ಮಡಿಕೇರಿ ಆ.6 NEWS DESK : ಕೊಡಗು ಜಿಲ್ಲೆಯ ಕೆಲವು ತೋಟಗಳ ಲೈನ್ ಮನೆಗಳಲ್ಲಿರುವ ಆದಿವಾಸಿ ಕಾರ್ಮಿಕ ವರ್ಗ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿದೆ ಎಂದು ಆರೋಪಿಸಿರುವ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕ ವೈ.ಕೆ.ಗಣೇಶ್, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ತೋಟದ ಲೈನ್‍ಮನೆಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಆದಿವಾಸಿ ಕುಟುಂಬಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸರ್ಕಾರ ನಿಗಧಿಪಡಿಸಿರುವ ವೇತನವನ್ನು ನೀಡದೆ ವಂಚಿಸಲಾಗುತ್ತಿದೆ. ವಿಶ್ರಾಂತಿಗೂ ಅವಕಾಶವಿಲ್ಲದಂತೆ ಹೆಚ್ಚಿನ ಅವಧಿ ದುಡಿಸಿಕೊಳ್ಳಲಾಗುತ್ತಿದೆ. ದೌರ್ಜನ್ಯಕ್ಕೆ ಒಳಗಾದವರು ಲೈನ್‍ಮನೆಯಿಂದ ಹೊರಬರಲು ಪ್ರಯತ್ನಿಸಿದರೆ ಅವರ ಮೂಲ ದಾಖಲಾತಿ ಮತ್ತು ಸಾಮಾಗ್ರಿಗಳನ್ನು ಕಸಿದುಕೊಂಡು ಸಾಲದ ಹಣವನ್ನು ತೀರಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಎಂದು ಆರೋಪಿಸಿದರು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ದಾಖಲಿಸಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ವೈ.ಕೆ.ಗಣೇಶ್, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರ ಆದಿವಾಸಿ ಕುಟುಂಬಗಳಿಗೆ ಸ್ವಂತ ಸೂರನ್ನು ಕಲ್ಪಿಸಿದರೆ ಲೈನ್ ಮನೆಗಳಲ್ಲಿ ಜೀವನ ಸಾಗಿಸುವ ಪ್ರಸಂಗ ಎದುರಾಗುವುದಿಲ್ಲ ಮತ್ತು ಶೋಷಣೆಯಿಂದ ಮುಕ್ತಿ ಹೊಂದಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಸಂತ್ರಸ್ತ ಬಿ.ಕೆ.ಗಣೇಶ್ ಮಾತನಾಡಿ, ನಮಗೆ ಸರ್ಕಾರ ನಿಗದಿಪಡಿಸಿರುವ ವೇತನ ನೀಡದೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದುಡಿಸಿಕೊಂಡಿದ್ದಾರೆ. ದೌರ್ಜನ್ಯ ತಾಳಲಾರದೆ ಹೊರ ಬಂದ ನಮಗೆ ರೂ.1 ಲಕ್ಷ ಸಾಲ ತೀರಿಸುವಂತೆ ಮಾಲೀಕರು ಒತ್ತಡ ಹೇರುತ್ತಿದ್ದು, ಮನೆಯ ಸಾಮಾಗ್ರಿಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಸಂಘಟನೆ ಮೂಲಕ ಹಲವು ಬಾರಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ಗಣೇಶ್ ಅವರ ಪತ್ನಿ ಸುನಿತ ಹಾಗೂ ತಾಯಿ ಪಿ.ಸಿ.ಕಾವೇರಿ ಉಪಸ್ಥಿತರಿದ್ದರು.