ಮಡಿಕೇರಿ ಜು.22 NEWS DESK : ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಹಲವು ಮೂಲಭೂತ ಸಮಸ್ಯೆಗಳು ಕಾಡುತ್ತಿದ್ದರೂ ಪ್ರಂಚಾಯಿತಿ ಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಸಿಪಿಐಎಂ ಪಕ್ಷದ ಕೊಡಗು ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು. ಸಿಪಿಐಎಂ ಪಕ್ಷದ ಮುಖಂಡ ಡಾ.ಈ.ರ.ದುರ್ಗಾಪ್ರಸಾದ್ ಮಾತನಾಡಿ ಕೊಡಗು ಜಿಲ್ಲೆಯಲ್ಲೇ ಸಿದ್ದಾಪುರ ಗ್ರಾ.ಪಂ ಅತ್ಯಂತ ದೊಡ್ಡ ಮತ್ತು ಆದಾಯ ಹೆಚ್ಚು ಬರುವ ಪಂಚಾಯ್ತಿಯಾಗಿದೆ. ಆದರೆ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತ್ತಿಲ್ಲವೆಂದು ಆರೋಪಿಸಿದರು.
ಅಶುಚಿತ್ವದ ವಾತಾವರಣದಿಂದ ಆರೋಗ್ಯದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುವುದರಿಂದ ಗ್ರಾ.ಪಂ ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಬಿ.ರಮೇಶ್ ಮಾತನಾಡಿ ಇಲ್ಲಿಯವರೆಗೆ ಗ್ರಾ.ಪಂ ಯಲ್ಲಿ ಆಡಳಿತ ನಡೆಸಿದವರ ಇಚ್ಛಾಶಕ್ತಿಯ ಕೊರತೆಯಿಂದ ಸಮಸ್ಯೆಗಳಿಗೆ ಪರಿಹಾರ ದೊರೆತ್ತಿಲ್ಲ. ಜನಪ್ರತಿನಿಧಿಗಳು ಪಂಚಾಯಿತಿಯನ್ನು ಸ್ವಾರ್ಥ ಮತ್ತು ತಮ್ಮ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದಾಪುರದ ಬಹುದೊಡ್ಡ ಸಮಸ್ಯೆಯಾದ ಕಸ ವಿಲೇವಾರಿ ಪ್ರಕ್ರಿಯೆಯನ್ನು ಇಲ್ಲಿಯವರೆಗೆ ಸುವ್ಯವಸ್ಥಿತಗೊಳಿಸಿಲ್ಲ. ಕೊಳೆತು ನಾರುತ್ತಿರುವ ತ್ಯಾಜ್ಯದ ರಾಶಿಯಿಂದ ಜನರು ಹಾಗೂ ವಿದ್ಯಾರ್ಥಿಗಳು ನಡೆದಾಡಲಾಗದೆ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ. ಪಟ್ಟಣದ ಮೂಲೆ ಮೂಲೆಯಲ್ಲಿ ಕಸದ ರಾಶಿ ಇದ್ದು ದುರ್ನಾತ ಬೀರುತ್ತಿದೆ. ಈಗಾಗಲೇ ಸಿದ್ದಾಪುರದಲ್ಲಿ ಡೆಂಗ್ಯುಜ್ವರ ಪ್ರಕರಣಗಳು ಹೆಚ್ಚಾಗಿದೆ. ಹಲವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನೇರ ಹೊಣೆ ಗ್ರಾ.ಪಂ ಹೊರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೀನು, ಮಾಂಸದ ಮಾರುಕಟ್ಟೆ ಹರಾಜು ಪ್ರಕ್ರಿಯೆಗಳು ಕ್ರಮಬದ್ಧ ಮತ್ತು ಪಾರದರ್ಶಕವಾಗಿ ನಡೆಯುತ್ತಿಲ್ಲ. ಪಟ್ಟಣದ ಮೂಲಭೂತ ಸಮಸ್ಯೆಗಳ ಕುರಿತು ಸದಸ್ಯರುಗಳು ಗ್ರಾ.ಪಂ ಸಭೆಯಲ್ಲಿ ಆರೋಗ್ಯಕರ ಚರ್ಚೆ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ರಮೇಶ್ ಆರೋಪಿಸಿದರು.
::: ಬೇಡಿಕೆಗಳು :::
ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಘೋಷಿಸಬೇಕು, ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದ ಮುಂಭಾಗದಲ್ಲಿರುವ ಸರ್ಕಾರಿ ಕೆರೆ ಒತ್ತುವರಿಯನ್ನು ಸರ್ವೆ ಮಾಡಿ ತೆರವುಗೊಳಿಸಬೇಕು, ಪಟ್ಟಣದಲ್ಲಿ ವಾಹನದಟ್ಟಣೆ ಅಧಿಕವಾಗಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪಾದಾಚಾರಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಬಡವರು, ಕೂಲಿ ಕಾರ್ಮಿಕರು, ಮಳೆಹಾನಿ ಸಂತ್ರಸ್ತರು ಹಾಗೂ ತೋಟದ ಲೈನ್‌ಮನೆ ನಿವಾಸಿಗಳಿಗೆ ತಕ್ಷಣ ನಿವೇಶನ ಮಂಜೂರು ಮಾಡಿ ಮನೆ ನಿರ್ಮಿಸಿಕೊಡಬೇಕು. ಗುಹ್ಯ, ಕರಡಿಗೋಡು ಮತ್ತು ಸಿದ್ದಾಪುರ ಪಟ್ಟಣಕ್ಕೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಿಪಿಐಎಂ ಪಕ್ಷದ ಜಿಲ್ಲಾ ಮುಖಂಡರಾದ ಎನ್.ಡಿ.ಕುಟ್ಟಪ್ಪನ್, ಎಸ್.ಬೈಜು, ಅನಿಲ್ ಕುಟ್ಟಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.