ಮಡಿಕೇರಿ ಜು.28 NEWS DESK : ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಆರೋಗ್ಯ ಸೌಲಭ್ಯಗಳನ್ನು ಆಸ್ಪತ್ರೆಯ ಹಳೆಯ ಕಟ್ಟಡದಿಂದ ನೂತನ ಕಟ್ಟಡಕ್ಕೆ ಭಾನುವಾರ ಸ್ಥಳಾಂತರಿಸಲಾಯಿತು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಮಂತರ್ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊರ ರೋಗಿಗಳ ವಿಭಾಗದ ಸ್ಥಳಾಂತರಕ್ಕೆ ಚಾಲನೆ ನೀಡಿದರು. ನೂತನ ಆಸ್ಪತ್ರೆ ಕಟ್ಟಡ ಪೂರ್ಣಗೊಳಿಸಲು ಸರ್ಕಾರದಿಂದ 60 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ಮಡಿಕೇರಿ ಶಾಸಕರು ಇದೇ ಸಂದರ್ಭ ತಿಳಿಸಿದರು. ನೂತನ ಕಟ್ಟಡಕ್ಕೆ ಸ್ಥಳಾಂತರವಾಗಿರುವ ಹೊರ ರೋಗಿಗಳ ವಿಭಾಗದ ಜನರಲ್ ಮೆಡಿಸನ್, ಕಣ್ಣು, ಕಿವಿ-ಮೂಗು-ಗಂಟಲು, ಕೀಲು ಮತ್ತು ಮೂಳೆ, ಮಾನಸಿಕ ರೋಗ, ಶ್ವಾಸಕೋಶ ಮತ್ತು ಚರ್ಮ ರೋಗ ವಿಭಾಗಗಳಿಗೆ ಶಾಸಕ ಡಾ|| ಮಂತರ್ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು ಪ್ರತ್ಯೇಕವಾಗಿ ಭೇಟಿ ನೀಡಿ ವೀಕ್ಷಿಸಿದರು.
ಅಲ್ಲಿನ ‘ಡಿ’ ದರ್ಜೆ ನೌಕರರು, ಶೂಶ್ರುಷಕರು, ಸಿಬ್ಬಂದಿಗಳು, ವೈದ್ಯರ ಜೊತೆ ಸಮಲೋಚಿಸಿದ ಡಾ|| ಮಂತರ್ಗೌಡ ಹಾಗೂ ಎಂ.ಪಿ.ಸುಜಾ ಕುಶಾಲಪ್ಪ ಅವರು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕು, ಸ್ವಚ್ಚತೆಗೆ ಹೆಚ್ಚು ಒತ್ತು ನೀಡಬೇಕು, ರೋಗಿಗಳನ್ನು ಕುಟುಂಬದವರಂತೆ ಕಾಣಬೇಕು ಎಂದು ಸಲಹೆ ಮಾಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರತಿಯೊಬ್ಬರೂ ತಂಡವಾಗಿ ಕಾರ್ಯನಿರ್ವಹಿಸುವಲ್ಲಿ ಉತ್ತಮ ಹೆಸರು ಪಡೆಯಬಹುದು. ಅ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು. ಶಾಸಕ ಡಾ|| ಮಂತರ್ಗೌಡ ಅವರು ಸ್ಕ್ಯಾನಿಂಗ್ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಸ್ವತಃ ವೈದ್ಯರಾದ ಡಾ|| ಮಂತರ್ಗೌಡ ಅವರು ಹೊರ ರೋಗಿಗಳ ಆರೋಗ್ಯ ತಪಾಸಣೆ ಮಾಡಿದ್ದು ವಿಶೇಷವಾಗಿತ್ತು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಾ|| ಮಂತರ್ಗೌಡ ಅವರು ಇತ್ತೀಚೆಗೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ|| ಶರಣ ಪ್ರಕಾಶ ಪಾಟೀಲ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಒ.ಪಿ.ಡಿ ಅನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿರುವಂತೆ ನಿರ್ದೇಶನ ನೀಡಿದ್ದರು, ಅದರಂತೆ ಭಾನುವಾರ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯು 300 ಹಾಸಿಗೆಯ ಆಸ್ಪತ್ರೆ ಒಳಗೊಂಡಿದೆ. ಈ ಕಟ್ಟಡದಲ್ಲಿ ಎರಡು ಮಹಡಿ ಪೂರ್ಣಗೊಳ್ಳಬೇಕಿದೆ, ಆ ನಿಟ್ಟಿನಲ್ಲಿ ಸರ್ಕಾರದಿಂದ 60 ಕೋಟಿ ರೂ. ಬಿಡುಗಡೆಯಾಗಲಿದ್ದು, ಒಳ್ಳೆಯ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಶಾಸಕರು ಹೇಳಿದರು. ಹೊಸ ಕಟ್ಟಡದಲ್ಲಿ ಈ ವರ್ಷವೇ ಹೃದ್ರೋಗ ವಿಭಾಗ ಆರಂಭವಾಗಲಿದೆ, ಈ ಸಂಬAಧ ನೂತನ ಕಟ್ಟಡದಲ್ಲಿ ಜಾಗ ಕಾಯ್ದಿರಿಸಲಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ವಿವರಿಸಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ತಜ್ಞ ವೈದ್ಯರಿದ್ದು ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳು ದೊರೆಯಲಿವೆ ಎಂದು ಶಾಸಕರು ತಿಳಿಸಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ|| ವಿಶಾಲ್ ಕುಮಾರ್, ಜಿಲ್ಲಾ ಸರ್ಜನ್ ಡಾ|| ನಂಜುಂಡಯ್ಯ ಸ್ಥಾನಿಕ ವೈದ್ಯಾಧೀಕಾರಿ ಡಾ|| ಸತೀಶ್, ಡಾ|| ರೂಪೇಶ್ ಗೋಪಾಲ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್ ಯಲ್ಲಪ್ಪ, ಸದಸ್ಯರುಗಳಾದ ಕಾನೆಹಿತ್ಲು ಮೊಣ್ಣಪ್ಪ, ಆರ್.ಪಿ.ಚಂದ್ರಶೇಖರ್, ಪ್ರಮುಖರಾದ ಚುಮ್ಮಿ ದೇವಯ್ಯ, ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ, ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಮತ್ತಿತರರು ಇದ್ದರು.