ಸೋಮವಾರಪೇಟೆ ಜು.20 NEWS DESK : ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಮಳೆಯ ರಭಸ ತುಸು ಕಡಿಮೆಯಾಗಿದ್ದು, ಶಾಂತಳ್ಳಿ ಹೋಬಳಿಯ ಗ್ರಾಮೀಣ ಭಾಗದಲ್ಲಿ ಭತ್ತ ನಾಟಿಗೆ ಸಿದ್ದಗೊಂಡಿದ್ದ ಗದ್ದೆಗಳು ಜಲಾವೃತವಾಗಿವೆ. ಕುಂದಳ್ಳಿ, ಕನ್ನಳ್ಳಿ, ಬೇಕನಹಳ್ಳಿ ಗ್ರಾಮಗಳಲ್ಲಿ ಭತ್ತ ಗದ್ದೆಯಲ್ಲು ಹೂಳು ಸಂಗ್ರಹವಾಗಿದೆ. ಮರಗಳು ವಿದ್ಯುತ್ ಮಾರ್ಗದ ಮೇಲೆ ಬಿದ್ದು, ಹಲವು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ವಿದ್ಯುತ್ ಮಾರ್ಗ ಸರಿಪಡಿಸಲು ಸೆಸ್ಕ್ ಸಿಬ್ಬಂದಿಗಳು ಹರಸಾಹಸ ಮಾಡುತ್ತಿದ್ದಾರೆ.
ಬಳಗುಂದ ಗ್ರಾಮದಲ್ಲಿ 33ಕೆವಿ ವಿದ್ಯುತ್ ಮಾರ್ಗದ ತಂತಿ ಮೇಲೆ ಶುಕ್ರವಾರ ರಾತ್ರಿ ಮರಬಿದ್ದು ಹಾನಿಯಾಗಿ, ರಾತ್ರಿಯೇ ಸೆಸ್ಕ್ ಸಿಬ್ಬಂದಿಗಳು ಮಾರ್ಗ ದುರಸ್ತಿಪಡಿಸಿ, ಶನಿವಾರ ಮಧ್ಯಾಹ್ನದ ಹೊತ್ತಿಗೆ ಪಟ್ಟಣ ಮತ್ತು ಗ್ರಾಮೀಣ ಭಾಗಗಳಿಗೆ ವಿದ್ಯುತ್ ಕಲ್ಪಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಳೆಹಾನಿಯಾಗಿರುವ ಪ್ರದೇಶ ಮತ್ತು ಈ ಹಿಂದಿನ ವರ್ಷಗಳಲ್ಲಿ ಭೂಕುಸಿತ ಸಂಭವಿಸಿದ ಸ್ಥಳಗಳಿಗೆ ಉಪವಿಭಾಗಾಧಿಕಾರಿ ವಿನಾಯಕ ನರ್ವಡೆ, ತಾಲ್ಲೂಕು ತಹಸೀಲ್ದಾರ್ ನವೀನ್ ಹಾಗು ಕಂದಾಯ ನಿರೀಕ್ಷಕ ದಾಮೋದರ್ ಭೇಟಿ ನೀಡಿ ಪರಿಶೀಲಿಸಿದರು.
ತೋಳೂರುಶೆಟ್ಟಳ್ಳಿ ಗ್ರಾಮದ ವಿ.ಕೆ.ಇಂದಿರಾ ಅವರ ಮನೆಯ ಗೋಡೆ ಕುಸಿದು ಶೇ.70ರಷ್ಟು ಹಾನಿಯಾಗಿದೆ. ಶುಂಠಿ ಮಂಗಳೂರು ಗ್ರಾಮದ ಇಂದ್ರಮ್ಮ ಎಂಬವರ ಮನೆ ಗೋಡೆ ಕುಸಿದಿದೆ. ಕಲ್ಕಂದೂರು ಗ್ರಾಮದ ಹಸೈನರ್ ಅವರ ಮನೆ ಮೇಲೆ ಸಿಲ್ವರ್ ಮರ ಬಿದ್ದು ಹಾನಿಯಾಗಿದೆ.
::: ಜಾನುವಾರುಗಳಿಗೆ ಪ್ರತ್ಯೇಕ ಆರೈಕೆ :::
ಜನರು ಮತ್ತು ಜಾನುವಾರಗಳ ರಕ್ಷಣೆಗೆ ಸರ್ಕಾರಿ ಸಿಬ್ಬಂದಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ದನದ ಕೊಟ್ಟಿಗೆಗಳು ಬೀಳುವ ಹಂತದಲ್ಲಿದ್ದರೆ, ಮಾಲೀಕರ ಕೂಡಲೆ, ಪಂಚಾಯಿತಿ ಅಥವಾ ಕಂದಾಯ ಇಲಾಖೆಯ ಮಾಹಿತಿ ನೀಡಬೇಕು. ಕ್ರಮ ಕೈಗೊಂಡು ಜಾನುವಾರುಗಳನ್ನು ಸೂಕ್ತ ಸ್ಥಳದಲ್ಲಿ ಬಿಟ್ಟು ಅರೈಕೆ ಮಾಡಲಾಗುವುದು. ಜಾನುವಾರು ಮೃತಪಟ್ಟರೆ 30 ಸಾವಿರ ರೂ.ಗಳ ಪರಿಹಾರ ನೀಡಲಾಗುತ್ತದೆ. ಏನೇ ಸಮಸ್ಯೆಯಿದ್ದರೆ ಆಯಾ ವ್ಯಾಪ್ತಿಯ ಕಂದಾಯ ನಿರೀಕ್ಷಕರು, ಪಿಡಿಒಗಳ ಗಮನಕ್ಕೆ ತರಬೇಕು. -ನವೀನ್ ಕುಮಾರ್, ತಾಲ್ಲೂಕು ತಹಸೀಲ್ದಾರ್, ಸೋಮವಾರಪೇಟೆ