
ಮಡಿಕೇರಿ ಆ.23 NEWS DESK : ನೆಲ್ಲಿಹುದಿಕೇರಿಯ ನೈಮ ಎಜುಕೇಷನಲ್ ಮತ್ತು ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆ.27 ರಿಂದ ನೆಲ್ಲಿಹುದಿಕೇರಿಯಲ್ಲಿ ‘ಸ್ವಾಭಿಮಾನದ ಬದುಕಿಗೆ ಶಿಕ್ಷಣ’ ಎಂಬ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನಡೆಯಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಒ.ಎಂ.ನೌಷದ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಅಕ್ಟೋಬರ್ ಕೊನೆಯ ವಾರದಲ್ಲಿ ಬರಲಿರುವ ಕಂದಾಯ ಪರಿವೀಕ್ಷಕರ ಹುದ್ದೆ, ಎಎಸ್‍ಐ ಮತ್ತು ಪಿಡಿಒ ಆಯ್ಕೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿಯಲ್ಲಿ ನೀಡುವ ಉದ್ದೇಶದಿಂದ ನೆಲ್ಲಿಹುದಿಕೇರಿಯ ಶಾದಿ ಮಹಲ್‍ನಲ್ಲಿ ತರಬೇತಿ ಆಯೋಜಿಸಲಾಗಿದೆ. ಈಗಾಗಲೆ ಸುಮಾರು 64 ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ತರಬೇತಿ ನೀಡುತ್ತಿದ್ದು, ಆ.27ರ ಬಳಿಕ ಪ್ರತಿ ಭಾನುವಾರ ನುರಿತ ವಿಷಯ ತಜ್ಞರಿಂದ ತರಬೇತಿಯನ್ನು ನೀಡಲಾಗುತ್ತದೆಂದು ತಿಳಿಸಿದರು. ತರಬೇತಿ ಶಿಬಿರವನ್ನು ಅಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಶೈಕ್ಷಣಿಕ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕಳೆದ ಎರಡು ವರ್ಷದ ಹಿಂದೆ ಸಮಾನ ಮನಸ್ಕ ಯುವಕರು ಸೇರಿ ಸ್ಥಾಪಿಸಿದ ಎಜುಕೇಷನಲ್ ಮತ್ತು ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ತಲೆಮಾರು ಶಿಕ್ಷಣದಿಂದ ವಂಚಿತವಾಗದೆ ಸ್ಪರ್ಧಾತ್ಮಕ ಸನ್ನಿವೇಶಕ್ಕೆ ತಕ್ಕಂತೆ ಸಜ್ಜುಗೊಳಿಸಲು ವಿವಿಧ ತರಬೇತಿ, ಕೋಚಿಂಗ್, ಗೈಡೆನ್ಸ್ ಮುಂತಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತ ಬರುತ್ತಿದೆಯೆಂದು ತಿಳಿಸಿದರು. ಜಿಲ್ಲೆಯ ಸ್ಪರ್ಧಾ ಆಕಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಿನ ತರಗತಿಗಳಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 7022355089, 9108374361 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ತರಬೇತಿ ಕೇಂದ್ರಕ್ಕೆ ಚಿಂತನೆ : ನೆಲ್ಲಿಹುದಿಕೇರಿಯಲ್ಲಿ ವಿವಿಧ ತರಬೇತಿಗಳನ್ನು ನೀಡುವ ಒಂದು ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶ ನೈಮ ಎಜುಕೇಷನಲ್ ಮತ್ತು ವೆಲ್ಫೇರ್ ಚಾರಿಟಬಲ್ ಟ್ರಸ್ಟ್‍ಗೆ ಇದೆ. ಈಗಾಗಲೇ ತರಬೇತಿ ಕೇಂದ್ರ ಸ್ಥಾಪನೆಗೆ ಜಾಗವನ್ನು ಗುರುತಿಸಲಾಗಿದೆಯೆಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಕಾರ್ಯದರ್ಶಿ ಪಿ.ಕೆ.ಮುಸ್ತಫ, ಉಪಾಧ್ಯಕ್ಷ ಷಂಶುದ್ದೀನ್, ಖಜಾಂಚಿ ಅನಾಸ್ ಅಬ್ದುಲ್ಲ ಉಪಸ್ಥಿತರಿದ್ದರು.










