ಮಡಿಕೇರಿ ಆ.24 NEWS DESK : ಕೊಡವಾಮೆರ ಕೊಂಡಾಟ ಸಂಘಟನೆಯ ಐದನೇ ವಾರ್ಷಿಕೋತ್ಸವದ ಅಂಗವಾಗಿ ಕವಿವೊರ್ಮೆ ಕಾರ್ಯಕ್ರಮ ನಡೆಯಿತು. ಗೂಗಲ್ ಮೀಟ್ ವೆಬಿನಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಕಿರಿಯ ಕವಿಗಳು ಭಾಗವಹಿಸಿ ಸಂಭ್ರಮಿಸಿದರು. ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಸರ್ಕಾರ ದೂರದೃಷ್ಟಿಯಿಂದ ಭಾಷೆಗಳ ಅಭಿವೃದ್ಧಿಗಾಗಿ ಅಕಾಡೆಮಿಗಳನ್ನು ರಚಿಸಿದೆ. ಇದರ ಸದ್ಬಳಕೆಯನ್ನು ನಾವೆಲ್ಲ ಮಾಡಿಕೊಳ್ಳುವ ಮೂಲಕ, ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿದೆ. ಈ ನಿಟ್ಟಿನಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆ ಕಳೆದ ಐದು ವರ್ಷಗಳಿಂದ ದುಡಿಯುತ್ತಿದ್ದು, ಎಲ್ಲಾ ಸಂಘ ಸಂಸ್ಥೆಗಳು ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಗೆ ಸಾಹಿತ್ಯ ಅಕಾಡೆಮಿಯ ಜೊತೆ ಎಲ್ಲರೂ ಸಹಕರಿಸಬೇಕೆಂದು ಕೋರಿದರು. ಭೂ ಸೇನಾಧಿಕಾರಿ ಹಾಗೂ ಕೊಡವಾಮೆರ ಕೊಂಡಾಟ ಸಂಘಟನೆಯ ಸದಸ್ಯ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ ಮಾತನಾಡಿ, ಜನಾಂಗ ಮತ್ತು ಭಾಷೆಯ ಬೆಳವಣಿಗೆಗೆ ದುಡಿಯುವ ಕೈಗಳು ಬೇಕಾಗಿವೆ. ಆ ಕೆಲಸವನ್ನ ಕೊಡವಾಮೆರ ಕೊಂಡಾಟ ಸಂಘಟನೆ ಕಳೆದ ಐದು ವರ್ಷಗಳಿಂದ ನಿರಂತರ ಮಾಡುತ್ತಿದ್ದು, ಪ್ರಾಮಾಣಿಕವಾಗಿ ದುಡಿಯುವರಿಗೆ ಅವಮಾನ ಮತ್ತು ಅಪವಾದಗಳು ಸಾಮಾನ್ಯ, ಆದರೆ ಆ ಎಲ್ಲ ಅಪವಾದಗಳನ್ನು ಮೆಟ್ಟಿ ನಿಂತು ಜನಾಂಗದ ಸೇವೆಯನ್ನು ಮಾಡುವವರಿಗೆ ಗುರುಕಾರೋಣ ಮತ್ತು ತಾಯಿ ಕಾವೇರಿ ಶ್ರೀರಕ್ಷೆ ಇರಲಿದೆ. ಮುಂದೆಯೂ ಕೂಡ ನಿರಂತರ ಸೇವೆ ಮುಂದುವರೆಯಲಿ ಎಂದರು. ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಹಾಗೂ ಕೊಡವಾಮೆರ ಕೊಂಡಾಟ ಸಂಘಟನೆಯ ಸದಸ್ಯೆ ಕೂಪದಿರ ಶಾರದಾ ನಂಜಪ್ಪ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿ ನಮ್ಮ ಎರಡು ಕಣ್ಣುಗಳಿದ್ದಂತೆ, ಯಾವುದೇ ಒಂದು ಕಣ್ಣು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದರೆ ಕಾರ್ಯ ಪರಿಪೂರ್ಣವಾಗುವುದಿಲ್ಲ. ಇವೆರಡನ್ನೂ ಒಟ್ಟಿಗೆ ಬೆಳೆಸಲು ಶ್ರಮಿಸುತ್ತಿರುವ ಕೊಡವಾಮೆರ ಕೊಂಡಾಟ ಸಂಘಟನೆಯ ನಡೆ, ಶ್ರಮ ಮತ್ತು ಬದ್ಧತೆ ಶ್ಲಾಘನೀಯ. ಮುಂದೆಯೂ ಸಂಘಟನೆಯಿಂದ ಮತ್ತಷ್ಟು ಸೇವೆ ಜನಾಂಗ ಮತ್ತು ಕೊಡಗಿಗೆ ಸಲ್ಲುವಂತಾಗಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆಯ ಸ್ಥಾಪಕ ಹಾಗೂ ಅಧ್ಯಕ್ಷ ಚಾಮೆರ ದಿನೇಶ್ ಬೆಳಯಪ್ಪ, ಸರ್ವರ ಸಹಕಾರದಿಂದ ಜನಾಂಗಕ್ಕೆ ಅಳಿಲು ಸೇವೆ ಸಲ್ಲಿಸುವ ಅವಕಾಶ ಸಂಘಟನೆಗೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಸರ್ವರ ಸಹಕಾರದೊಂದಿಗೆ ದುಡಿಯುವುದಾಗಿ ಹೇಳಿದರಲ್ಲದೆ, ಕಳೆದ ಐದು ವರ್ಷಗಳಲ್ಲಿ ಸಂಘಟನೆಗೆ ಸಹಕರಿಸಿದ ಸದಸ್ಯರು, ದಾನಿಗಳು, ಕೊಡವ ಸಮಾಜ, ಸಂಘಟನೆಗಳು, ಹಾಗೂ ಎಲ್ಲಾ ಮಾದ್ಯಮಗಳು, ಎಲ್ಲಾ ಇಲಾಖೆಗಳು, ಜಿಲ್ಲೆ ಮತ್ತು ಹೊರಜಿಲ್ಲೆಯ ಎಲ್ಲಾ ಧರ್ಮ, ಜನಾಂಗಗಳಿಗೆ ಧನ್ಯವಾದ ಅರ್ಪಿಸಿದರು. ಇದೇ ಸಂದರ್ಭ, ಸಂಘನೆ ನಡೆಸಲು ಉದ್ದೇಶಿಸಿರುವ ಕೊಡವ ಜಾನಪದ ನಮ್ಮೆಗೆ, ಸರ್ವರ ಸಹಕಾರ ಕೋರಿದರು. ಸಂಘಟನೆಯ ಹಿರಿಯ ಸದಸ್ಯ ಚೆನಿಯಪಂಡ ಮನು ಮಂದಣ್ಣ ನೆಲ್ಲಕ್ಕಿಯಲ್ಲಿ ಮೂಲ ಕೊಡವ ಸಂಪ್ರದಾಯದಂತೆ ನೇರ್ಚೆ ಕಟ್ಟಿ, ಕಾರೋಣರಿಗೆ ಅಕ್ಕಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘಟನೆಯ ನಿರ್ದೇಶಕ ಹಾಗೂ ಕವಿವೊರ್ಮೆ ಸಂಚಾಲಕ ಅಜ್ಜಮಕ್ಕಡ ವಿನು ಕುಶಾಲಪ್ಪ ಸ್ವಾಗತಿಸಿದರು. ಬೊಳ್ಳೆರ ಪೃಥ್ವಿ ಪೂಣಚ್ಚ ನಿರೂಪಿಸಿ ವಂದಿಸಿದರು. ಕಾಡೆಮಾಡ ಸುವಿತ್ ಸೋಮಣ್ಣ ಯೂಟ್ಯೂಬ್ ಮತ್ತು ಫೇಸ್ಬುಕ್ ಲೈವ್ ನಡೆಸಿದರು. ಕವಿವೊರ್ಮೆಯಲ್ಲಿ ಉಳುವಂಗಡ ಕಾವೇರಿ ಉದಯ, ಬಿ.ಜಿ.ಅನಂತಶಯನ, ಪುಟ್ಟಿಚಂಡ ಡಾನ್ ದೇವಯ್ಯ, ಮಹದೇವಸ್ವಾಮಿ ಮೈಸೂರು, ಮಾಚಪಂಡ ತುಳಸಿಕುಶಾಲಪ್ಪ, ಕುಂಞಿರ ಗಿರೀಶ್ ಭೀಮಯ್ಯ, ಕರವಂಡ ಸೀಮಾಗಣಪತಿ, ಅಜ್ಜಮಕ್ಕಡ ವಿನು ಕುಶಾಲಪ್ಪ, ಚಾಮೆರ ನಕ್ಷದೇಚಮ್ಮ, ಚಂಗಚಂಡ ರಶ್ಮಿ ನಿತಿನ್, ಉಳುವಂಗಡ ಲೋಹಿತ್ ಭೀಮಯ್ಯ, ನೂರೆರ ಬಬಿತ, ಚೆಟ್ಟಿರ ಗ್ರಂಥ ಕಾರ್ಯಪ್ಪ, ಪೇರಿಯಂಡ ಯಶೋಧ, ಪಂದ್ಯಂಡ ರೇಣುಕಸೋಮಯ್ಯ, ತಂಬುಕುತ್ತಿರ ರೇಖಸೋಮಯ್ಯ, ಬೊವ್ವೆರಿಯಂಡ ಪ್ರಮೋದ್, ಮಾಳೇಟಿರ ಸೀತಮ್ಮ ವಿವೇಕ್, ಅಮ್ಮಂಡ ಅನುಪಮ ತಿಮ್ಮಯ್ಯ, ಅವರುಗಳು ಕವನ ವಾಚಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.









