ಮಡಿಕೇರಿ ಆ.5 NEWS DESK : ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದಲಿತ ಚಳುವಳಿಗೆ ಐವತ್ತು ವರ್ಷ ತುಂಬಿರುವ ಹಿನ್ನೆಲೆ ಆ.7 ರಂದು ಬೆಂಗಳೂರಿನಲ್ಲಿ ನಡೆಯುವ “50 ವರ್ಷಗಳ ಸಂಭ್ರಮೋತ್ಸವ”ದಲ್ಲಿ ಕೊಡಗು ಜಿಲ್ಲೆಯ ದಲಿತ ಬಂಧುಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಮಿತಿಯ ಕೊಡಗು ಜಿಲ್ಲಾ ಘಟಕದ ಸಂಚಾಲಕಿ ಗಾಯತ್ರಿ ನರಸಿಂಹ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಅವರ ನೇತೃತ್ವದಲ್ಲಿ ಬೆಂಗಳೂರಿನ ವಸಂತನಗರದ ಡಾ.ಅಂಬೇಡ್ಕರ್ ಭವನದಲ್ಲಿ ಸಂಭ್ರಮೋತ್ಸವದ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಪ್ರಗತಿಪರ ಚಿಂತಕ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವಿಧ ಇಲಾಖಾ ಸಚಿವರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಕೊಡಗಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ತುಳಿತಕ್ಕೊಳಗಾಗಿದ್ದ ತಳ ಸಮುದಾಯಗಳನ್ನು ಒಗ್ಗೂಡಿಸಿ ಶೋಷಣೆಯ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸಿದ ಹೆಗ್ಗಳಿಕೆ ಕರ್ನಾಟಕದ ಮಟ್ಟಿಗೆ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಗೆ ಸಲ್ಲುತ್ತದೆ. ಭದ್ರಾವತಿಯಲ್ಲಿ ಸಂಘಟನೆಯನ್ನು ಹುಟ್ಟು ಹಾಕಿ ರಾಜ್ಯದ ಉದ್ದಗಲಕ್ಕೂ ಹರಡಿ ಹೆಮ್ಮರವಾಗುವಂತೆ ದುಡಿದವರು ಬಿ.ಕೃಷ್ಣಪ್ಪನವರು. ಇದು ಎಲ್ಲರ ಪಾಲಿಗೆ ಸ್ವಾಭಿಮಾನದ ಸಂಕೇತವಾಗಿದೆ ಮತ್ತು ಮಾದರಿಯಾಗಿದೆ. ಆದ್ದರಿಂದ ಅವರ ಜನ್ಮದಿನದ ಸಂದರ್ಭದಲ್ಲಿ ಚಳುವಳಿಯ 50 ವರ್ಷಗಳ ಸಂಭ್ರಮೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಗಾಯತ್ರಿ ನರಸಿಂಹ ತಿಳಿಸಿದ್ದಾರೆ.