
ಮಡಿಕೇರಿ ಆ.15 NEWS DESK : ಕೊಡಗು ಸೇರಿದಂತೆ ಪಶ್ಚಿಮ ಘಟ್ಟಗಳ ಭೂಕುಸಿತಗಳ ಅಧ್ಯಯನ ಮತ್ತು ತಡೆಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಮಾಡಿದ ನಿರಂತರ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿ ರೂ.100 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಪಶ್ಚಿಮಘಟ್ಟದಲ್ಲಿ ನಿರಂತರ ಭೂಕುಸಿತ ಸಂಭವಿಸುತ್ತಿರುವ ಕುರಿತು ಡಾ.ಮಂತರ್ ಗೌಡ ಅವರು ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು ಸ್ವಾತಂತ್ರ್ಯೋತ್ಸವದ ದಿನವಾದ ಇಂದು ಪಶ್ಚಿಮಘಟ್ಟದ ಭೂಕುಸಿತದ ಅಧ್ಯಯನ ಹಾಗೂ ತಡೆ ಕಾರ್ಯಕ್ರಮಗಳಿಗೆ 100 ಕೋಟಿ ರೂ. ಅನುದಾನವನ್ನು ಘೋಷಿಸಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಭೂಕುಸಿತವನ್ನು ತಡೆಯಲು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತಿತರ ಸಂಸ್ಥೆಗಳೊಂದಿಗೆ ಸೇರಿಕೊಂಡು ವೈಜ್ಞಾನಿಕ ಅಧ್ಯಯನ ಮಾಡುವ ಅಗತ್ಯತೆಯನ್ನು ಶಾಸಕ ಡಾ.ಮಂತರ್ ಗೌಡ ಮನವರಿಕೆ ಮಾಡಿಕೊಟ್ಟಿದ್ದರು.










