ಮಡಿಕೇರಿ ಆ.12 NEWS DESK : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ನಗರದ ಕೊಡಗು ಗೌಡ ಸಮಾಜದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಪೊನ್ನಚ್ಚನ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿ, 5 ವರ್ಷದ ಕಾಲಾವಧಿಯಲ್ಲಿ ಸರ್ವ ಸದಸ್ಯರ ಪ್ರಯತ್ನದ ಫಲವಾಗಿ ಸಂಘದ ಹೆಸರಿಗೆ ನಿವೇಶನವನ್ನು ಕಾಯ್ದಿರಿಸಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ರಾಜ್ಯ ಸಂಘದ ಹೋರಾಟದ ಫಲವಾಗಿ 7ನೇ ವೇತನ ಆಯೋಗ ಜಾರಿಯಾದ ಬಗ್ಗೆ, ಕ್ರೀಡಾ ಕೂಟ ಆಯೋಜನೆ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿ ಗಳ ಅಭಿನಂದನಾ ಸಮಾರಂಭ ಆ.17 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡ ವಿಷಯಗಳನ್ನು ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಡಾ. ಎಸ್. ಸಿದ್ದರಾಮಣ್ಣ ಮಾತನಾಡಿ, ರಾಜ್ಯ ಸಂಘ ಬೆಳೆದು ಬಂದ ಹಾದಿ, 7ನೇ ವೇತನ ಆಯೋಗದ ರೂಪುರೇಷೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳು ಮಾತನಾಡಿ, ಕಲಿತ ಶಾಲೆ, ಗುರುಗಳ ಮಾರ್ಗದರ್ಶನ, ಪೋಷಕರ ಸಮರ್ಪಣಾ ಭಾವ, ಅವಿರತ ಕಲಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳಾನ್ನಡಿದರು. ಸಮಾರಂಭದಲ್ಲಿ ಸೋಮವಾರಪೇಟೆಯ ತಾಲೂಕು ಅಧ್ಯಕ್ಷ ಪ್ರದೀಪ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಗುರುರಾಜ್, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ.ಸೋಮಶೇಖರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸದಾಶಿವ ಪಲ್ಲೆದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ನಂಜುಂಡಯ್ಯ, ವೈದ್ಯದಂಪತಿಗಳಾದ ಡಾ.ನವೀನ್ ಮತ್ತು ಡಾ.ರಾಜೇಶ್ವರಿ, ಆರೋಗ್ಯ ಇಲಾಖೆಯ ರೋಹಿಣಿ, ಆರೋಗ್ಯ ಇಲಾಖೆಯ ಜಿಲ್ಲಾಧ್ಯಕ್ಷ ರಾಜೇಶ್, ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.
ಬಿ.ಐ.ಚಿತ್ರಾವತಿ ಪ್ರಾರ್ಥಿಸಿದರು. ಪ್ರೌಢ ಶಾಲಾ ಶಿಕ್ಷಕಿ ಅನಿತಾ ನಿರೂಪಿಸಿದರು, ಗುರುರಾಜ್ ಸ್ವಾಗತಿಸಿ, ವಂದಿಸಿದರು.