ಮಡಿಕೇರಿ ಆ.7 NEWS DESK : ಭೂಹೀನ ಬಡ ಕೃಷಿ ಕೂಲಿ ಕಾರ್ಮಿಕರ ಸಂವಿಧಾನ ಬದ್ಧ ಹಕ್ಕಾದ ಗೌರವ ಪೂರ್ಣ ಅಂತಿಮ ಸಂಸ್ಕಾರಕ್ಕೆ ಪೂರಕವಾಗಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ವಿದ್ಯುತ್ ಇಲ್ಲವೆ ಅನಿಲ ಚಿತಾಗಾರ ನಿರ್ಮಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ನಗರದಲ್ಲಿ “ಮಾನವ ಸರಪಳಿ” ಸಹಿತ ಪ್ರತಿಭಟನೆ ನಡೆಸಿತು. ಬಿಎಸ್‍ಪಿ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಎ.ಎ ಹಾಗೂ ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮ ಪುತ್ರಿ ರೇವತಿ ರಾಜ್ ಅವರ ನೇತೃತ್ವದಲ್ಲಿ ಬುಧವಾರ ‘ಅಣಕು ಶವಯಾತ್ರೆ’ಯೊಂದಿಗೆ ಪಕ್ಷದ ಕಛೇರಿಯಿಂದ ನಗರದ ಮುಖ್ಯ ಬೀದಿಗಳಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು.
ಬಿಎಸ್‍ಪಿ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಮಾತನಾಡಿ, ಆಡಳಿತಕ್ಕೆ ಬಂದ ಯಾವುದೇ ಪಕ್ಷದ ರಾಜಕಾರಣಿಗಳು ಇಲ್ಲಿಯವರೆಗು ಜಿಲ್ಲೆಯ ಬಡಜನರ ಸಂಕಷ್ಟಗಳಿಗೆ ಸ್ಪಂದಿಸಿ, ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿಲ್ಲ. ಬದಲಾಗಿ ಬಡ ವರ್ಗದ ಮೇಲೆಯೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅಧಿಕಾರಕ್ಕೆ ಬಂದವರು ಕಟ್ಟಡಗಳನ್ನು ನಿರ್ಮಿಸುವುದನ್ನೆ ಅಭಿವೃದ್ಧಿಯೆಂದು ಬಿಂಬಿಸುತ್ತಿದ್ದಾರೆ. ಇಂತಹ ಕಟ್ಟಡಗಳ ನಿರ್ಮಾಣ ಕೇವಲ “ಕಮಿಷನ್” ಪಡೆಯುವ ಮಾರ್ಗವಷ್ಟೆ ಎಂದು ಆರೋಪಿಸಿದರು. ಜಿಲ್ಲಾ ವ್ಯಾಪ್ತಿಯ ಲೈನ್ ಮನೆಗಳಲ್ಲಿ ನೆಲೆಸಿರುವ ಬಡ ಮಂದಿಗೆ ಮುಂಗಾರಿನ ಅವಧಿಯಲ್ಲಿ ತಮ್ಮ ಕುಟುಂಬದ ಸದಸ್ಯರು ನಿಧನರಾದ ಸಂದರ್ಭ, ಗೌರವಯುತವಾಗಿ ಅಂತಿಮ ಸಂಸ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಸಂಸ್ಕಾರಕ್ಕೆ ಅಗತ್ಯವಾದ ಸೌದೆಗೆ ಪರದಾಡುವ ಪರಿಸ್ಥಿತಿ ಇರುವುದಾಗಿ ಬೇಸರ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಲ್ಲಿ ವಿದ್ಯುತ್ ಇಲ್ಲವೆ ಗ್ಯಾಸ್ ಚಿತಾಗಾರಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ಆರಂಭದಲ್ಲೆ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಬೇಡಿಕೆ ಈಡೇರಿಲ್ಲ, ಚಿತಾಗಾರ ನಿರ್ಮಾಣದವರೆಗೆ ಪಕ್ಷ ತನ್ನ ಹೋರಾಟವನ್ನು ಮುಂದುವರಿಸಲಿದೆಯೆಂದು ಸ್ಪಷ್ಟಪಡಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮ ಪುತ್ರಿ ರೇವತಿ ರಾಜ್ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ ಭೂ ಹೀನರಾದ ಬಡವರ್ಗದ ಕೂಲಿ ಕಾರ್ಮಿಕರಿಗೆ ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ಯಾವುದೇ ವ್ಯವಸ್ಥೆಗಳಿಲ್ಲ. ವಿದ್ಯುತ್ ಇಲ್ಲವೆ ಅನಿಲ ಚಿತಾಗಾರದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಲಾಗುತ್ತಿದೆ. ನಮ್ಮ ಈ ಬೇಡಿಕೆಯನ್ನು ಶೀಘ್ರ ಪೂರೈಸದಿದ್ದಲ್ಲಿ ಅಮರಣಾಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಜೈ ಭೀಮ್ ಅಖಿಲ ಭಾರತ ಹೋರಾಟ ಸಮಿತಿಯ ರಾಜ್ಯ ಸಂಸ್ಥಾಪಕ ಎಂ.ಎಂ. ರಾಜು, ಜೈ ಭೀಮ್ ಸೇನೆ ಸಂಘಟನೆಯ ಅನಂತ್, ಬಹುಜನ ಭಾಗ್ಯವಿದಾತ ವೇದಿಕೆಯ ರಾಜ್ಯಾಧ್ಯಕ್ಷ ಚೇತನ್ ಕುಮಾರ್ ಸೇರಿದಂತೆ ಹಲವು ಸದಸ್ಯರು ಪಾಲ್ಗೊಂಡಿದ್ದರು.