ನವದೆಹಲಿ NEWS DESK ಆ.4 : (ಕೋವರ್ ಕೊಲ್ಲಿ ಇಂದ್ರೇಶ್) ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತದ ನಂತರ ಕೇಂದ್ರ ಸರ್ಕಾರ ಜುಲೈ 31 ರಂದು ವಿವರವಾದ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು , ಇದು ಸುಮಾರು ಶೇ.36 ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಲು ಪ್ರಸ್ತಾಪಿಸಿದೆ. ಈ ಪ್ರದೇಶವು ವಯನಾಡಿನ 13 ಹಳ್ಳಿಗಳನ್ನು ಮತ್ತು ಕೇರಳ ರಾಜ್ಯದಲ್ಲಿ ಸುಮಾರು 10,000 ಚದರ ಕಿ.ಮೀ. ಪ್ರದೇಶವನ್ನು ಸೂಕ್ಷ್ಮ ವ್ಯಾಪ್ತಿಗೆ ತರಲಾಗುತ್ತಿದೆ. ಆ ಪ್ರಕಾರ ಪಶ್ಚಿಮ ಘಟ್ಟಗಳ ಸುಮಾರು 57,000 ಚದರ ಕಿಲೋಮೀಟರ್ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಲು ನಿರ್ಧರಿಸಿದೆ. ಈ ಕುರಿತು ಕೇಂದ್ರಕ್ಕೆ ತಮ್ಮ ಅಭಿಪ್ರಾಯಗಳನ್ನು ನೀಡಲು ನಾಗರಿಕರಿಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ, ನಂತರ ಅಂತಿಮ ಅಧಿಸೂಚನೆಯನ್ನು ರಾಜ್ಯವಾರು ಅಥವಾ ಸಂಯೋಜಿತ ಆದೇಶವನ್ನು ಪ್ರಕಟಿಸಲಾಗುವುದು ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಮತ್ತು ಗುಜರಾತ್ – ಆರು ರಾಜ್ಯಗಳಲ್ಲಿ 56,826 ಚದರ ಕಿ.ಮೀ ಪ್ರದೇಶವನ್ನು ‘ಪರಿಸರ ಸೂಕ್ಷ್ಮ’ ಎಂದು ಘೋಷಿಸಲು ಉದ್ದೇಶಿಸಲಾಗಿದೆ, ಈ ಅಧಿಸೂಚನೆ ಜಾರಿಗೆ ಬಂದರೆ ಈ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಯ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಕೇಂದ್ರದಿಂದ ಕರಡು ಅಧಿಸೂಚನೆ ಹೊರಡಿಸಿರುವುದು ಇದು ಆರನೇ ಬಾರಿ ಆಗಿದ್ದು ಕೊನೆಯ ಕರಡನ್ನು ಜುಲೈ 2022 ರಲ್ಲಿ ಹೊರಡಿಸಲಾಗಿತ್ತು. ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಅಧಿಸೂಚನೆಯನ್ನು ಅಂತಿಮಗೊಳಿಸಲು ಸಮಿತಿಯನ್ನು ಸಹ ರಚಿಸಲಾಯಿತು. ಅತಿರೇಕದ ವ್ಯಾಪಾರೀಕರಣ ಮತ್ತು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಪಟ್ಟಿ ಮಾಡದಿರುವುದು ವಯನಾಡ್ ದುರಂತದ ಹಿಂದಿನ ಪ್ರಮುಖ ಕಾರಣಗಳೆಂದು ಗುರುತಿಸಲಾಗಿದೆ, ಈ ದುರಂತದಲ್ಲಿ ಸುಮಾರು 300 ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರದ ಕರಡು ಅಧಿಸೂಚನೆಯ ಪ್ರಕಾರ ವಯನಾಡಿನಲ್ಲಿ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಉದ್ದೇಶಿಸಿರುವ ಗ್ರಾಮಗಳೆಂದರೆ ಪೆರಿಯ, ತಿರುನೆಲ್ಲಿ, ತೊಂಡರ್‌ನಾಡ್, ತ್ರಿಸಿಲೇರಿ, ಕಿಡಂಗನಾಡ್, ನೂಲ್‌ಪುಳ, ಅಚೂರಾನಂ, ಚುಂಡೇಲ್, ಕೊಟ್ಟಪ್ಪಾಡಿ, ಕುನ್ನತ್ತಿದವಕ, ಪೊಝುತಾನ, ತಾರಿಯೋಡ್ ಮತ್ತು ವೆಳ್ಳರಿಮಲ ಆಗಿವೆ. ಕರ್ನಾಟಕದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ರಾಜ್ಯದ ಆರು ಅರಣ್ಯ ಪ್ರದೇಶಗಳಲ್ಲಿ ಪರಿಸರ ಸೂಕ್ಷ್ಮ ವಲಯಗಳನ್ನು (ESZ) ಗುರುತಿಸಿ ಘೋಷಿಸುವ ಅರಣ್ಯ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ರಾಜ್ಯದ ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ, ತುಮಕೂರಿನ ಬುಕ್ಕಾಪಟ್ಟಣದ ಚಿಂಕಾರ ವನ್ಯಜೀವಿ ಅಭಯಾರಣ್ಯ, ಕೋಲಾರದ ಕಾಮಸಂದ್ರ ವನ್ಯಜೀವಿ ಅಭಯಾರಣ್ಯ, ಅಣಶಿ ರಾಷ್ಟ್ರೀಯ ಉದ್ಯಾನವನ ಮತ್ತು ದಾಂಡೇಲಿ ವನ್ಯಜೀವಿ ಸಂರಕ್ಷಿತ ಪ್ರದೇಶ ಮತ್ತು ನಾಗರಹೊಳೆ ಅಭಯಾರಣ್ಯ ಸೂಕ್ಷ್ಮ ವಲಯಕ್ಕೆ ಸೇರಿವೆ. “ಇಎಸ್‌ಜೆಡ್ ಎಂದು ಘೋಷಣೆಯಾದರೆ ಅರಣ್ಯದಿಂದ 10 ಕಿಮೀ ವರೆಗೆ ವಾಣಿಜ್ಯ ಕಟ್ಟಡ ಮತ್ತು ಚಟುವಟಿಕೆಗಳಿಗೆ ಸರ್ಕಾರ ನಿರ್ಬಂಧ ವಿಧಿಸಲಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ ಮೇಲೆ ಸಂಪೂರ್ಣ ನಿಷೇಧ ವಿಧಿಸಲಾಗುತ್ತದೆ, ಅಸ್ತಿತ್ವದಲ್ಲಿರುವ ಗಣಿಗಳನ್ನು ಅಂತಿಮ ಅಧಿಸೂಚನೆ ದಿನಾಂಕದಿಂದ ಅಥವಾ ಗುತ್ತಿಗೆಯ ಮುಕ್ತಾಯದವರೆಗೆ ಹಂತಹಂತವಾಗಿ ಮುಚ್ಚಲಾಗುವುದು. ಹೊಸ ಉಷ್ಣ ವಿದ್ಯುತ್ ಯೋಜನೆಗಳನ್ನು ನಿಷೇಧಿಸುತ್ತದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು. ಆದರೆ, ಯಾವುದೇ ವಿಸ್ತರಣೆಗೆ ಅವಕಾಶವಿಲ್ಲ ಎಂದು ಹೇಳುತ್ತದೆ. ಅಸ್ತಿತ್ವದಲ್ಲಿರುವ ಕಟ್ಟಡಗಳ ದುರಸ್ತಿ ಮತ್ತು ನವೀಕರಣ ಹೊರತುಪಡಿಸಿ, ದೊಡ್ಡ ಪ್ರಮಾಣದ ನಿರ್ಮಾಣ ಯೋಜನೆಗಳು ಮತ್ತು ಟೌನ್‌ಶಿಪ್‌ಗಳನ್ನು ಸಹ ನಿಷೇಧಿಸಲು ಪ್ರಸ್ತಾಪಿಸಲಾಗಿದೆ. 20,000 ಚದರ ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ನಿರ್ಮಾಣ ಪ್ರದೇಶಗಳು, ಹೊಸ ಮತ್ತು ವಿಸ್ತರಣೆ ಟೌನ್‌ಶಿಪ್‌ಗಳು ಮತ್ತು 50 ಹೆಕ್ಟೇರ್ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣ ಅಥವಾ 1,50,000 ಚದರ ಮೀಟರ್ ನಿರ್ಮಾಣ ಪ್ರದೇಶವಿರುವ ಅಭಿವೃದ್ಧಿ ಯೋಜನೆಗಳನ್ನು ನಿಷೇಧಿಸುವ ಪ್ರಸ್ತಾಪವಿದೆ.