ಸುಂಟಿಕೊಪ್ಪ ಜು.11 NEWS DESK : ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಹೇಳಿದರು.
ಕೊಡಗರಹಳ್ಳಿ, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಸಮಾಜದಲ್ಲಿ ಒಬ್ಬ ಮನುಷ್ಯನ ಉನ್ನತೀಕರಣ ಆಗಬೇಕಾದರೆ ಅವನ ಜೀವನದಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ತನ್ನಿಂದಾದ ಸಹಾಯ ಮಾಡಿರುವುದಾಗಿ ತಿಳಿಸಿದರು. ಶಿಕ್ಷಣ ಎಲ್ಲಾ ಮಕ್ಕಳ ಹಕ್ಕು, ಈ ಹಿಂದೆ ನಾನು ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಶಿಕ್ಷಣ ಕಲಿಯಲು ತೊಂದರೆಯಾಗುತ್ತಿತ್ತು, ಆದರೆ ಇಂದಿನ ಮಕ್ಕಳಿಗೆ ಆ ತೊಂದರೆಯಾಗಬಾರದು ಎಂದರು.
ನಾಡು ಪ್ರೌಢಶಾಲೆ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಮಾತನಾಡಿ, ವಿದ್ಯೆ ಬಹಳ ಮುಖ್ಯವಾದದ್ದು. ಈ ವಿದ್ಯೆಯಿಂದ ಏನು ಬೇಕಾದರೂ ಜೀವನದಲ್ಲಿ ಸಾಧಿಸಬಹುದು. ಸೃಜನಶೀಲತೆ, ಸಂಸ್ಕಾರ, ಒಳ್ಳೆಯ ನಡತೆ, ಒಳ್ಳೆಯ ಗುಣಗಳನ್ನು ಬೆಳಸುತ್ತಾರೆ ಎಂದರು.
ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಚಂಗಪ್ಪ ಮಾತನಾಡಿ, ಹಣ ಆಸ್ತಿಯನ್ನು ಸಂಪಾದನೆ ಮಾಡಿದರೆ ಯಾರು ಬೇಕಾದರೂ ಕದಿಯಬಹುದು. ಆದರೆ ವಿದ್ಯೆಯನ್ನು ಕದಿಯೋಕೆ ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಸಾಧನೆ ಬಹಳ ಮುಖ್ಯ ನೀವು ನಿಮ್ಮ ತಂದೆ-ತಾಯಿಯರಿಗೆ ಗೌರವ ಮತ್ತು ವಿದ್ಯೆ ಕಲಿಸಿದ ಗುರುಗಳಿಗೂ ಒಳ್ಳೆಯ ಗೌರವ ತಂದುಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೆ.ಇಂದಿರಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರೌಢಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಕುಟ್ಟಪ್ಪ, ಮುಖಂಡರಾದ ಖಾಸಿಂ ಮಾದಾಪುರ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕ ಶಿವಪ್ಪ ಗುರ್ಕಿ ನಿರೂಪಿಸಿದರು.