ಮಡಿಕೇರಿ ಆ.12 NEWS DESK : ಮಡಿಕೇರಿ ತಾಲೂಕಿನ ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನೆ ಸಂಸ್ಥೆಯ ಪ್ರಾದೇಶಿಕ ಕೇಂದ್ರವು ಬರ ಸಹಿಷ್ಣುತೆಯ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ‘ಐ.ಐ.ಎಸ್.ಆರ್. ಮನುಶ್ರೀ’ ಮತ್ತು ‘ಐ.ಐ.ಎಸ್.ಆರ್. ಕಾವೇರಿ’ ಎಂಬ ಎರಡು ಏಲಕ್ಕಿ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 109 ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ತಳಿಗಳನ್ನು ರೈತ ಸಮುದಾಯಕ್ಕೆ ಸಮರ್ಪಿಸುತ್ತಿದ್ದಾರೆ. ಇದರಲ್ಲಿ ಐ. ಸಿ. ಎ. ಆರ್. -ಐ. ಐ. ಎಸ್. ಆರ್., ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಅಭಿವೃದ್ಧಿಪಡಿಸಿರುವ ಎರಡು ಏಲಕ್ಕಿ ತಳಿಗಳು ಇರುವುದಾಗಿ ಸಂಶೋಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ. ನೂತನವಾಗಿ ಅಭಿವೃದ್ಧಿ ಪಡಿಸಿರುವ ಈ ಎರಡು ತಳಿಗಳು ಇತ್ತೀಚೆಗೆ ಬೆಳೆ ಗುಣಮಟ್ಟ, ಅಧಿಸೂಚನೆ ಮತ್ತು ತೋಟಗಾರಿಕಾ ಬೆಳೆಗಳಿಗೆ ತಳಿಗಳ ಬಿಡುಗಡೆಯ ಕೇಂದ್ರ ಉಪ ಸಮಿತಿಯಿಂದ ಅಗತ್ಯವಾದ ನಿಯಂತ್ರಣ ಅನುಮೋದನೆಯನ್ನು ಪಡೆದು ಕೊಂಡಿದೆ.
ಹೊಸ ತಳಿಯ ಇಳುವರಿ ಸಾಮರ್ಥ್ಯ : ಐಐಎಸ್‍ಆರ್-ಮನುಶ್ರೀ ಮತ್ತು ಐಐಎಸ್‍ಆರ್ ಕಾವೇರಿ ತಳಿಗಳನ್ನು ಅಪ್ಪಂಗಳದ ಐಸಿಎಆರ್-ಐಐಎಸ್‍ಆರ್ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎಸ್.ಜೆ.ಅಂಕೇಗೌಡ ಮತ್ತು ಅವರ ತಂಡ ಅಭಿವೃದ್ಧಿಪಡಿಸಿದೆ. ಎರಡು ತಳಿಗಳು ಮಲಬಾರ್ ಪ್ರಭೇದಕ್ಕೆ ಸೇರಿದ್ದು ಕೊತ್ತುಗಳು ನೆಲದ ಮೇಲೆ ಹರಡಿಕೊಂಡಿರುತ್ತವೆ ಹಾಗೂ ಬರ ಸಹಿಷ್ಣುತೆಯ ವಿಶಿಷ್ಟ ಲಕ್ಷಣವನ್ನು ಹೊಂದಿವೆ. ಐಐಎಸ್‍ಆರ್ ಮನುಶ್ರೀ ತಳಿಯು ಸ್ಥಿರ ಇಳುವರಿಯನ್ನು ನೀಡುತ್ತದೆ ಮತ್ತು ಒಂದು ಹೆಕ್ಟೇರ್‍ಗೆ 550 ರಿಂದ 360 ಸರಾಸರಿ ಒಣ ಇಳುವರಿಯನ್ನು ನೀಡುತ್ತದೆ. ಈ ತಳಿಯು ಕರ್ನಾಟಕ ಮತ್ತು ಕೇರಳದ ಏಲಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಐಐಎಸ್‍ಆರ್‍ರ್ ಕಾವೇರಿ ತಳಿಯು ಹೆಚ್ಚು ಸಾಂದ್ರವಾಗಿ ಕಾಯಿಗಳನ್ನು ಬಿಡುವ ತಳಿಯಾಗಿದ್ದು, ಈ ತಳಿಯು ಪ್ರತಿ ಹೆಕ್ಟೇರ್‍ಗೆ ಸರಾಸರಿ 482 ರಿಂದ 308ಕೆಜಿ ಒಣ ಇಳುವರಿಯನ್ನು ನೀಡುತ್ತದೆ. ಈ ತಳಿಯು ಕರ್ನಾಟಕದಲ್ಲಿ ಬೆಳೆಯಲು ಸೂಕ್ತವಾಗಿದೆಯೆಂದು ತಿಳಿಸಲಾಗಿದೆ. ಮಣ್ಣಿನ ತೇವಾಂಶವು ಏಲಕ್ಕಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಅತೀ ಮುಖ್ಯವಾಗಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಏಲಕ್ಕಿ ಬೆಳೆಯುವ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳ ಯುವ ಕೃಷಿಕರು ಏಲಕ್ಕಿಯನ್ನು ಬೆಳೆಯಲು ಆಸಕ್ತಿ ಹೊಂದಿದ್ದಾರೆ. ಈ ಪ್ರದೇಶಗಳಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ಬೆಳೆ ತೇವಾಂಶದ ಒತ್ತಡವನ್ನು ಅನುಭವಿಸುತ್ತದೆ. ಅಂತಹ ಪ್ರದೇಶಗಳಲ್ಲಿಯೂ ಸಹ ಈ ತಳಿಗಳನ್ನು ಬೆಳೆಯುವ ಪ್ರಯತ್ನ ಮಾಡಬಹುದು. ಇಂದಿನ ಮಾರುಕಟ್ಟೆಯಲ್ಲಿ ಆಕರ್ಷಕ ಹಸಿರು ಬಣ್ಣ ಮತ್ತು ದಪ್ಪ ಕಾಯಿಗಳನ್ನು ಹೊಂದಿರುವ ಏಲಕ್ಕಿಗೆ ಹೆಚ್ಚಿನ ಆದ್ಯತೆ ಮತ್ತು ದರ ಸಿಗುತ್ತದೆ. ಆದ್ದರಿಂದ ಹೆಚ್ಚಿನ ಶೇಕಡಾವಾರು ದಪ್ಪ ಕಾಯಿಗಳನ್ನು ಹೊಂದಿರುವ ಐಐಎಸ್‍ಆರ್ ಕಾವೇರಿ ತಳಿಯು ಪ್ರೀಮಿಯಂ ಬೆಲೆಯನ್ನು ಪಡೆಯುತ್ತದೆಂದು ಸಂಶೋಧನಾ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಿದೆ.