ಮಾದಾಪುರ NEWS DESK ಆ.10 : ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಪ್ರಕೃತಿಯ ಮೇಲಿನ ದಾಳಿಯೇ ಇತ್ತೀಚೆಗೆ ಸಂಭವಿಸಿದ ವಿಕೋಪಗಳಿಗೆ ಕಾರಣ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಉತ್ತರ ಕೊಡಗಿನ ಮಾದಾಪುರದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಕೊಡಗಿನಲ್ಲಿ ನಿರಂತರವಾಗಿ ಹೊರ ಪ್ರದೇಶದ ಬಂಡವಾಳಶಾಹಿಗಳಿಗೆ, ಕಾರ್ಪೋರೇಟ್ ವಲಯಕ್ಕೆ, ಬಹುರಾಷ್ಟಿçÃಯ ಕಂಪೆನಿಗಳಿಗೆ, ಅನಿವಾಸಿ ಭಾರತೀಯರಿಗೆ, ರೆಸಾರ್ಟ್ ಮಾಫಿಯಾಗಳಿಗೆ, ದೊಡ್ಡ ಉದ್ಯಮಿಪತಿಗಳಿಗೆ ಭೂಮಿಯನ್ನು ಮಿತಿ ಮೀರಿ ನೀಡಿದರೆ ಭವಿಷ್ಯತ್ತಿಗೆ ತೊಂದರೆಯಾಗಲಿದೆ. ಈ ಹಿಂದೆ 2018 ರಲ್ಲಿ ಸೂರ್ಲಬ್ಬಿ ನಾಡ್, ಮುತ್ತುನಾಡ್, ಪೊರಮಲೆನಾಡ್ ಮತ್ತು ಬದಿಗೇರಿನಾಡ್ ನಲ್ಲಿ ಭೀಕರ ಜಲಕಂಟಕದಿAದ ಅನಾಹುತ ಸಂಭವಿಸಿತ್ತು, ಅಲ್ಲದೆ ಅನೇಕ ಮನೆಗಳು ನಾಶವಾಗಿದ್ದವು. ಸೂರ್ಲಬ್ಬಿ ನಾಡಿನ ಪಕ್ಕದಲ್ಲೇ ಇರುವ ಸಕಲೇಶಪುರ ಮತ್ತು ಸುಬ್ರಮಣ್ಯದಲ್ಲಿ ಈ ಹಿಂದೆ ಎತ್ತಿನಹೊಳೆ ಯೋಜನೆಗಾಗಿ ಸ್ಫೋಟಕಗಳನ್ನು ಬಳಸಲಾಗಿದೆ. ಇದರ ಪರಿಣಾಮವಾಗಿ 2018 ರಲ್ಲಿ ಸೂರ್ಲಬ್ಬಿಯಲ್ಲಿ ಜಲ ಅನಾಹುತ ನಡೆದಿದೆ. ಹಾರಂಗಿ ಜಲಾಶಯಕ್ಕಾಗಿ 35 ಸಾವಿರ ಹೆಕ್ಟೇರ್ ಪ್ರದೇಶದ ನಿತ್ಯ ಹರಿದ್ವರ್ಣದ ಅರಣ್ಯವನ್ನು ನಾಶ ಮಾಡಲಾಗಿದೆ ಮತ್ತು ಎರಡು ಪರ್ವತಗಳನ್ನು ಸ್ಫೋಟಿಸಲಾಗಿದೆ. ಇದರ ಪರಿಣಾಮ ಈಗ ಕೊಡಗಿನ ಭೂಮಿಯ ಮೇಲಾಗುತ್ತಿದೆ ಎಂದು ಆರೋಪಿಸಿದರು. ಮುಂದೊಂದು ದಿನ ಕೇರಳದ ವಯನಾಡಿನ ರೂಪದ ದುರಂತ ಸಂಭವಿಸಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಹಾರಂಗಿ ಜಲಾಶಯದ ಮಾದರಿಯಲ್ಲೇ ಕೇರಳದ ಮುಳ್ಳಪೆರಿಯರ್ ಅಣೆಕಟ್ಟೆಯಿಂದ 2018 ಮತ್ತು ಪ್ರಸ್ತುತ ವರ್ಷ ವಯನಾಡಿನಲ್ಲಿ ದುರಂತ ಸಂಭವಿಸಿದೆ ಎಂದು ಅಲ್ಲಿನ ವಿರೋಧ ಪಕ್ಷದ ಸಂಸತ್ ಸದಸ್ಯರು ಆಗಸ್ಟ್ ಮೊದಲ ವಾರದಲ್ಲಿ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ಅನಾಹುತಕ್ಕೆ ಕಾರಣವಾದ ಅಣೆಕಟ್ಟೆಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಇದೇ ಮಾದರಿಯಲ್ಲಿ ನಾವು ಕೂಡ ಕೊಡಗಿನಲ್ಲಿ ಜಲಾಶಯದ ತೆರವಿಗೆ ಒತ್ತಾಯಿಸುವ ಕಾಲ ಬಂದಿದೆ. ಕಾರಣ 2019 ರಲ್ಲಿ ವಿಶ್ವ ಸಂಸ್ಥೆಯ ತಜ್ಞರು ಭಾರತದ ಹಳೆಯದಾದ ಸುಮಾರು 2ಸಾವಿರ ಅಣೆಕಟ್ಟುಗಳನ್ನು ತೆರವುಗೊಳಿಸಬೇಕೆಂದು ವರದಿ ನೀಡಿದ್ದಾರೆ. ಕೊಡವ ಲ್ಯಾಂಡ್ ಉಳಿಯಬೇಕಾದರೆ ಜಲಾಶಯದ ತೆರವು ಅನಿವಾರ್ಯವಾಗಿದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು. 1960 ರಲ್ಲಿ ಮುಂಬಯಿಯ ದೊಡ್ಡ ಉದ್ಯಮಿಯೊಬ್ಬರಿಗೆ ಆನೆಚೌಕೂರಿನಿಂದ ಕುಶಾಲನಗರದವರೆಗಿನ 30 ಸಾವಿರ ಹೆಕ್ಟೇರ್ ಪ್ರದೇಶವನ್ನು ಸುಗಂಧ ಹುಲ್ಲು ಬೆಳೆಸಲು ನೀಡಲಾಗಿತ್ತು. ಈ ಸಂದರ್ಭ ಮಳೆಕಾಡುಗಳನ್ನು ನಾಶ ಮಾಡಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ಇಂದು ಹವಾಗುಣದ ಅಸಮಾತೋಲನ ಉಂಟಾಗುತ್ತಿದೆ ಎಂದು ಆರೋಪಿಸಿದರು. ಕೊಡಗು ಪ್ರದೇಶದಲ್ಲಿ ಅಣೆಕಟ್ಟೆ, ವಿಲ್ಲಾ, ರೆಸಾರ್ಟ್, ಟೌನ್ ಶಿಪ್ ಗಳ ನಿರ್ಮಾಣದಂತಹ ದುಸ್ಸಾಹಸಗಳಿಗೆ ಸರ್ಕಾರ ಅವಕಾಶ ನೀಡಬಾರದೆಂದು ಒತ್ತಾಯಿಸಿದರು. 15 ವಷಗಳ ಹಿಂದೆ ಗಡಿನಾಡಿನ ಬಿಳಿಗೇರಿ ಭಾಗದಲ್ಲಿ ಸಂಭವಿಸಿದ ಭೂಕಂಪನದಿಂದ ಬಾಚಿನಾಡಂಡ ಅಪ್ಪಾಜಿ ಕುಟುಂಬದ ಮನೆ ಸಂಪೂರ್ಣ ನಾಶವಾಗಿತ್ತು. ಇದೀಗ ಕೇರಳದ ವಯನಾಡಿನ ದುರಂತ ನಮ್ಮ ಮುಂದೆ ಇದ್ದು, ಮತ್ತೊಮ್ಮೆ ಈ ಅನಾಹುತ ಸಂಭವಿಸದಂತೆ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ತರಬೇಕು. ಕೊಡಗು ಪ್ರದೇಶ ಬೆಟ್ಟಗುಡ್ಡ, ನದಿ, ತೊರೆಗಳಿಂದ ಕೂಡಿದ್ದು, ಅತ್ಯಂತ ಸೂಕ್ಷ್ಮತೆಯನ್ನು ಹೊಂದಿದೆ. ಆದ್ದರಿಂದ ಬಯಲುಸೀಮೆಯಂತೆ ಕೊಡಗಿನ ಭೌಗೋಳಿಕ ಸ್ಥಿತಿಗತಿಯನ್ನು ಪರಿಗಣಿಸಬಾರದು ಎಂದರು. ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಹಾರಂಗಿ ಜಲಾಶಯ ಹಾಗೂ ದಕ್ಷಿಣಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿಗೆ ಕಟ್ಟಿರುವ ಕಟ್ಟೆಯಲ್ಲಿ ಹೂಳು ತುಂಬಿದ್ದು, ಇದು ಅಪಾಯದ ಮುನ್ಸೂಚನೆಯಾಗಿದೆ. ಜಲಾಶಯದ ಹೂಳು ತೆಗೆಯದೆ ಮತ್ತು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಜಲನಾಳಗಳಿಗೆ ಹಾನಿಯಾಗಿ ಭೂಗರ್ಭ ಸೀಳಿ ಅನಾಹುತಗಳಿಗೆ ದಾರಿಯಾಗುವ ಸಾಧ್ಯತೆಗಳಿದೆ. ವಯನಾಡಿನಂತಹ ದುರಂತ ಕೊಡಗಿನಲ್ಲೂ ಸಂಭವಿಸಬಾರದೆಂದಾರೆ ಆಡಳಿತ ವ್ಯವಸ್ಥೆ ತಕ್ಷಣ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಎನ್.ಯು.ನಾಚಪ್ಪ ಹೇಳಿದರು. ಟೌನ್ ಶಿಪ್, ನಗರೀಕರಣ, ವಿಲ್ಲಾ, ರೆಸಾರ್ಟ್ಗಳ ನಿರ್ಮಾಣದಿಂದ ಕೊಡಗಿನಲ್ಲಿ ಜನಸಂಖ್ಯೆ ಹೆಚ್ಚಾಗಲಿದ್ದು, ಇದನ್ನು ತಡೆದೊಳ್ಳುವ ಶಕ್ತಿ ಇಲ್ಲಿನ ಭೂಪ್ರದೇಶಕ್ಕೆ, ಭೂದೇವಿಗೆ ಇಲ್ಲವಾದ ಕಾರಣ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು. ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲೂ ಆಂಧ್ರದ ಹಣ ಬಳಕೆಯಾಗುತ್ತಿದ್ದು, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೈ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ರೆಸಾರ್ಟ್ ಗಳು, ದೈತ್ಯಾಕಾರದ ವಿಲ್ಲಾಗಳು, ಲೇಔಟ್ ಗಳು, ಮನೆಗಳು ಟೌನ್ ಶಿಪ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಜ್ಯ ಉದ್ದೇಶದ ಯೋಜನೆಗಳು ತಯಾರಾಗುತ್ತಿದೆ. ಇದು ಪವಿತ್ರ ಕೊಡವ ಲ್ಯಾಂಡ್ ನ ನಾಶಕ್ಕೆ ಕಾರಣವಾಗಬಹುದು. ತಲಕಾವೇರಿ-ಭಾಗಮಂಡಲ ಕೊಡವ ಟ್ರಸ್ಟ್ನಿಂದ ಸಮುದಾಯ ಭವನ ನಿರ್ಮಾಣಕ್ಕಾಗಿ ಮನವಿ ಮಾಡಿದರೂ, ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. ಆದರೆ ಹೊರಗಿನ ಮೆಗಾ ರೆಸಾರ್ಟ್ಗಳು, ಕಾರ್ಪೊರೇಟ್ ವಲಯಗಳು, ಉದ್ಯಮಿಗಳಿಗೆ ಭೂಪರಿವರ್ತನೆಯ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ನಮ್ಮ ಸಂವಿಧಾನದ 51ಂ(ಜಿ) ಮತ್ತು ಪರಿಚ್ಛೇದ 25 ಮತ್ತು 26 ಅನ್ನು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದರು. ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯ ಆಡಳಿತ ವ್ಯವಸ್ಥೆಯ ನಿರಂತರ ತಪ್ಪಿನಿಂದಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಇದರಿಂದ ಹೊರ ಬರಲು ಮತ್ತು ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಜಾಗೃತಿ ಕಾರ್ಯಕ್ರಮದಲ್ಲಿ ನಾಪಂಡ ರಮ್ಯ, ಮೇದೂರ ಪ್ರೀತಿಕಾ, ನಾಪಂಡ ಅರುಣ, ಮೇದೂರ ಕಂಠಿ, ಮಾಳೆಯಂಡ ಜಗದೀಶ್, ಬಾಚಿನಾಡಂಡ ಗಿರೀಶ್, ಬಾಚಿನಾಡಂಡ ಗಣೇಶ್, ಮೇದೂರ ಚರ್ಮಣ, ಮುದ್ದಂಡ ಗಪುö್ಪ, ಮುದ್ದಂಡ ಲಕ್ಷ÷್ಮಣ್, ನಾಪಂಡ ಶಿವಕುಮಾರ್, ಮೇದೂರ ಕಾಶಿ, ಮೇದೂರ ಸುರೇಶ್, ಮೇದೂರ ಕಾರ್ಯಪ್ಪ, ಬೈರಾಜಂಡ ದರ್ಶನ್, ತಂಬುಕುತ್ತೀರ ಗಪುö್ಪ, ತಂಬುಕುತ್ತೀರ ಲಿಂಗಪ್ಪ, ಐಮುಡಿಯಂಡ ಉತ್ತಪ್ಪ, ಕೂಪದೀರ ಸಾಬು, ಉಡುವೇರ ಮಿಟ್ಟು, ಉಡುವೇರ ಕಿರಣ್, ಉಡುವೇರ ಉಮೇಶ್, ಉಡುವೇರ ಮಂದಣ್ಣ, ಉದ್ದಿನಾಡಂಡ ಪ್ರದೀಪ್, ಪೊರೇರ ಶ್ಯಾಮ್, ಉದ್ದಿನಾಡಂಡ ಗಣೇಶ್, ಮಂದೆಯAಡ ವಸಂತ್, ಮಂದೆಯAಡ ರಜಿ ಬೆಳ್ಯಪ್ಪ, ಮೋರ್ಕಂಡ ಕಾಶಿ, ಮೊರ್ಕಂಡ ಅರುಣ್, ಸರ್ಕಂಡ ವಿನೋದ್, ಬಾಚಿನಾಡಂಡ ಲೋಹಿತ್, ಪಾಸುರ ಕುಂಞಣ್ಣ, ಪಾಸುರ ಪೊನ್ನಪ್ಪ, ನಾಗಂಡ ದಿನಕರ್, ನಾಗಂಡ ದೇವಯ್ಯ, ಅಡ್ಡಂಡ ಚೀಯಣ್ಣ, ಕುಟ್ಟಂಡ ಪ್ರಕಾಶ್, ಕುಟ್ಟಂಡ ನಂದ, ಮೊಣ್ಣಂಡ ಸವಿ ನಾಣಯ್ಯ, ಕುಟ್ಟಂಡ ದಾದು, ಕುಟ್ಟಂಡ ಸಾಗರ್, ಕುಟ್ಟಂಡ ಮಾದಪ್ಪ, ಓಡಿಯಂಡ ಶಿವಯ್ಯ, ಓಡಿಯಂಡ ರವಿ, ಚೆಟ್ಟೀರ ಗಗನ್, ಚೆಟ್ಟೀರ ಗಣಪತಿ ಹಾಗೂ ಮಾದಾಪುರದ ಸುತ್ತಮುತ್ತಲಿನ ಕೊಡವ, ಕೊಡವತಿಯರು ಮಾನವ ಸರಪಳಿಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಮುಂದಿನ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ಆ.18 ರಂದು ಸುಂಟಿಕೊಪ್ಪ, ಆ.20 ರಂದು ಕುಟ್ಟ, ಆ.29 ರಂದು ಮೂರ್ನಾಡು ಮತ್ತು ಸೆ.9 ರಂದು ನಾಪೋಕ್ಲುವಿನಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು.