ಮಡಿಕೇರಿ ಆ.7 NEWS DESK : ಜಬ್ಭೂಮಿ ಚಾರಿಟೇಬಲ್ ಟ್ರಸ್ಟ್, ರೂಟ್ಸ್ ಆಫ್ ಕೊಡಗು ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆ.10 ರಂದು ಬಿಟ್ಟಂಗಾಲದಲ್ಲಿ “ಬೇಲ್ ಪಣಿ-2024” ಕಾರ್ಯಕ್ರಮ ನಡೆಯಲಿದೆ ಎಂದು ಜಬ್ಭೂಮಿ ಸಂಘಟನೆಯ ಸಂಚಾಲಕ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು, ಕೊಡವರು ಹಾಗೂ ಕೃಷಿ ಭೂಮಿಗೆ ಅವಿನಾಭಾವ ಸಂಬಂಧವಿದೆ. ಭತ್ತದ ಕೃಷಿ ಇಲ್ಲಿನ ಮೂಲಭೂತ ಸಂಪ್ರದಾಯವಾಗಿದ್ದು, ಇದನ್ನು ಉತ್ತೇಜಿಸುವ ಹಾಗೂ ಮಕ್ಕಳಿಗೆ ಭತ್ತದ ಕೃಷಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶಿಷ್ಟವಾದ “ಬೇಲ್ ಪಣಿ-2024” ನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಕೊಡಗು ಜಾವ ರೈಡರ್ರ್ಸ್, ಕನೆಕ್ಟಿಂಗ್ ಕೊಡವಾಸ್, ಮೈಸೂರು-ಬೆಂಗಳೂರು ಕೊಡವ ಸ್ಟೂಡೆಂಟ್ ಅಸೋಸಿಯೇಷನ್, ಕೊಡವಾಮೆರ ಕೊಂಡಾಟ, ತಿಂಗಕೋರ್‍ಮೊಟ್ಟ್ ಕಾವೇರಿಕ್, ಬೆಂಗಳೂರಿನ ಕೊಡವ ಸಮಾಜ ಯೂತ್ ಕೌನ್ಸಿಲ್‍ನ ಸಹಯೋಗದಲ್ಲಿ ಬಿಟ್ಟಂಗಾಲದ ನಾಯಡ ಕುಟುಂಬದ ಮುರುವಂಡ ಮಿಥುನ್ ಅಣ್ಣಯ್ಯ ಹಾಗೂ ಪೊನ್ನಕಚ್ಚಿರ ಪುನೀತ್ ಅವರ ಮೇಲುಸ್ತುವಾರಿಯ ಗದ್ದೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ.
ಕೊಡವ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ, ಪುರುಷರು, ಮಹಿಳೆಯರು ಹಾಗೂ ಶಾಲಾ ಮಕ್ಕಳಿಗಾಗಿ ಹಗ್ಗಜಗ್ಗಾಟ, ಕೆಸರುಗದ್ದೆ ಓಟದ ಸ್ಪರ್ಧೆ, 60 ವರ್ಷ ಮೇಲ್ಪಟ್ಟ ಪುರುಷರಿಗೆ ಕೆಸರು ಗದ್ದೆ ನಡಿಗೆ, 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕೈಪುಳಿ ಹಾಗೂ ಕೈಕಣೆ ನಡಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ವಿಶೇಷವಾಗಿ ಪ್ರಗತಿ ಶಾಲಾ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಗದ್ದೆ ನಾಟಿ ಮಾಡುವ ಕಾರ್ಯಕ್ರಮ ನಡೆಯಲಿದೆ. ಸತತವಾಗಿ ಭತ್ತದ ಕೃಷಿ ಮಾಡುತ್ತಿರುವ ಮೂವರು ರೈತರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಆಕರ್ಷಕ ವಾಲಗತಾಟ್ ಕಾರ್ಯಕ್ರಮದೊಂದಿಗೆ ಸಮಾರಂಭ ಸಮಾರೋಪಗೊಳ್ಳಲಿದೆ. ಕೃಷಿ ಪರಂಪರೆ ಮತ್ತು ಕೊಡವ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ರಾಜೀವ್ ಬೋಪಯ್ಯ ಮಾಹಿತಿ ನೀಡಿದ್ದಾರೆ.