ನಾಪೋಕ್ಲು ಜು.20 NEWS DESK : ನಾಪೋಕ್ಲು ವ್ಯಾಪ್ತಿಯ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರೆದ ಕಾರಣ ಕಾವೇರಿ ನದಿಯಲ್ಲಿ ಹರಿವಿನ ಪ್ರಮಾಣ ತೀವ್ರ ಹೆಚ್ಚಚ್ಚಾಗಿ ನದಿ, ತೊರೆ, ಗದ್ದೆ, ತೋಟಗಳು ಜಲವೃತಗೊಂಡಿದೆ. ಕೆಲವು ಕಡೆ ರಸ್ತೆಯ ಮೇಲೆ ಪ್ರವಾಹ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ನಾಪೋಕ್ಲು – ಮೂರ್ನಾಡು ಸಂಪರ್ಕ ರಸ್ತೆಯ ಕಳೆದೆರಡು ದಿನಗಳಿಂದ ಕಾವೇರಿ ಪ್ರವಾಹದಿಂದಾಗಿ ಐದರಿಂದ ಆರು ಅಡಿ ನೀರಿದ್ದು ಕೊಟ್ಟಮುಡಿ ಜಂಕ್ಷನ್ ನಿಂದಲೇ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದೆ. ಈ ಕಾರಣದಿಂದಾಗಿ ಪರ್ಯಾಯ ಸಂಪರ್ಕ ರಸ್ತೆ ಕಲ್ಪಿಸಲಾಗಿತ್ತು. ನಾಪೋಕ್ಲು, ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ವಾಹನಗಳು ಸಂಚರಿಸುತ್ತಿವೆ. ನಾಪೋಕ್ಲು – ಬೆಟಗೇರಿ, ಮಡಿಕೇರಿ ಸಂಪರ್ಕಿಸುವ ರಸ್ತೆಯ ಕೊಟ್ಟಮುಡಿಯಲ್ಲಿ ಕಾವೇರಿ ಪ್ರವಾಹದಿಂದ ರಸ್ತೆ ಮುಳುಗಡೆಯಾಗುವ ಅಪಾಯ ಮಟ್ಟದಲ್ಲಿದೆ.
ಅಪಾಯ ಮಟ್ಟ ಮೀರಿ ಪ್ರವಾಹ ಹರಿಯುತ್ತಿರುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಗೇಡ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ.
ಕೊಟ್ಟಮುಡಿ ಜಂಕ್ಷನ್ ಸಮೀಪದಲ್ಲಿ ಬಾಡಿಗೆ ಮನೆಗಳಿಗೆ ಕಾವೇರಿ ನದಿಯ ಆವರಿಸಿದ್ದು, ಮನೆಯಲ್ಲಿದ್ದವರು ಹಾಗೂ ಸಾಮಾನುಗಳನ್ನು ಬೇರೆಕಡೆ ಸ್ಥಳಾಂತರಿಸಲಾಗಿದೆ.
ಕಂದಾಯ, ಗ್ರಾಮ ಪಂಚಾಯತಿ ಪರಿಶೀಲನೆ : ನಾಪೋಕ್ಲು – ಕಲ್ಲುಮೊಟ್ಟೆ ರಸ್ತೆಯ ಚೆರಿಯ ಪರಂಬುವಿನಲ್ಲಿ ಕಾವೇರಿ ಪ್ರವಾಹದ ನೀರು ಹರಿಯುತ್ತಿದ್ದು, ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಕಾವೇರಿ ನದಿ ದಡದಲ್ಲಿ ವಾಸಿಸುವ ಜನರಿಗೆ ಕಂದಾಯ ಇಲಾಖೆ ಮನೆ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿತ್ತು. ಇದೀಗ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಹಲವರು ಸ್ಥಳಾಂತರಗೊಂಡಿದ್ದು, ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಗ್ರಾ.ಪಂ ಸದಸ್ಯ ಮಾಚೇಟಿರ ಕುಸು ಕುಶಾಲಪ್ಪ, ಗ್ರಾಮ ಲೆಕ್ಕಿಗ ಜನಾರ್ಧನ್ ಪಂಚಾಯಿತಿ ಸಿಬ್ಬಂದಿ ಬೊಪ್ಪಂಡ ವೇಣು, ತಿಮ್ಮಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಂಗಾಲಾದ ರೈತರು : ಎಮ್ಮೆಮಾಡುವಿನಲ್ಲಿ ಕಾವೇರಿ ನದಿ ಪ್ರವಾಹದಿಂದ ನೂರಾರು ಎಕರೆ ಗದ್ದೆಗಳು ಪ್ರವಾಹದಲ್ಲಿ ಮುಳುಗಿದ್ದು ನಾಟಿ ಮಾಡಲು ಮುಂದಾಗಿದ್ದ ರೈತರು ಕಂಗಲಾಗಿದ್ದಾರೆ. ನೀರು ಅಪಾಯದ ಮಟ್ಟ ತಲುಪಿದ್ದು ಗ್ರಾಮಸ್ತರಲ್ಲಿ ಆತಂಕ ಹೆಚ್ಚಾಗಿದೆ.
ಬೆಟ್ಟಗೇರಿ ಗ್ರಾ.ಪಂ ಬಕ್ಕದಲ್ಲಿರುವ ಕಡ್ಲೇರ ಕುಟುಂಬದ ಐನ್ ಮನೆಯ ಮಾಳಿಗೆ ಹಾಗೂ ಗೋಡೆಗಳು ಭಾರೀ ಮಳೆಯಿಂದ ಬಿದ್ದು ಬಾರಿ ನಷ್ಟ ಸಂಭವಿಸಿದೆ . ಬೆಟ್ಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಳಿಯಂಡ ಕಮಲ ಉತ್ತಯ್ಯ, ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಉದಯ ,ಪಂಚಾಯತ್ ಸದಸ್ಯ ಅಯ್ಯೆಗಡ ಮುತ್ತಪ್ಪ ಅವರು ಭೇಟಿನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು..
ವಿದ್ಯುತ್ ವ್ಯತ್ಯಾಯ : ವಿದ್ಯುತ್ ಅಂತಿಗಳ ಮೇಲೆ ಮರ ಬಿದ್ದ ಕಾರಣ ನೆಲಜಿ, ಬಲ್ಲಮಾವಟ್ಟಿ, ಎಮ್ಮೆಮಾಡು, ಕಕ್ಕಬೆ ಸೇರಿದಂತೆ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಾಯವಾಗಿದ್ದು, ಚೆಸ್ಕಂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅವಿರತ ಶ್ರಮ ವಹಿಸುತಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಗದ್ದೆ ತೋಟಗಳು ನೀರಿನಲ್ಲಿ ಮುಳುಗಡೆಯಾಗಿದೆ.
ದ್ವೀಪವಾದ ಪಾಲೂರು ಶ್ರೀ ಹರಿಶ್ಚಂದ್ರ ದೇವಾಲಯ : ಇತಿಹಾಸ ಪ್ರಸಿದ್ಧ ಪಾಲೂರು ಶ್ರೀ ಹರಿಶ್ಚಂದ್ರ ದೇವಾಲಯ ಕಾವೇರಿ ನದಿ ಪ್ರವಾಹದಿಂದಾಗಿ ಸಂಪರ್ಕ ಕಡಿತ ಗೊಂಡು ದ್ವೀಪವಾಗಿದೆ.
ವರದಿ : ದುಗ್ಗಳ ಸದಾನಂದ










