ಮಡಿಕೇರಿ ಸೆ.6 NEWS DESK : ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದ ಪುಣ್ಯಕ್ಷೇತ್ರ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬ ಪ್ರಯುಕ್ತ ಬಾಗಿನ ಅರ್ಪಿಸಿಸಲಾಯಿತು. ಶ್ರೀ ಸಿದ್ದೇಶ್ವರ ಮತ್ತು ಬಸವೇಶ್ವರ ಹಾಗೂ ತಾಯಿ ಹೊನ್ನಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಾಸಕ ಡಾ.ಮಂತರ್ ಗೌಡ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಶಾಸಕರು ಶ್ರೀ ಸಿದ್ದೇಶ್ವರ ಮತ್ತು ಶ್ರೀ ಬಸವೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹಾಗೂ ತಾಯಿ ಹೊನ್ನಮ್ಮ ಕೆರೆಗೆ ಬಾಗಿನ ಸಮರ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ ಎಂದು ತಿಳಿಸಿದರು. ಸುಮಾರು ಇನ್ನೂರು-ಮುನ್ನೂರು ವರ್ಷಗಳಿಂದ ತಾಯಿ ಹೊನ್ನಮ್ಮನ ಕೆರೆಗೆ ನವ ದಂಪತಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿಕೊಂಡು ಬರುತ್ತಾರೆ. ಗೌರಿ ಹಬ್ಬ ಆಚರಣೆಯಿಂದ ಕುಟುಂಬದವರೆಲ್ಲರೂ ಒಂದೆಡೆ ಸೇರುವುದು ವಿಶೇಷವಾಗಿದೆ ಎಂದರು. ಈ ಬಾರಿ ಒಳ್ಳೆಯ ಮಳೆಯಾಗಿದ್ದು, ಉತ್ತಮ ಬೆಳೆಯಾಗಲಿದೆ. ಹೆಚ್ಚಿನ ಮಳೆಯಿಂದಾಗಿ ಕೆಲವು ಕಡೆ ತೊಂದರೆಯೂ ಸಹ ಆಗಿದೆ. ಆ ನಿಟ್ಟಿನಲ್ಲಿ ಎಲ್ಲರಿಗೂ ಒಳಿತಾಗಲಿ ಎಂದು ಶಾಸಕರು ನುಡಿದರು.
ಗ್ಯಾರಂಟಿ ಯೋಜನೆಗಳಿಗೂ ಹಾಗೂ ಸಿಬ್ಬಂದಿಗಳ ವೇತನಕ್ಕೂ ಸಂಬಂಧವಿಲ್ಲ :: ಅಂಗನವಾಡಿ ಸಿಬ್ಬಂದಿಗಳಿಗೆ ವೇತನ ವಿಳಂಬ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು ಸದ್ಯದಲ್ಲೇ ವೇತನ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳಿಗೂ ಹಾಗೂ ಸಿಬ್ಬಂದಿಗಳ ವೇತನಕ್ಕೂ ಯಾವುದೇ ಸಂಬಂಧವಿಲ್ಲ. ಗ್ಯಾರಂಟಿ ಯೋಜನೆಗಳು ಬಡವರ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗಿವೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಇತರ ಪ್ರಗತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಮಡಿಕೇರಿ ದಸರಾ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು ಮಡಿಕೇರಿ ದಸರಾಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಮಾನ್ಯ ಮುಖ್ಯಮಂತ್ರಿ ಅವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಲ್ಲಿ ಈಗಾಗಲೇ ಭೇಟಿ ಮಾಡಿ ಮನವಿ ಮಾಡಲಾಗಿದೆ. ಮಡಿಕೇರಿ ದಸರಾವು ಈ ಹಿಂದಿನಂತೆ ವಿವಿಧ ಸಮಿತಿಗಳ ನೇತೃತ್ವದಲ್ಲಿ ನಡೆಯಲಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಡೆಯಲಿದೆ ಎಂದು ಡಾ.ಮಂತರ್ ಗೌಡ ಅವರು ತಿಳಿಸಿದರು. ಗೌಡಳ್ಳಿ ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷರಾದ ಎಚ್.ಆರ್.ಸುರೇಶ್, ಸಮಿತಿ ಅಧ್ಯಕ್ಷರಾದ ಡಿ.ಎ.ಉದಯ, ಉಪಾಧ್ಯಕ್ಷರಾದ ಡಿ.ಬಿ.ಲೋಕೇಶ್ ಬೆಳ್ಳಿಯಪ್ಪ, ಕಾರ್ಯದರ್ಶಿ ಡಿ.ಎಸ್.ಕವನ್, ಸದಸ್ಯರಾದ ಎಂ.ಬಿ.ಚಂದ್ರಶೇಖರ್, ವಿನಯ್ ಕುಮಾರ್ ಡಿ.ಪಿ(ಗುಂಡ), ಪ್ರೀತಂ ಡಿ.ಡಿ., ಶಶಿಕುಮಾರ್, ಭರತ್ ಡಿ.ಟಿ., ರಜಿತ್ ಡಿ.ಎಚ್., ಈರಯ್ಯ ಹಿರೇಮಠ್ ಇತರರು ಇದ್ದರು.
ಮತ್ತಷ್ಟು ಮಾಹಿತಿ :: ಸೋಮವಾರಪೇಟೆ ತಾಲ್ಲೂಕು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಮ್ಮನ ದೇವಸ್ಥಾನದಲ್ಲಿ ಹಲವು ಶತಮಾನಗಳಿಂದ ಗೌರಿ ಹಬ್ಬದಂದು ಜಿಲ್ಲೆಯ ಹಾಗೂ ಅಕ್ಕಪಕ್ಕದ ಜಿಲ್ಲೆಯವರು ಸಹ ಹೊನ್ನಮ್ಮನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಗೌರಿ ಹಬ್ಬದ ಪ್ರಯುಕ್ತ ಸಡಗರ ಸಂಭ್ರಮದಿಂದ ಹಾಗೂ ಶ್ರದ್ಧಾ ಭಕ್ತಿಯಿಂದ ಹೆಣ್ಣು ಮಕ್ಕಳು ಹೊನ್ನಮ್ಮನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವುದು ವಿಶೇಷವಾಗಿದೆ. ಪವಿತ್ರ ಪುಣ್ಯಕ್ಷೇತ್ರವಾದ ಹೊನ್ನಮ್ಮನ ಕೆರೆಯಲ್ಲಿ ತೀರ್ಥ ಪ್ರಸಾದ ತೆಗೆದುಕೊಂಡು ಭಕ್ತಿಯನ್ನು ಸಾರುತ್ತಾರೆ. ಹೊನ್ನಮ್ಮನ ಕೆರೆಯು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ತಾಯಿ ಹೊನ್ನಮ್ಮ ಕೆರೆಗೆ ಹಾರವಾದ ಘಟನೆ ಶಾಲಾ ಪಠ್ಯ ಪುಸ್ತಕಗಳಲ್ಲಿ ಓದಿದ್ದೇವೆ. ಪ್ರತೀ ವರ್ಷ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ವಿಶೇಷ ಗೌರಿ ಹಬ್ಬದಂದು ಬಾಗಿನ ಅರ್ಪಿಸಿ ಹೊನ್ನಮ್ಮನಿಗೆ ಪೂಜೆ ಸಲ್ಲಿಸುವ ಸಂಪ್ರದಾಯವು ವೈಶಿಷ್ಟವಾಗಿದೆ.