಗಾರರ 17 ವಿವಿಧ ಸಂಘವನ್ನು ಜಾರಿಗೊಳಿಸಿದೆ. ಕೃಷಿಯಲ್ಲಿ ತೊಡಗಿಸಿಕೊಳ್ಳುವ ಬೆಳೆಗಾರರು ಈ ಸಂಘದ ಸದಸ್ಯರಾಗುವ ಮೂಲಕ ಮಂಡಳಿಗೆ ವಿವಿಧ ಸಲಹೆ, ಸೂಚನೆ, ಬೆಳೆಗಾರರ ಸಮಸ್ಯೆಗಳನ್ನು ನೇರವಾಗಿ ತಿಳಿಸಬಹುದಾಗಿದೆ. ಕಾಫಿ ಮಂಡಳಿಯ ಇಂಡಿಯಾ ಕಾಫಿ ಆಪ್ ಜಾರಿಗೊಂಡಿದ್ದು ಎಲ್ಲಾ ಸವಲತ್ತುಗಳು ಮನೆಬಾಗಿಲುಗೆ ತಲುಪಲಿದೆ ಎಂದರು.
ಸನ್ಮಾನ :: ಕಾರ್ಯಕ್ರಮದಲ್ಲಿ ಡಾ.ಅಶೋಕ್ ಎಸ್ ಆಲೂರ್, ಎ.ಬಿ.ಹರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಂತ್ರಿಕ ಅಧಿವೇಶನ :: ರೋಬಷ್ಟಾ ಕಾಫಿಯಲ್ಲಿ ಸಸ್ಯ ಸಂವರ್ಧನೆ ಹಾಗೂ ಮೇಲು ಕಸಿಯ ಬಗ್ಗೆ ಗೋಣಿಕೊಪ್ಪ ಕಾಫಿ ಮಂಡಳಿಯ ವಿಜ್ಞಾನಿ ಡಾ. ಜೆ.ಚೇತನ್ ಬೆಳೆಗಾರರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕಾಫಿ ಮಂಡಳಿಯ ಉಪನಿರ್ದೇಶಕ ಡಾ.ಕೆ.ಶ್ರೀದೇವಿ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥರಾದ ಡಾ.ರಾಜೇದಿರನ್, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಬಿ.ಪ್ರಭಾಕರ್, ಅಪ್ಪಂಗಳ ಸಂಬಾರ ಮಂಡಳಿಯ ಮುಖ್ಯಸ್ಥ ಡಾ.ಅಂಕೆಗೌಡ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ಮೋಹನ್ದಾಸ್ ಹಾಜರಿದ್ದರು. ಭಾವನಾ ಪ್ರಾರ್ಥಿಸಿದರು, ಕೇಂದ್ರದ ಪ್ರಭಾರ ಉಪನಿರ್ದೇಖಕ ಡಾ.ಮಂಜುನಾಥ್ ರೆಡ್ಡಿ ಸ್ವಾಗತಿಸಿದರು. ವಿಜ್ಞಾನಿ ಎಂ.ಎ.ಸುಚಿತ್ರ ನಿರೂಪಿಸಿರು. ಕೇಂದ್ರದ ತಜ್ಞರಾದ ಡಾ.ಎಸ್.ಎ.ನಡಾಫ್ ಯೋಜನೆಯ ಬಗ್ಗೆ ವಿವರಿಸಿದರು. ತಜ್ಞರಾದ ಡಾ.ನಾಗರಾಜ್ ಗೋಕಾವಿ ವಂದಿಸಿದರು.