ಅಬುಧಾಬಿ
NEWS DESK ಆ.21 : ಕೋವಿಡ್ ಕಾಲದಲ್ಲಿ ದುಬೈ ಪೊಲೀಸರು ಮತ್ತು ದುಬೈ ಹೆಲ್ತ್ ಅಥಾರಿಟಿ ಜೊತೆ ಸೇರಿ ಮಾಡಿದ ಸಮಾಜ ಸೇವೆಗಾಗಿ ವತನನಿ ಅಲ್ ಎಮರಾಥಿ ಸಂಸ್ಥೆ ವತಿಯಿಂದ ದುಬೈ ಎಕ್ಸ್ಪೋ ವೇದಿಕೆಯಲ್ಲಿ ದುಬೈ ಯುವರಾಜ ಶೇಕ್ ಹಂದಾನ್ ಬಿನ್ ಮೊಹಮ್ಮದ್ ರಾಶಿದ್ ಅಲ್ ಮಕ್ತುಮ್ ಅವರು ನೇರವಾಗಿ ಪಾಲ್ಗೊಂಡ ಕೋವಿಡ್ ವಾಲಂಟೀರ್ಸ್ ಧನ್ಯತಾ ಸಮಾರಂಭದಲ್ಲಿ ರಫೀಕಲಿ ಕುಂಡಂಡ ಕುಂಜಿಲ ಅವರು ಕೋವಿಡ್ ಹೀರೋಸ್ ಪ್ರಶಸ್ತಿ ಪಡೆದಿದ್ದಾರೆ, ಪ್ರಶಸ್ತಿಯನ್ನು ಶೇಕ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ಹುಮಾನಿಟೇರಿಯನ್ ಅಂಡ್ ಚಾರಿಟಿ ಕಚೇರಿಗೆ ತೆರಳಿ ಪಡೆದುಕೊಂಡರು.ಕೋವಿಡ್ ಕಾಲದಲ್ಲಿ ತಮ್ಮ ಮನೆಯ ಬಾಗಿಲ ಹೊರಗೆ ಸಹ ಬರಲು ಹೆದರುತ್ತಿದ್ದ, ತಿಂಗಳುಗಟ್ಟಲೆ ಹೊರಹೋಗಲಾಗದೆ ಊಟಕ್ಕೂ ಸಹ ಕಷ್ಟಪಡುತ್ತಿದ್ದ ಜನರಿಗೆ ಮತ್ತು ಕೋವಿಡ್ ಸೋಂಕು ಹಿಡಿದು ಸಂಕಷ್ಟದಲ್ಲಿದ್ದ ಜನರಿಗೆ ತಮ್ಮ ಆರೋಗ್ಯವನ್ನು ಚಿಂತಿಸದೆ ರಸ್ತೆಗೆ ಇಳಿದು ಅನ್ನ, ನೀರು ಮತ್ತು ಔಷಧಿಗಳನ್ನು ತಲುಪಿಸಿದ್ದ ಹಾಗೂ ಕೋವಿಡ್ ಸೋಂಕಿತರನ್ನು ಆಸ್ಪತ್ರೆ ಸೇರಿಸುವ ಕೆಲಸದಲ್ಲಿ ನಿರತರಾಗಿದ್ದ ದೇಶ ವಿದೇಶದ ಸಾವಿರಾರು ಕೋವಿಡ್ ಸ್ವಯಂ ಸೇವಕರಿಗೆ ಧನ್ಯತೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಖುದ್ದು ದುಬೈ ಯುವರಾಜ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ಅವರು ಪಾಲ್ಗೊಂಡು ಧನ್ಯವಾದಗಳನ್ನು ತಿಳಿಸಿದರು.
::: ರಫೀಕಲಿ ದುಬೈ ಕನ್ನಡಿಗ ಅವರ ಕಿರು ಪರಿಚಯ ::: ರಫೀಕಲಿ ಸಂಯುಕ್ತ ಅರಬ್ ಸಂಸ್ಥಾನದ ಕನ್ನಡಿಗರಿಗೆ ಚಿರಪರಿಚಿತ ವ್ಯಕ್ತಿ, ಸಾಮಾನ್ಯ ಬಡ ರೈತ ಕುಟುಂಬದಲ್ಲಿ ಜನಿಸಿದ ರಫೀಕಲಿ ಅವರು ಮೂಲತಃ ಕೊಡಗಿನ ಕುಂಡಂಡ ಮನೆತನ ಕುಂಜಿಲ ಕಕ್ಕಬೆ ಗ್ರಾಮಕ್ಕೆ ಸೇರಿದವರಾಗಿದ್ದು ಕನ್ನಡ ಮಾದ್ಯಮದಲ್ಲೇ ಶಿಕ್ಷಣ ಪಡೆದ ಇವರು ತಮ್ಮ ಪದವಿ ಶಿಕ್ಷಣವನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಿಂದ ಪಡೆದಿರುತ್ತಾರೆ, ಇವರ ತಂದೆ ಹೆಸರು ಆಲಿ ಮತ್ತು ತಾಯಿ ಫಾತಿಮ, 7ಜನ ಮಕಳಲ್ಲಿ ಇವರು ಕೊನೆಯ ಪುತ್ರರಾಗಿದ್ದಾರೆ, 7ಭಾಷೆಗಳನ್ನು ಮಾತನಾಡುತ್ತಾರೆ, ಕೊಡವ ಮುಸ್ಲಿಂ ಜನಾಂಗಕ್ಕೆ ಸೇರಿದ ಇವರ ಮನೆ ಭಾಷೆಯು ಕೊಡವ ತಕ್ಕ್ ಮತ್ತು ಮಲಯಾಳಂ ಮಿಶ್ರಿತ ಕೊಡವ ಮಲಯಾಳವಾಗಿರುತ್ತೆ, ಕಾವೇರಮ್ಮನ ಮಡಿಲಿನಿಂದ ಅರಬರ ಮರಳುಗಾಡಿನ ಮಾಯಾನಗರಿ ದುಬೈಯಲ್ಲಿ ಕಳೆದ 15 ವರ್ಷಗಳಿಂದ ಗ್ರೀಸ್ ಮೂಲದವರ ಕಂಪನಿಯಲ್ಲಿ ಅಕೌಂಟೆಂಟ್ ವೃತ್ತಿಯಲ್ಲಿ ತೊಡಗಿದ್ದು ಮತ್ತು ಕರ್ನಾಟಕ ಟ್ರಾವೆಲ್ಸ್ ದುಬೈ ಎಂಬ ಸಂಸ್ಥೆಯ ಮಾಲಿಕರಾಗಿದ್ದು ಬಿಡುವಿನ ವೇಳೆಯಲ್ಲಿ ಕನ್ನಡಪರ ಮತ್ತು ಮಾನವೀಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ, ಹೆಮ್ಮೆಯ ದುಬೈ ಸಂಘದ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ಮುಖ್ಯ ಸಂಚಾಲಕರಾಗಿ, ಹಾಗೆ ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ಹಲವು ಸಾಮಾಜಿಕ ಧಾರ್ಮಿಕ ಸಂಸ್ಥೆ ಮತ್ತು ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೈನಂದಿನ ಜೀವನವನ್ನು ಕಟ್ಟಿಕೊಳ್ಳಲು ತಾಯ್ನಾಡನ್ನು ಬಿಟ್ಟು ಅರಬರ ಮಣ್ಣಿಗೆ ತೆರಳಿದವರಿಗೆ ಎಂತಹ ಅಪತ್ ಕಾಲದಲ್ಲೂ ರಾತ್ರಿ ಹಗಲೆನ್ನದೆ ಸಂಕಷ್ಟದಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವ ಮನಸ್ಸಿರುವವರು ನೆಚ್ಚಿನ ರಫೀಕಲಿ ಕೊಡಗು ಹೆಮ್ಮೆಯ ದುಬೈ ಕನ್ನಡಿಗ. ರಫೀಕಲಿ ಅವರು ಮಾಡಿದ ಮತ್ತು ಮಾಡುತ್ತಿರುವ ಅಳಿಲು ಸೇವೆಗಳು, ಎಂತಹ ಅಪತ್ ಕಾಲದಲ್ಲೂ ಸಂಕಷ್ಟದಲ್ಲಿರುವವರಿಗೆ ಆಸರೆಯಾಗಿ ನಿಲ್ಲುವ ಮನಸ್ಸಿರುವ ನೆಚ್ಚಿನ ರಫೀಕಲಿ ಅವರು ದುಬೈಯಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಜೊತೆಗೆ ಕೊರೋನಾ ಸಂಕಷ್ಟ ಸಮಯದಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಕೋವಿಡ್ ಸಂಕಷ್ಟಕ್ಕೆ ತುತ್ತಾಗಿದ್ದ ಕನ್ನಡಿಗರು ಸೇರಿ ದೇಶ ವಿದೇಶದ ಹಲವು ಜನರಿಗೆ ದಾನಿಗಳ ಸಹಾಯದಿಂದ ಆಹಾರ ಪದಾರ್ಥ, ಔಷದಿ , ವಾಸಿಸಲು ಸ್ಥಳ ಮತ್ತು ದುಬೈ ಅರೋಗ್ಯ ಸಂಸ್ಥೆ ಹಾಗೂ ದುಬೈ ಪೋಲೀಸರ ಜೊತೆ ಕೋವಿಡ್ ಸ್ವಯಂ ಸೇವಕನಾಗಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮತ್ತು ಕೋವಿಡ್ ಪರೀಕ್ಷೆ ಮಾಡುವ ಕ್ಯಾಂಪ್ ಆಯೋಜನೆ ಹಾಗೂ ಕೋವಿಡ್ ಕಾಲದಲ್ಲಿ ಸಂಕಷ್ಟದಲ್ಲಿದ್ದವರಿಗೆ ಕರ್ನಾಟಕಕ್ಕೆ ಹಿಂದಿರುಗಲು ಉಚಿತವಾಗಿ ವಿಮಾನ ಟಿಕೆಟ್, ಹಲವು ಕನ್ನಡಿಗರಿಗೆ ಉದ್ಯೋಗಕ್ಕೆ ಸಹಾಯ ಮಾಡಿದ್ದಾರೆ. ೧. ಯುಎಯಲ್ಲಿ ಇರುವ ಮಕ್ಕಳು ಮಹಿಳೆಯರು ಮತ್ತು ಪುರುಷರಿಗಾಗಿ ಹಲವು ರೀತಿಯ ಕ್ರೀಡೆಗಳನ್ನು ಒಳಗೊಂಡ ದಸರಾ ಕ್ರೀಡೋತ್ಸವ ಮತ್ತು ಕೊಡಗಿನ ಜನರಿಗೆ ರಂಜಾನ್ ಈದ್ ಹಬ್ಬ, ಬಕ್ರೀದ್ ಹಬ್ಬದಂದು ಮತ್ತು ನ್ಯಾಷನಲ್ ಡೇ ದಿನ ಕ್ರಿಕೆಟ್ ಫುಟ್ಬಾಲ್ ಆಯೋಜನೆ ಮಾಡಿದ್ದಾರೆ. ೨. ಯುಎಇಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ಕೆಲಸ ಹುಡುಕಲು ಬಂದು ವಸತಿ ಆಹಾರ ಇಲ್ಲದೆ ಕಷ್ಟ ಅನುಭವಿಸುವರಿಗೆ ಸಹಾಯ, ಮೋಸಗಾರ ದಲ್ಲಾಗಳಿಂದ ಮೋಸ ಹೋಗಿ ಯುಎಇಯ ಯಾವುದೇ ಭಾಗದಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಆಹಾರ ವಸತಿ ಮತ್ತು ತಾಯಿನಾಡಿಗೆ ಹಿಂದಿರುಗಲು ಔಟ್ ಪಾಸ್ ಮತ್ತು ವಿಮಾನ ಟಿಕೇಟನ್ನು ದಾನಿಗಳ ಸಹಾಯದೊಂದಿಗೆ ನೀಡಿ ಸಹಾಯ ಮಾಡಿದ್ದಾರೆ. ೩. ಕರ್ನಾಟಕದ ಗರ್ಭಿಣಿಯರು, ಮಹಿಳೆಯರು ಮಕ್ಕಳು ಸೇರಿ ಹಲವರಿಗೆ ಸಾಮಾನ್ಯ ವಿಮಾನ ಸೇವೆ ಇಲ್ಲದ ಸಮಯದಲ್ಲಿ ದುಬೈ ಭಾರತೀಯ ದೂತಾವಾಸ ಕೇಂದ್ರದ ಮುಖಾಂತರ ಮತ್ತು ಚಾರ್ಟೆಡ್ ವಿಮಾನಗಳ ಮೂಲಕ ಕರುನಾಡಿಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೪. ಕೊಡಗಿನಲ್ಲಿರುವ ಎಲ್ಲಾ ಧರ್ಮದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣವನ್ನು ಮುಂದುವರೆಸಲು ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಮೂಲಕ ಎಲ್ಲಾ ವರ್ಷ ವಿದ್ಯಾರ್ಥಿ ವೇತನ ತಲುಪಿಸಿ ಸಹಾಯ ಮಾಡುತ್ತಾರೆ, ಹಾಗೆ ಊರಿನಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಕೆರಿಯರ್ ಗೈಡೆನ್ಸ್ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ೫. ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಮತ್ತು ನೈಸರ್ಕಿಕವಾಗಿ ಕೊನೆ ಉಸಿರನ್ನು ಎಳೆದ ಮೃತ ದೇಹವನ್ನು ತಾಯಿನಾಡಿಗೆ ಕಳುಹಿಸಿಕೊಡುತ್ತಾರೆ ಹಾಗೂ ದುಬೈ ಶಾರ್ಜಾದಲ್ಲಿ ಆಯಾ ಧರ್ಮದ ವಿಧಿ ಸಂಸ್ಕಾರ ಪ್ರಕಾರ ಅಂತ್ಯಕ್ರಿಯೆಯನ್ನು ನೆರೆವೇರಿಸಲು ಸಹಾಯ ಮಾಡಿರುತ್ತಾರೆ. ೬. ಕರ್ನಾಟಕದಲ್ಲಿ ಪ್ರವಾಹ ಮುಂತಾದ ನೈಸರ್ಗಿಕ ವಿಕೋಪವಾದಾಗ, ಕೋವಿಡ್ ಸಂಕಷ್ಟ ಬಂದಾಗ ತಾಯಿನಾಡಿನಲ್ಲಿರುವ ಬಡ ಜನರಿಗೆ ಆಹಾರ ಕಿಟ್ ಮತ್ತು ಇತರ ಮುಖ್ಯ ವ್ಯವಸ್ಥೆಗಳನ್ನು ಕರ್ನಾಟಕದ ಹಲವು ಭಾಗಗಳಲ್ಲಿ ಸಹಾಯ ಮಾಡಿದ್ದಾರೆ, ಹಾಗೆ ದುಬೈ ಶಾರ್ಜಾದಲ್ಲಿ ವಿಪರೀತ ಮಳೆಯ ಕಾರಣದಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಮನೆಯಿಂದ ಹೊರಬರಲು ಸಾಧ್ಯವಾಗದ ಜನರಿಗೆ ಆಹಾರ ನೀರು ಔಷದಿ ಮುಂತಾದ ದೈನಂದಿನ ಅಗತ್ಯ ವಸ್ತುಗಳನ್ನು ತಲುಪಿಸಿದ್ದಲ್ಲದೆ ಇತರ ಆಸ್ಪತ್ರೆ ಜೊತೆ ಸೇರಿ ಉಚಿತ ಚಿಕಿತ್ಸಾ ಕಾರ್ಯವನ್ನು ಮಾಡಿದ್ದಾರೆ. ೭. ದಲ್ಲಾಗಳಿಂದ ಮೋಸ ಹೋಗಿ ಯುಎಇಯಲ್ಲಿ ತಾವು ಇಷ್ಟಪಡದ ಹೇಳಿಕೊಳ್ಳಲು ಸಹ ನಾಚಿಕೆ ಆಗುವ ಕೆಲಸಕ್ಕೆ ನೂಕಲ್ಪಟ್ಟ ಹಲವು ಕನ್ನಡತಿಯರನ್ನು ಸೇರಿಸಿ ಭಾರತೀಯ ಮಹಿಳೆಯರನ್ನು ರಕ್ಷಿಸಿ ದಾನಿಗಳು ಮತ್ತು ಇಂಡಿಯನ್ ಎಂಬಸ್ಸಿ ಸಹಾಯದೊಂದಿಗೆ ತಾಯಿನಾಡಿಗೆ ಸುರಕ್ಷಿತವಾಗಿ ಹಿಂದಿರುಗಿಸುತ್ತಾರೆ. ೮. ತಾಯಿನಾಡಿನಿಂದ ಕೆಲಸ ಅರಸಿ ದುಬೈಗೆ ಆಗಮಿಸುವ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿಕೊಡಲು ಉದ್ಯೋಗ ಮೇಳ ಮತ್ತು ಜಾಬ್ ಗೈಡೆನ್ಸ್ ಸೆಶನ್ ಕಾರ್ಯಕ್ರಮ ಮಾಡಿ ಉದ್ಯೋಗಾರ್ಥಿಗಳನ್ನು ನೇರವಾಗಿ ಕಂಪನಿಗಳಿಗೆ ಪರಿಚಯಿಸುವ ಕಾರ್ಯ ಮಾಡುತ್ತಾರೆ ಹಾಗೆ ಉದ್ಯೋಗಾರ್ಥಿಗಳನ್ನು ವಾಟ್ಸಾಪ್ ಗ್ರೂಪಿಗೆ ಸೇರಿಸಿ ವಾಕ್ ಇನ್ ಇಂಟರ್ವ್ಯೂ ಮತ್ತು ಲಭ್ಯವಿರುವ ಆನ್ಲೈನ್ ಆಫ್ ಲೈನ್ ಕೆಲಸದ ಬಗ್ಗೆ ಮಾಹಿತಿ ನೀಡುತ್ತಾರೆ. ೯. ರಂಜಾನ್ ಸಮಯದಲ್ಲಿ ದುಬೈಯ ಲೇಬರ್ ಕ್ಯಾಂಪುಗಳಲ್ಲಿ ಇರುವ ಶ್ರಮಿಕ ವರ್ಗದವರಿಗೆ ದೇಶ ಭಾಷೆ ಎಂದು ನೋಡದೆ ಆಹಾರ ಕಿಟ್ ವಿತರಿಸುತ್ತಾರೆ. ೧೦. ತಮ್ಮ ಸಾಮಾಜಿಕ ಜಾಲತಾಣ ಬಳಸಿ ಯುಎಇ ಕನ್ನಡಿಗರಿಗೆ ಲೇಬರ್ ಕಾನೂನು ಮತ್ತು ಈ ದೇಶದ ಅನಿವಾಸಿಗಳು ಪಾಲಿಸಬೇಕಾದ ಪ್ರಸಕ್ತ ನಿಯಮಗಳ ಬಗ್ಗೆ ಮುಂತಾದ ಉಪಯುಕ್ತ ಮಾಹಿತಿಗಳನ್ನು ರವಾನಿಸುತ್ತಾರೆ. ೧೧. ಚೆಕ್ ಕೇಸಿನ ಟ್ರಾವೆಲ್ ಬ್ಯಾನ್ ಇದ್ದ ಕಾರಣ ಕಳೆದ 9 ವರ್ಷಗಳಿಂದ ತಾಯಿನಾಡು ಹೋಗಲು ಸಾಧ್ಯವಾಗದ ಬೆಂಗಳೂರು ಮೂಲದ ಕನ್ನಡತಿಗೆ ದಾನಿಗಳಿಂದ ಸಹಾಯ ಪಡೆದು ಹೆಮ್ಮೆಯ ದುಬೈ ಕನ್ನಡ ಸಂಘದವರ ಜೊತೆ ಸೇರಿ ಏಳು ಲಕ್ಷದಷ್ಟು ಪಾವತಿಸಿ ಹಲವು ವರ್ಷಗಳಿಂದ ತನ್ನ ಇಬ್ಬರು ಮಕ್ಕಳ ಬಳಿ ತಾಯಿಯನ್ನು ಸೇರಿಸಲು ಪ್ರಮುಖ ಪರ್ತವಹಿಸಿದ್ದಾರೆ. ೧೨. ಇತ್ತೀಚಿಗೆ ಟರ್ಕಿ ದೇಶದಲ್ಲಿ ಆದ ಭೂ ಕಂಪನ ಪೀಡಿತ ಸಂತ್ರಸ್ಥರಿಗೆ ಮತ್ತು ಯುದ್ಧ ಪೀಡಿತ ಪ್ಯಾಲಸ್ತೀನ್ ಜನತೆಗೆ ಆಹಾರ ಸಾಮಗ್ರಿ ಮತ್ತು ಬಟ್ಟೆ ಬರೆಗಳನ್ನು ರವಾನಿಸಲು ಶ್ರಮಿಸಿದ್ದಾರೆ. ೧೩. ಕಾನೂನು ಭಾಹಿರ ಚಟುವಟಿಕಿಯಿಂದ ದುಬೈ ಜೈಲು ಸೇರಿದ ವ್ಯಕ್ತಿಯ ಅಜ್ಮಾನ್ ಭಾಗದಲ್ಲಿದ್ದ ಮಂಗಳೂರು ಮೂಲದ ಗರ್ಭಿಣಿ ತಾಯಿ ಮತ್ತು ಮೂರು ಮಕ್ಕಳನ್ನು ಉಚಿತ ವಸತಿ ಊಟ ವಿಮಾನ ಟಿಕೆಟ್ ನೀಡಿ ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗದೊಂದಿಗೆ ಸೇರಿ ಮೂರು ಲಕ್ಷ ರೂಗಳಷ್ಟು ಖರ್ಚು ಮಾಡಿ ಸುರಕ್ಷಿತವಾಗಿ ತಾಯಿನಾಡು ಸೇರುವಂತೆ ಮಾಡಿದರು. ಹೀಗೆ ಹತ್ತು ಹಲವು ರೀತಿಯಲ್ಲಿ ಕರ್ನಾಟಕದ ಅನಿವಾಸಿಗಳಿಗೆ ಮತ್ತು ದೇಶ ವಿದೇಶದ ಅನಿವಾಸಿಗಳಿಗೆ ಹೆಮ್ಮೆಯ ದುಬೈ ಕನ್ನಡ ಸಂಘ, ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ, ದುಬೈ ಕೆಎಂಸಿಸಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಜೊತೆ ಸೇರಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
::: ರಫೀಕಲಿ ಅವರಿಗೆ ಲಭಿಸಿದ ಪ್ರಶಸ್ತಿಗಳು ::: ಕೋವಿಡ್ ಕಾಲದಲ್ಲಿ ದುಬೈ ಪೊಲೀಸರು ಮತ್ತು ದುಬೈ ಹೆಲ್ತ್ ಅಥಾರಿಟಿ ಜೊತೆ ಸೇರಿ ಮಾಡಿದ ಸೇವೆಗಾಗಿ ವತನಲ್ ಅಲ್ ಎಮರಾಥ್ ಸಂಸ್ಥೆ ವತಿಯಿಂದ ದುಬೈ ಎಕ್ಸ್ಪೋ-2020 ವೇದಿಕೆಯಲ್ಲಿ ದುಬೈ ಯುವರಾಜ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಅಲ್ ಮಕ್ತುಮ್ ಅವರು ನೇರವಾಗಿ ಪಾಲ್ಗೊಂಡ ಕೋವಿಡ್ ವಾಲಂಟೀರ್ಸ್ ಧನ್ಯತಾ ಸಮಾರಂಭದಲ್ಲಿ ಕೋವಿಡ್ ಹೀರೋಸ್ ಪ್ರಶಸ್ತಿ ಪಡೆದಿದ್ದಾರೆ, ಲೋಕೇಶ್ ಗೌಡ ಮಂಡ್ಯ ಅವರ ಬೆಂಗಳೂರಿನ ಕರುನಾಡ ಸೇವಕರು ಕನ್ನಡ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ, ಕೇರಳದ ಪ್ರಖ್ಯಾತ ಸಾಮಾಜಿಕ ಸಂಸ್ಥೆಯಾದ ದುಬೈ ಕೆ ಎಮ್ ಸಿ ಸಿ ಅವರಿಂದ ಕೋವಿಡ್ ಬ್ರೇವರಿ ಅವಾರ್ಡ್ ಪ್ರಶಸ್ತಿ ಪಡೆದಿದ್ದಾರೆ, ದುಬೈಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರು ಮತ್ತು ಕನ್ನಡಿಗ ಕನ್ನಡ ಕೂಟ ದುಬೈ ಜಂಟಿಯಾಗಿ ಆಯೋಜಿಸಿದ ವಿಶ್ವ ಕನ್ನಡ ಹಬ್ಬದಲ್ಲಿ ತನ್ನ ಕನ್ನಡ ಚಟುವಟಿಕೆಗಳಿಗಾಗಿ ಪಶಸ್ತಿ ಪಡೆದರು ಹಾಗೂ ಹೆಮ್ಮೆಯ ದುಬೈ ಸಂಘದ ವತಿಯಿಂದ ಕೋವಿಡ್ ಕಾಲದ ಸೇವೆಗಾಗಿ ಸನ್ಮಾನ ಸಹ ಸ್ವೀಕರಿಸಿದ್ದಾರೆ, ಇವರ ಕೋವಿಡ್ ಕಾಲದ ಸೇವೆ ಮತ್ತು ವಿದೇಶದಲ್ಲಿ ಮಾಡುವ ಕನ್ನಡ ಸೇವೆಯನ್ನು ಗುರುತಿಸಿ ಮೈಸೂರಿನ ಅರೇಂಜ್ ಸೇವಾ ಸಂಸ್ಥೆಯು ಕನ್ನಡ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲು ತೀರ್ಮಾನಿಸಿದ್ದಾರೆ.
::: ಸಮಾಜಸೇವೆ ಮಾಡಲು ರಫೀಕಲಿ ಅವರಿಗೆ ಪ್ರೇರಣೆ ?::: ರಫೀಕಲಿ ಅವರು ಸಾಮಾನ್ಯ ಬಡ ರೈತ ಕುಟುಂಬಕ್ಕೆ ಸೇರಿದವರಾಗಿದ್ದರಿಂದ ಚಿಕ್ಕಂದಿನಿಂದಲೇ ಕಷ್ಟಗಳನ್ನು ಎದುರಿಸಿಯೂ ಕಣ್ಣಾರೆ ನೋಡಿಯೂ ಬೆಳೆದವರು, ಮೂರು ಹೊತ್ತಿನ ಊಟಕ್ಕೆ ಸಹ ಕಷ್ಟಪಡುತ್ತಿದ್ದ ಇವರ ಕುಟುಂಬ ಆ ಸಮಯದಲ್ಲೂ ಇವರಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ ತಂದೆ ಮತ್ತು ಅಣ್ಣಂದಿಯರನ್ನು ಸದಾ ನೆನೆಯುತ್ತಾರೆ. ಊಟಕ್ಕೆ ಇಲ್ಲದೆ ಹೊಟ್ಟೆ ಹಸಿದವರ ಮತ್ತು ವಿದ್ಯಾಭ್ಯಾಸ ಪಡೆಯಲು ಕಷ್ಟಪಡುವ ಬಡವರ ಕಷ್ಟ ಸ್ವಅನುಭವ ಇರುವುದರಿಂದ ತಮ್ಮ ಕೈಲಾದ ಸಹಾಯ ಮಾಡಿ ಬಡವರ ಕಣ್ಣೀರು ಹೊರೆಸುವ ಒಂದು ಸಣ್ಣ ಸೇವೆಯಾಗಿ ಸಮಾಜಸೇವೆ ಮಾಡುತ್ತಾರೆ ಎಂದು ಹೇಳುತ್ತಾರೆ.
::: ಕೋವಿಡ್ ರೋಗಿಗಳಿಗೆ ಆಹಾರ ಔಷದಿ ವಿತರಣೆ ಕಾರ್ಯದಲ್ಲಿ ಇವರ ಪಾತ್ರ ::: ಕೊರೋನಾ ಮಹಾಮಾರಿ ಪ್ರಾರಂಭವಾಗಿ ಲಕ್ಷಾಂತರ ಜನರು ವಾಸಿಸುವ ದುಬೈಯ ಹೃದಯ ಭಾಗವಾದ ದೇರಾ ದುಬೈ ಕೋರೋನ ವೈರಸ್ ಹಾಟ್ ಸ್ಪಾಟ್ ಸ್ಥಳವಾಗಿ ಮಾರ್ಪಟ್ಟಾಗ ದುಬೈ ಸರ್ಕಾರ ದೇರಾ ಸ್ಥಳವನ್ನು ಸಂಪೂರ್ಣವಾಗಿ ಎರಡು ತಿಂಗಳುಗಳ ಕಾಲ ಲಾಕ್ಡೌನ್ ಮೇಲೆ ಸೀಲ್ಡೌನ್ ಮಾಡಿದರು ( ಈ ಪ್ರದೇಶದಿಂದ ಯಾರು ಸಹ ಹೊರ ಹೋಗುವಾಗಿಲ್ಲ ಮತ್ತು ಇಲ್ಲಿಗೆ ಯಾರು ಸಹ ಒಳ ಬರುವಾಗಿಲ್ಲ ಎಂಬ ನಿಷೇದಾಜ್ಞೆ) , ಈ ಸೀಲ್ಡೌನ್ ಸಮಯದಲ್ಲಿ ದುಬೈ ಪೊಲೀಸರು ಮತ್ತು ದುಬೈ ಅರೋಗ್ಯ ಸಂಸ್ಥೆಯೊಂದಿಗೆ ಸೇರಿ ವತನ್ ಅಲ್ ಎಮಾರತ್ ಫೌಂಡೇಶನ್ ಅಧೀನದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಕರ್ನಾಟಕದದಿಂದ ಹೆಮ್ಮೆಯ ದುಬೈ ಕನ್ನಡ ಸಂಘಕ್ಕೆ ಮಾತ್ರ ಅವಕಾಶ ಸಿಕ್ಕಿತ್ತು, ಆ ತಂಡವನ್ನು ರಫೀಕಲಿ ಅವರು ಮುನ್ನೆಡಸಿದ್ದರು. ಸೀಲ್ಡೌನ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಜನರಿಗೆ ಆಹಾರ ಪೂರೈಕೆ, ಅಗತ್ಯ ಔಷದಿ ಪೂರೈಕೆ ಮತ್ತು ಸಾವಿರಾರು ಕೋವಿಡ್ ರೋಗಿಗಳನ್ನು ( ನೂರಾರು ಕನ್ನಡಿಗ ರೋಗಿಗಳನ್ನು ಸಹ ) ಐಸೋಲೇಷನ್ ವಾರ್ಡುಗಳಿಗೆ ಮತ್ತು ಆಸ್ಪತ್ರೆಗೆ ವರ್ಗಾವಣೆ ಮಾಡುವ ಕೆಲಸವನ್ನು ದುಬೈ ಪೊಲೀಸರು ಮತ್ತು ದುಬೈ ಅರೋಗ್ಯ ಸಂಸ್ಥೆಯ ಜೊತೆ ಸೇರಿ ಬಹಳ ಅಚ್ಚುಕಟ್ಟಾಗಿ ಇವರು ನಿರ್ವಹಿಸಿ ಇಲ್ಲಿನ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾದರು. ಕೋವಿಡ್ ಸಂಕಷ್ಟದಲ್ಲಿದ್ದ ಕನ್ನಡಿಗರನ್ನು ತಾಯಿನಾಡಿಗೆ ಕಳುಹಿಸಿದರಲ್ಲಿ ರಫೀಕಲಿ ಅವರ ಪಾತ್ರ, ಹೆಮ್ಮೆಯ ದುಬೈ ಕನ್ನಡ ಸಂಘದ ಸಮಿತಿ ಸದಸ್ಯರಾದ ಶ್ರೀ ರಫೀಕಲಿ ಕೊಡಗು ಅವರು ದುಬೈಯಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರನ್ನು ಮತ್ತು ಎಮೆರ್ಜನ್ಸಿ ಇರುವ ಕನ್ನಡಿಗರನ್ನು ಗುರುತಿಸಿ ಚಾರ್ಟೆಡ್ ವಿಮಾನ ಮತ್ತು ವಂದೇ ಭಾರತ್ ವಿಮಾನದಲ್ಲಿ ಸ್ಥಳಾವಕಾಶ ಪಡೆದುಕೊಡುವಲ್ಲಿ ಕಾರ್ಯ ನಿರ್ವಹಿಸಿದರು ಮತ್ತು ಹೆಮ್ಮೆಯ ಕನ್ನಡಿಗರು ತಂಡದ ಇತರ ಸಮಿತಿ ಸದಸ್ಯರ ಜೊತೆ ಸೇರಿ ದಾನಿಗಳ ಸಹಾಯದಿಂದ ಕೆಲಸ ಕಳೆದುಕೊಂಡ ಮತ್ತು ವಿಸಿಟಿಂಗ್ ವೀಸಾದಲ್ಲಿ ಬಂದು ಸಿಲುಕಿಕೊಂಡ ಟಿಕೆಟ್ ಪಡೆಯಲು ಹಣವಿಲ್ಲದ ಕನ್ನಡಿಗರಿಗೆ ವಿಮಾನ ಟಿಕೆಟ್ ಸಹಾಯ ಮಾಡಿ ಊರಿಗೆ ಕಳುಹಿಸಿದರು. ಕೋವಿಡ್-19 ಮಾರಕ ಖಾಯಿಲೆಯಿಂದ ಇಡೀ ದೇಶವೇ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಲಾಕ್ ಡೌನ್ ಸಡಿಲಗೊಂಡಾಗ ಯುಎಇಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗರ್ಭಿಣಿಯರು, ಮೆಡಿಕಲ್ ಎಮರ್ಜಿನ್ಸಿ, ಮಕ್ಕಳು ಮತ್ತು ಹಿರಿಯರು ಸೇರಿ ಹಲವು ಕನ್ನಡಿಗರು ಮತ್ತು ಕನ್ನಡಿಗರೇತರನ್ನು ದುಬೈ ಕನ್ನಡ ಸಂಘ ಮತ್ತು ಎಸ್ ಕೆ ಎಸ್ ಎಸ್ ಎಫ್ ಇದರ ಜೊತೆ ಸೇರಿ ಸುರಕ್ಷಿತವಾಗಿ ಭಾರತಕ್ಕೆ ತಲುಪಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದರು ಹಾಗೆ ಕರ್ನಾಟಕದ ಗರ್ಭಿಣಿಯರು, ಮಹಿಳೆಯರು ಮಕ್ಕಳು ಸೇರಿ ಹಲವರಿಗೆ ಸಾಮಾನ್ಯ ವಿಮಾನ ಸೇವೆ ಇಲ್ಲದ ಸಮಯದಲ್ಲಿ ಕಾನ್ಸುಲೇಟ್ ಮುಖಾಂತರ ಮತ್ತು ಚಾರ್ಟೆಡ್ ವಿಮಾನಗಳ ಮೂಲಕ ಕರ್ನಾಟಕಕ್ಕೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಹಾಗೂ ಸೌದಿ ಅರೇಬಿಯಾಗೆ ತೆರಳಲು ದುಬೈ ಮುಕಾಂತರ ಆಗಮಿಸಿದ ಜನರಿಗೆ ಸೌದಿ ಅರೇಬಿಯಾ ನೇರ ವಿಮಾನ ಸಂಪರ್ಕ ನಿಲ್ಲಿಸಿದಾಗ ಕುವೈತ್ ಮುಕಾಂತರ ತೆರಳಲು ದುಬೈ ಇಂಡಿಯನ್ ಕಾನ್ಸುಲೇಟ್ ನೀಡಿದ ವಿಮಾನ ಟಿಕೆಟ್ ಸಹಾಯವನ್ನು ಹಲವು ಕನ್ನಡಿಗರಿಗೆ ತಲುಪಿಸುವಲ್ಲಿ ಕನ್ನಡ ಸಂಘದ ಜೊತೆ ಸೇರಿ ಪ್ರಮುಖ ಪಾತ್ರ ವಹಿಸಿದ್ದರು.
::: ಉದ್ಯೋಗ ಕೊಡಿಸುವಲ್ಲಿ ಇವರ ಪಾತ್ರ ::: ತಮ್ಮ ಕುಟುಂಬವನ್ನು ಸಾಗಿಸಲು ಮತ್ತು ತಾನು ಒಂದೊಳ್ಳೆ ಜೀವನ ಕಟ್ಟಿಕೊಳ್ಳಬೇಕೆಂದು ಸಾವಿರ ಕನಸು ಹೊತ್ತುಕೊಂಡು ಸಪ್ತ ಸಾಗರ ದಾಟಿ ಅರಬರ ನಾಡು ಯುಎಇ ಯಲ್ಲಿ ತಲುಪುವ ಕನ್ನಡಿಗರಿಗೆ ಲಭ್ಯವಿರುವ ಉದ್ಯೋಗದ ಮಾಹಿತಿ ಕೊಡುವುದು, ವಾಕ್ ಇನ್ ಇಂಟರ್ವ್ಯೂ ಬಗ್ಗೆ ಮಾಹಿತಿ ನೀಡುದು, ಕನ್ನಡಿಗರು ಮತ್ತು ಪರಿಚಯದ ಕನ್ನಡೇತರರ ಕಂಪೆನಿಗಳಲ್ಲಿ ಕೆಲಸಕ್ಕೆ ಜನ ಬೇಕಾದರೆ ಸಾಮಾಜಿಕ ಜಾಲತಾಣಗಲ್ಲಿ ವಿಡಿಯೋ ಮತ್ತು ಪೋಸ್ಟ್ ಮಾಡಿ ಕೆಲಸ ಹುಡುಕುವ ಕನ್ನಡಿಗರಿಗೆ ಮತ್ತು ಕನ್ನಡೇತರರಿಗೆ ತಿಳಿಸುತ್ತಾರೆ, ಹಾಗೆ ದಲ್ಲಾಳಿಗಳಿಂದ ಮೋಸ ಹೋದ ಜನರಿಗೆ ಮತ್ತು ಊರಿನಿಂದ ಕೆಲಸ ಹುಡುಕಿ ವಿದೇಶಗಳಿಗೆ ಹೋಗಲು ಇಚ್ಛಿಸುವವರಿಗೆ ಸರಿಯಾದ ಮಾಹಿತಿ ನೀಡಿ ಸಹಾಯ ಮಾಡುತ್ತಾರೆ. ಹೆಮ್ಮೆಯ ದುಬೈ ಕನ್ನಡ ಸಂಘದವರ ಜೊತೆ ಸೇರಿ ವರ್ಷಕ್ಕೊಮ್ಮೆ ಜಾಬ್ ಫೇರ್ ಮತ್ತು ಜಾಬ್ ಗೈಡೆನ್ಸ್ ಆಯೋಜಿಸಿ ಹಲವು ಕನ್ನಡಿಗರಿಗೆ ಕೆಲಸ ಕೊಡಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಕೆಲಸದಲ್ಲಿರುವವವರು ಉದ್ಯೋಗ ಭಾಗವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರ್ಮಿಕ ಕಾನೂನು ಸಲಹೆ ಮತ್ತು ಎಂಬಸ್ಸಿ ಹಾಗೂ ಕನ್ನಡ ವಕೀಲರ ಸಹಾಯದೊಂದಿಗೆ ಕಾರ್ಮಿಕರಿಗೆ ಮತ್ತು ವ್ಯಾಪಾರಸ್ಥ ಕನ್ನಡಿಗರಿಗೆ ದುಬೈ ನ್ಯಾಯಾಲಯ ಮುಕಾಂತರ ಸಹಾಯ ಮಾಡಿದ್ದರು.
::: ಕಷ್ಟಕ್ಕೆ ಸಿಲುಕಿದವರಿಗೆ ಆಹಾರ, ಔಷದಿ ಮತ್ತು ವಸತಿ ಕಲ್ಪಿಸುವಲ್ಲಿ ಇವರ ಪಾತ್ರ ::: ರಫೀಕಲಿ ಅವರು ಹೆಮ್ಮೆಯ ಕನ್ನಡಿಗರು ಸಂಘದ ಸಮಿತಿ ಸದಸ್ಯರೊಂದಿಗೆ ಸೇರಿ ಕೋವಿಡ್ ಲಾಕ್ಡೌನ್ ಕಾರಣ ಕೆಲಸ ಕಳೆದುಕೊಂಡ ನೂರಾರು ಕನ್ನಡಿಗರಿಗೆ, ವಿಸಿಟ್ ವೀಸಾದಲ್ಲಿ ಕೆಲಸ ಹುಡುಕಲು ಬಂದ ನೂರಾರು ಕನ್ನಡಿಗರಿಗೆ ಮತ್ತು ಸಂಕಷ್ಟದಲ್ಲಿದ್ದ ಕನ್ನಡ ಕುಟುಂಬಗಳಿಗೆ ದಾನಿಗಳ ಸಹಾಯದಿಂದ ಆಹಾರ ಪದಾರ್ಥ ಮತ್ತು ವಾಸ ಸ್ಥಳದ ವ್ಯವಸ್ಥೆ ಮಾಡಿಕೊಟ್ಟರು, ಅದು ಅಲ್ಲದೆ ಹೆಮ್ಮೆಯ ಯುಎಇ ಕನ್ನಡ ಡಾಕ್ಟರ್ಸ್ ಜೊತೆ ಸೇರಿ ಫೀಸ್ ಭರಿಸಲು ಸಾಧ್ಯವಿಲ್ಲದ ಹಲವು ಕನ್ನಡಿಗ ರೋಗಿಗಳಿಗೆ ಉಚಿತ ಮೆಡಿಕಲ್ ಚಿಕಿತ್ಸೆ ನೀಡುವಲ್ಲಿ ಮತ್ತು ಉಚಿತ ಔಷದಿ ಪೂರೈಸುವಲ್ಲಿ ಸಹ ಕಾರ್ಯನಿರ್ವಹಿಸಿದರು, ಕೇರಳದ ಕೆ ಎಮ್ ಸಿ ಸಿ ಸಂಘಟನೆ ಕಾರ್ಯಕರ್ತರೊಂದಿಗೆ ಸಹ ಸೇರಿ ಕೊರೋನ ಸಂಕಷ್ಟದ್ದಲ್ಲಿದ್ದ ಹಲವರಿಗೆ ಆಹಾರ ಔಷದಿ ತಲುಪಿಸುವಲ್ಲಿ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸಸಿದ್ದರು, ಈಗಲೂ ಸಹ ಸಂಕಷ್ಟದಲ್ಲಿರುವ ಕುಟುಂಬಕ್ಕೆ ವಿಮಾನ ಟಿಕೆಟ್ ನೀಡಿ ಊರಿಗೆ ಕಳಿಸೋದು ಮತ್ತು ಆಸ್ಪತ್ರೆಯಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದಾರೆ.
::: ದಲ್ಲಾಗಳಿಂದ ಮೋಸ ಹೋದವರಿಗೆ ಸಹಾಯ ತಲುಪಿಸುವಲ್ಲಿ ಇವರ ಪಾತ್ರ ::: ದಲ್ಲಾಗಳಿಂದ ಮೋಸ ಹೋಗಿ ಯುಎಇಯಲ್ಲಿ ತಾವು ಇಷ್ಟಪಡದ ಹೇಳಿಕೊಳ್ಳಲು ಸಹ ನಾಚಿಕೆ ಆಗುವ ಕೆಲಸಕ್ಕೆ ನೂಕಲ್ಪಟ್ಟ ಹಲವು ಕನ್ನಡತಿಯರನ್ನು ಸೇರಿಸಿ ಭಾರತೀಯ ಮಹಿಳೆಯರನ್ನು ರಕ್ಷಿಸಿ ದಾನಿಗಳು ಮತ್ತು ಇಂಡಿಯನ್ ಎಂಬಸ್ಸಿ ಸಹಾಯದೊಂದಿಗೆ ತಾಯಿನಾಡಿಗೆ ಸುರಕ್ಷಿತವಾಗಿ ಹಿಂದಿರುಗಿಸುತ್ತಾರೆ ಮತ್ತು ಸಂಯುಕ್ತ ಅರಬ್ ಸಂಸ್ಥಾನದಲ್ಲಿಯೇ ಬೇರೆ ಕೆಲಸ ಹುಡುಕಿ ಕೊಡಲು ಸಹಾಯ ಮಾಡಿದ್ದಾರೆ ಹಾಗೆ ಯುಎಇಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ಕೆಲಸ ಹುಡುಕಲು ಬಂದು ವಸತಿ ಆಹಾರ ಇಲ್ಲದೆ ಕಷ್ಟ ಅನುಭವಿಸುವರಿಗೆ ಸಹಾಯ, ಮೋಸಗಾರ ದಲ್ಲಾಗಳಿಂದ ಮೋಸ ಹೋಗಿ ಯುಎಇ ಯ ಯಾವುದೇ ಭಾಗದಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಆಹಾರ ವಸತಿ ಮತ್ತು ತಾಯಿನಾಡಿಗೆ ಹಿಂದಿರುಗಲು ಔಟ್ ಪಾಸ್ ಮತ್ತು ವಿಮಾನ ಟಿಕೇಟನ್ನು ದಾನಿಗಳ ಸಹಾಯದೊಂದಿಗೆ ನೀಡಿ ಸಹಾಯ ಮಾಡಿದ್ದಾರೆ.
::: ಅನ್ಯಾಯದ ವಿರುದ್ಧ ಧ್ವನಿ ::: ಕನ್ನಡ ಮಣ್ಣಿಗೆ ಅನ್ಯಾಯವಾಗುವಾಗ ದೂರದ ವಿದೇಶದಿಂದಲೇ ತಾಯಯ್ನಾಡಿಗಾಗಿ ದ್ವನಿ ಎತ್ತಿದ್ದರು, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ, ಕಾವೇರಿ ಬಿಕ್ಕಟ್ಟು ಮತ್ತು ಮಹದಾಯಿ ಯಂತ ಕರ್ನಾಟಕಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಈ ಯುಎಇ ದೇಶದ ಕಾನೂನಿನ ಚೌಕಟ್ಟಿನ ಒಳಗೆ ತಮ್ಮದೇ ರೀತಿಯಲ್ಲಿ ಧ್ವನಿ ಎತ್ತಿದ್ದಾರೆ ಭಾರತ ದೇಶದಲ್ಲಿ ನಡೆಯುವ ಅಹಿತಕರ ಘಟನೆಗಳ ವಿರುದ್ಧ ಮತ್ತು ಭಾರತ ದೇಶಕ್ಕೆ ಇತರೆ ದೇಶಗಳಿಂದ ತೊಂದರೆ ಅನ್ಯಾಯವಾದಾಗ ಸಾಮಾಜಿಕ ಜಾಲತಾಣಗಲ್ಲಿ ಧ್ವನಿ ಎತ್ತುತ್ತಾರೆ, ಹಾಗೆ ದುಬೈಯಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಟ್ವಿಟ್ಟರ್ ಅಭಿಯಾನವನ್ನು ಸಹ ಕೈಗೊಂಡಿದ್ದರು. ಕೊರೋನ ಮಹಾಬಿಕ್ಕಟಿನ ಸಮಯದಲ್ಲಿ ಜನರಿಗೆ ಸಹಾಯ ತಲುಪಿಸಲು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಸಮುದಾಯದ ದಾನಿಗಳು ಜಾತಿ ಧರ್ಮ ಬೇಧವಿಲ್ಲದೆ ಸಹಾಯ ಹಸ್ತ ನೀಡಿದ್ದನ್ನು ಇವರು ಬಹಳ ಸಂತೋಷ ಮತ್ತು ಹೆಮ್ಮೆಯಿಂದ ನಮ್ಮೊಂದಿಗೆ ಹಂಚಿಕೊಂಡರು ಮತ್ತು ಎಲ್ಲಾ ದಾನಿಗಳಿಗೆ ಈ ನಮ್ಮ ಮಾಧ್ಯಮದ ಮುಕಾಂತರ ಧನ್ಯವಾದಗಳನ್ನು ತಿಳಿಸಿದ್ದರು. ಹಾಗೆ ಕೊರೋನ ಸಮಯದಲ್ಲಿ ಸಹಾಯ ಪಡೆದುಕೊಂಡ ಜನರು ತಮ್ಮ ಸಂಕಷ್ಟಕ್ಕೆ ಸಹಾಯ ಸಿಕ್ಕಿತೆಂದು ಕಣ್ಣೀರು ಹಾಕಿದ್ದನ್ನು ಇವರು ವಿವರಿಸಿದ್ದರು. ಕನ್ನಡಿಗರಲ್ಲದೆ ವಿದೇಶಿ ಪ್ರಜೆಗಳಿಗೂ ದಾನಿಗಳ ಸಹಕಾರದಿಂದ ಸಹಾಯ ಮಾಡಲು ಅವಕಾಶ ಸಿಕ್ಕಿತೆಂದು ಅಭಿಮಾನದಿಂದ ಮತ್ತು ಸಂತೋಷದಿಂದ ವ್ಯಕ್ತಪಡಿಸಿದರು. ಹಾಗೆ ಅವರೊಂದಿಗೆ ಕೋವಿಡ್ ಕಾಲದಲ್ಲಿ ಬೆನ್ನೆಲುಬಾಗಿ ನಿಂತ ತಂಡದ ಎಲ್ಲಾ ಸದಸ್ಯರು ಮತ್ತು ಉಪ ತಂಡದ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು. ಕೋವಿಡ್ ಕಾಲದಲ್ಲಿ ಎಲ್ಲರ ಸಂಕಷ್ಟಕ್ಕೆ ಸಹಾಯ ಮಾಡಲು ಆಗದಿದ್ದರೂ ಅಳಿಲು ಸೇವೆ ಮಾಡಿ ಜನರ ಸಂಕಷ್ಟದಲ್ಲಿ ಸ್ವಲ್ಪವಾದರೂ ಪಾಲುದಾರಗಿ ಅವರ ಸಂತೋಷಕ್ಕೆ ಕಾರಣವಾದ ಸಂತೃಪ್ತಿ ಇದೆ ಎಂದು ರಫೀಕಲಿ ಅವರು ಹೇಳಿದ್ದಾರೆ.