ಮಡಿಕೇರಿ NEWS DESK ಸೆ.6 : ಪ್ರತಿ ವರ್ಷ ವಿಭಿನ್ನ ಪ್ರಯತ್ನಗಳ ಮೂಲಕವೇ ಗಣೇಶೋತ್ಸವದ ಆಕರ್ಷಣೆಯನ್ನು ಹೆಚ್ಚಿಸುತ್ತಿರುವ ಮಡಿಕೇರಿ ನಗರದ ಶಾಂತಿನಿಕೇತನ ಯುವಕ ಸಂಘ, ಪ್ರಸ್ತುತ ಅಯೋಧ್ಯೆಯ ಶ್ರೀರಾಮ ಮಂದಿರದ ಒಳಾಂಗಣದ ಮಾದರಿಯನ್ನು ಸೃಷ್ಟಿಸಿದೆ. ಈ ಮಾದರಿಯಲ್ಲಿ ವಿಘ್ನ ನಿವಾರಕ ಗಣಪ ಶ್ರೀರಾಮನ ರೂಪದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿದ್ದಾನೆ. ಶಾಂತಿನಿಕೇತನ ಯುವಕ ಸಂಘ 46 ನೇ ವರ್ಷದ ಅದ್ದೂರಿಯ ಗಣೇಶೋತ್ಸವದ ಸಂಭ್ರಮದಲ್ಲಿದೆ. ಜನವರಿ ತಿಂಗಳಿನಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯ ಕ್ಷಣವನ್ನು ಇಡೀ ಭಾರತ ಸೇರಿ ವಿಶ್ವ ಸಂಭ್ರಮಿಸಿತ್ತು. ಶ್ರೀರಾಮನಿರುವ ಪವಿತ್ರ ಮಂದಿರವನ್ನೇ ಮುಖ್ಯ ಆಕರ್ಷಣೆ ಮಾಡುವ ಸಲುವಾಗಿ ಈ ಬಾರಿ ಶಾಂತಿನಿಕೇತನದಲ್ಲಿ ಅಯೋಧ್ಯೆ ರಾಮನ ಮಾದರಿಯಲ್ಲಿ ಗಣೇಶನ ಮೂರ್ತಿ ಹಾಗೂ ರಾಮ ಮಂದಿರದ ಒಳಾಂಗಣವನ್ನು ಹೋಲುವ ಮಾದರಿಯನ್ನು ಸುಂದರವಾಗಿ ವಿನ್ಯಾಸ ಮಾಡಲಾಗಿದೆ. ಶಾಂತಿನಿಕೇತನ ಯುವಕ ಸಂಘದ ಸದಸ್ಯರೂ ಆಗಿರುವ ಕಲಾವಿದ ಪಿ.ಎ.ರವಿ ಹಾಗೂ ಸಂಗಡಿಗರು ಈ ವಿಶೇಷ ವಿನ್ಯಾಸವನ್ನು ಆಕರ್ಷಕವಾಗಿ ರಚಿಸಿದ್ದಾರೆ. ಪ್ರತಿವರ್ಷ ವಿಶಿಷ್ಟ ಪ್ರಯತ್ನಗಳಿಗೆ ಪ್ರೇರಣೆ ನೀಡುತ್ತಾ ಬಂದಿರುವ ನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಾಂತಿನಿಕೇತನ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷ ಕೆ.ಹೆಚ್.ಚೇತನ್ ಮನವಿ ಮಾಡಿದ್ದಾರೆ. ಸೆ.7 ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಶ್ರೀಮಹಾಗಣಪತಿಯ ಪ್ರತಿಷ್ಠಾಪನೆ ಮತ್ತು ಮಹಾಪೂಜೆ ನಡೆಯಲಿದೆ. ಸೆ.19 ರಂದು ಸಂಜೆ 7 ಗಂಟೆಗೆ ಸಾಮೂಹಿಕ ರಂಗಪೂಜೆ, ಸೆ.21 ರಂದು ಮಹಾಪೂಜೆಯ ನಂತರ ನಗರದಲ್ಲಿ ಶ್ರೀಮಹಾಗಣಪತಿ ಮೂರ್ತಿಯ ಶೋಭಾಯಾತ್ರೆ ಸಾಗಲಿದೆ. ಈ ಬಾರಿ “ಲೋಕ ಕಲ್ಯಾಣಕ್ಕಾಗಿ ಮಯೂರೇಶನಿಂದ ಸಿಂಧು ದೈತ್ಯ ರಾಜನ ಸಂಹಾರ” ಎಂಬ ಕಥಾವಸ್ತುವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.