
ಮಡಿಕೇರಿ NEWS DESK ಆ.4 : ಭಾರತ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳು ಅಖಂಡ ಭಾರತಕ್ಕಾಗಿ ನಡೆದಿತ್ತು. ಆದರೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿದ್ದ ಅಖಂಡ ಭಾರತವನ್ನು ತ್ರಿಖಂಡವಾಗಿ ತುಂಡರಿಸಲು ಕಾರಣವಾದ ಅಂದಿನ ನೈಜ ಘಟನೆಗಳನ್ನು ಯುವ ಸಮೂಹಕ್ಕೆ ನೆನಪಿಸುವುದು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಯೋಧರ ಸ್ಮರಣೆ ಮಾಡುವುದು ಹಾಗೂ ಕಳೆದು ಹೋದ ಭಾರತದ ಭೂಭಾಗಗಳನ್ನು ಮತ್ತೆ ಪಡೆಯುವ ಸಂಕಲ್ಪದೊಂದಿಗೆ ಹಿಂದು ಜಾಗರಣ ವೇದಿಕೆಯು ಕೊಡಗು ಜಿಲ್ಲೆಯ ಆರು ಕಡೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವೇದಿಕೆಯ ಜಿಲ್ಲಾ ಸಂಯೋಜಕರಾದ ಕುಕ್ಕೇರ ಅಜಿತ್ ತಿಳಿಸಿದ್ದಾರೆ. ಪ್ರತೀ ವರ್ಷ ದೇಶದಾದ್ಯಂತ ಸ್ವಾತಂತ್ರ್ಯೋತ್ಸವಕ್ಕೆ ಮುಂಚಿತವಾಗಿ ಆಗಸ್ಟ್ ತಿಂಗಳಿನಲ್ಲಿ ಅಖಂಡ ಭಾರತ ಸಂಕಲ್ಪ ದಿನವನ್ನು ಆಯೋಜಿಸುತ್ತಿದೆ. ಅದರಂತೆ ಆ.7ರಂದು ವೀರಾಜಪೇಟೆ, ಆ.9ರಂದು ಮಡಿಕೇರಿ, ಆ.10ರಂದು ಮಾದಾಪುರ, ಆ.11ರಂದು ಕೊಡ್ಲಿಪೇಟೆ, 12ರಂದು ಪೊನ್ನಂಪೇಟೆ ಹಾಗೂ ಆ.14ರಂದು ಕುಶಾಲನಗರದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಪಂಜಿನ ಮೆರವಣಿಗೆ ಹಾಗೂ ವಾಹನ ಜಾಥ ಸಾಗಲಿದೆ. ಈ ಎಲ್ಲಾ ಕಾರ್ಯಕ್ರಮಗಳು ನಿವೃತ್ತ ಸೇನಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ದಿಕ್ಸೂಚಿ ಭಾಷಣಕಾರರಾಗಿ ರಾಜ್ಯದ ವಿವಿಧ ಭಾಗಗಳಿಂದ ಗಣ್ಯರು ಆಗಮಿಸಲಿರುವರು. ಈ ದೇಶಭಕ್ತಿಯ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕುಕ್ಕೇರ ಅಜಿತ್ ಮನವಿ ಮಾಡಿದ್ದಾರೆ.








