ಮಡಿಕೇರಿ ಆ.19 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ವಿರಾಜಪೇಟೆ ತಾಲೂಕಿನ ಬೊಳ್ಳರಿಮಾಡು ಗ್ರಾಮದಲ್ಲಿ ಪುಟ್ಟಿಚಂಡ ಮತ್ತು ಪಟ್ರಪಂಡ ಕುಟುಂಬದ ಸದಸ್ಯರಿಗೆ ಸೇರಿದ ಸುಮಾರು 10-15 ವರ್ಷಗಳಿಂದ ಹಲವಾರು ಸಮಸ್ಯೆಗಳಿಂದ ಪರಿತ್ಯಕ್ತವಾಗಿದ್ದ ಭತ್ತದ ಗದ್ದೆಗಳನ್ನು ಮರುನಾಟಿ ಮಾಡುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ನಡೆಯಿತು. ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್‌ನೊಂದಿಗೆ ರೂಟ್ಸ್ ಆಫ್ ಕೊಡಗು,, ಕೆಜೆವೈಎಂಸಿ ಜಬ್ಬೂಮಿ, ಕೊಡವ ಸಮಾಜ ಯೂತ್ ಕೌನ್ಸಿಲ್ ಬೆಂಗಳೂರು ಕೊಡವ ಸಮಾಜ ಯೂಥ್ ವಿಂಗ್ ಮೈಸೂರು, ವಿರಾಜಪೇಟೆಯ ಪ್ರಗತಿ ಶಾಲಾ ವಿದ್ಯಾರ್ಥಿಗಳು, ಕೊಡವ ವೆಲ್‌ಫೇರ್ ಅಸೋಸಿಯೇಷನ್ ಬೆಂಗಳೂರು, ಪಟ್ರಪಂಡ ಮತ್ತು ಪುಟ್ಟಿಚಂಡ ಕುಟುಂಬದವರು, ಬೊಳ್ಳರಿಮಾಡು ಗ್ರಾಮದ ಗ್ರಾಮಸ್ಥರು, ಕೊಡಗು ಕೃಷಿ ವಿಜ್ಞಾನ ವೇದಿಕೆ(ASFK), ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕೈಜೋಡಿಸಿದರು. ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಹಾಗೂ ASFK ಅದ್ಯಕ್ಷ ಡಾ.ಚೆಪ್ಪುಡಿರ ಕುಶಾಲಪ್ಪ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ, ಮಾಜಿ ಯೋಧ ಸೋಮೇಂಗಡ ಗಣೇಶ್, ಜಿಲ್ಲಾ ಟೂರಿಸಂ ಅಧಿಕಾರಿ ಅನಿತಾ ಭಾಸ್ಕರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು. ಬ್ರಿಗೇಡ್ ಫೌಂಡೇಶನ್‌ನ ಸಿ.ಇ.ಒ ಕೃಷಿ ಇಲಾಖೆಯ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಲಸದ್ ಪಾಲ್ಗೊಂಡು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕೊಡಗಿನಾದ್ಯಂತ ಈ ಕಾರ್ಯಕ್ರಮವನ್ನು ವಿಸ್ತರಿಸಿ ಕೃಷಿಯನ್ನು ಉತ್ತೇಜಿಸಲು ಕರೆ ನೀಡಿದರು. ಸುಮಾರು 300-350 ಜನರು ಪಾಲ್ಗೊಂಡು ನಾಟಿ ಪಣಿ ಕಾರ್ಯಕ್ರಮದಲ್ಲಿ ಭತ್ತ ನಾಟಿ ನೆಟ್ಟರು.










