ಮಡಿಕೇರಿ ಸೆ.6 NEWS DESK : ಎನ್‍ಸಿಸಿ ತರಬೇತಿ ಪಡೆದವರು ಹಾಗೂ ಸೈನಿಕರು ನಿರಂತರವಾಗಿ ದೇಶಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಹಕ್ಕುಗಳಿಗಿಂತ ಕರ್ತವ್ಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ “ಡ್ಯೂಟಿ ಫಸ್ಟ್ ರೈಟ್ಸ್ ಲೇಟರ್” ಎನ್ನುವ ರೀತಿಯಲ್ಲಿ ತಮ್ಮ ಸೇವೆಯನ್ನು ಪೂರ್ಣಗೊಳಿಸಿ ಸಾರ್ಥಕ ಜೀವನ ಸಾಗಿಸುತ್ತಾರೆ ಎಂದು 19ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ರಾಜು ಮುಕಂದನ್ ತಿಳಿಸಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ 2024-25ನೇ ಸಾಲಿನ ಎನ್‍ಸಿಸಿಗೆ ಕೆಡೆಟ್‍ಗಳ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎನ್‍ಸಿಸಿ ಶಿಸ್ತು, ಏಕತೆ, ನಾಯಕತ್ವದ ಗುಣ, ಕ್ರೀಡಾಸ್ಫೂರ್ತಿ, ಜಾತ್ಯಾತೀತ ಮನೋಭಾವ, ನಿಸ್ವಾರ್ಥ ಸೇವೆ, ದೇಶ ಸೇವೆ ಹಾಗೂ ಸಮಾಜದಲ್ಲಿ ಬೆರೆಯುವುದನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದಲ್ಲದೆ ಸೈನ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ತರಬೇತಿಯನ್ನು ನೀಡುತ್ತದೆ ಎಂದರು. ಭಾರತ ದೇಶವು ಭಾಗಹಿಸಿದ ಯುದ್ಧಗಳಲ್ಲಿ (ಇಂಡೋ-ಪಾಕ್ ಯುದ್ಧ) ಎನ್‍ಸಿಸಿ ಯು ಸೈನ್ಯಕ್ಕೆ ಸಹಕಾರಿಯಾಗಿ ಕೆಲಸ ನಿರ್ವಹಿಸಿದೆ. ಭಾರತದ ಸೈನಿಕ ಪಡೆಯು ಪ್ರಪಂಚದ ಮೂರನೇ ಅತೀ ದೊಡ್ಡ ಸೈನಿಕ ಪಡೆಯಾಗಿದ್ದು, ಸೈನಿಕರನ್ನು ತಯಾರಿಸುವಲ್ಲಿ ಎನ್‍ಸಿಸಿಯ ಪಾತ್ರ ಮಹತ್ವವನ್ನು ಹೊಂದಿದೆ ಎಂದು ತಿಳಿಸಿದರು. ಫೀ.ಮಾ.ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಮೇಜರ್ ಡಾ.ರಾಘವ ಬಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಬೇದಾರ್ ಭೂಪಿಂದರ್ ಸಿಂಗ್, ನಾಯಬ್ ಸುಬೇದಾರ್ ಸಾಜದ್ ಮಲ್ಲಿಕ್, ಹವಾಲ್ದಾರ್ ರಾಮ್ ಬಹುದ್ದೂರ್, ಹಿಂದಿ ಉಪನ್ಯಾಸಕಿ ಖುರ್ಷಿದ್ ಬಾನು, ಎನ್‍ಸಿಸಿ ನಾಯಕರಾದ ಗುಣಶೇಖರ್, ಬಿ.ಎಂ.ಅಕ್ಷತಾ, ಎಂ.ಆರ್.ಹೇಮಂತ್, ಅಭಿಉತ್ತಯ್ಯ, ಎಂ.ಜೆ.ಶವಾಂತ್, ಬಿ.ಕೆ.ಲತೇಶ್ ಮತ್ತಿತರರು ಉಪಸ್ಥಿತರಿದ್ದರು. ಲಿಖಿತ ಹಾಗೂ ದೈಹಿಕ ಪರೀಕ್ಷೆಗಳ ಮೂಲಕ ಎನ್‍ಸಿಸಿಗೆ ಕೆಡೆಟ್‍ಗಳನ್ನು ಆಯ್ಕೆ ಮಾಡಲಾಯಿತು.