ಮಡಿಕೇರಿ NEWS DESK ಸೆ.7 : ಭಾರತ-ಪಾಕ್ ನಡುವಿನ 1965ರ ಯುದ್ಧದಲ್ಲಿ ಶತ್ರು ರಾಷ್ಟçದ ಯುದ್ಧ ವಿಮಾನವನ್ನು ಸಾಹಸಿಕ ಪ್ರಯತ್ನದ ಮೂಲಕ ಹೊಡೆದುರುಳಿಸಿ ಬಲಿದಾನಗೈದ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 59ನೇ ಪುಣ್ಯಸ್ಮರಣಾ ಕಾರ್ಯಕ್ರಮ ನಗರದ ಖಾಸಗಿ ಬಸ್ ನಿಲ್ದಾಣದ ವೀರಯೋಧನ ವೃತ್ತದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ಹೃದಯಸ್ಪರ್ಶಿಯಾಗಿ ನಡೆಯಿತು. ಕೊಡವ ಮಕ್ಕಡ ಕೂಟ, ಅಜ್ಜಮಾಡ ಒಕ್ಕ (ಕುಟುಂಬಸ್ಥರು) ಹಾಗೂ ಸ್ವಾ.ಲೀ.ಅಜ್ಜಮಾಡ ದೇವಯ್ಯ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ವೀರ ಯೋಧನ ಭಾವ ಚಿತ್ರಕ್ಕೆ ಅಜ್ಜಮಾಡ ಕುಟುಂಬಸ್ಥರು ಸೇರಿದಂತೆ, ಮಾಜಿ ಯೋಧರು, ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. :: ‘ರಾಷ್ಟ್ರೀಯ ಪುಣ್ಯದಿನ’ವನ್ನಾಗಿ ಘೋಷಿಸಿ :: ಸ್ವಾ.ಲೀ.ಅಜ್ಜಮಾಡ ದೇವಯ್ಯ ಟ್ರಸ್ಟ್ನ ಅಧ್ಯಕ್ಷರಾದ ಅಜ್ಜಮಾಡ ಕಟ್ಟಿಮಂದಯ್ಯ ವೀರ ಯೋಧನಿಗೆ ಗೌರವ ನಮನ ಸಲ್ಲಿಸಿ ಮಾತನಾಡಿ, ಭಾರತ-ಪಾಕ್ ಯುದ್ಧದ ಸಂದರ್ಭ ಶತ್ರು ರಾಷ್ಟçದ ವಿಮಾನವನ್ನು ಹೊಡೆದುರುಳಿಸುವ ಮೂಲಕ ಕೆಚ್ಚೆದೆಯ ಸಾಹಸ ಮೆರೆದು ಸ್ಕ್ವಾಡ್ರನ್ ಲೀಡರ್ ದೇವಯ್ಯ ಹುತಾತ್ಮರಾಗಿದ್ದಾರೆ. ಅವರ ಬಲಿದಾನದ ಈ ದಿನವನ್ನು ‘ರಾಷ್ಟ್ರೀಯ ಪುಣ್ಯದಿನ’ವನ್ನಾಗಿ ಘೋಷಿಸುವ ಮೂಲಕ ಸರ್ಕಾರವೆ ಪುಣ್ಯದಿನವನ್ನು ಆಚರಿಸಬೇಕೆಂದು ಮನವಿ ಮಾಡಿದರು. ಕೊಡಗು ಫೀ.ಮಾ.ಕೆ.ಎಂ.ಕಾರ್ಯಪ್ಪ, ಜ.ತಿಮ್ಮಯ್ಯ ಅವರಂತಹ ಮಹಾನ್ ವೀರ ಸೇನಾನಿಗಳನ್ನು, ಕೆಚ್ಚೆದೆಯ ಯೋಧರನ್ನು ಈ ನಾಡಿಗೆ ನೀಡಿದ ಪುಣ್ಯಭೂಮಿ. ಈ ನೆಲದ ಸುಪುತ್ರರಾಗಿ ದೇಶ ರಕ್ಷಣೆಗಾಗಿ ಬಲಿದಾನಗೈದ ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಭಾವ ಚಿತ್ರವನ್ನು ಎಲ್ಲಾ ಕೊಡವ ಸಮಾಜಗಳಲ್ಲಿ ಅಳವಡಿಸಬೇಕೆಂದು ಕೋರಿದ ಅವರು, ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರು ಅಜ್ಜಮಾಡ ಕುಟುಂಬದಲ್ಲಿ ಜನಿಸಿರಬಹುದು. ಆದರೆ, ಅವರು ಇಡೀ ರಾಷ್ಟçಕ್ಕೆ ಸೇರಿದ ವ್ಯಕ್ತಿಯಾಗಿದ್ದಾರೆಂದು ಹೆಮ್ಮೆಯಿಂದ ನುಡಿದರು. ವಿಧಾನಸಭೆಯ ಮಾಜಿ ಅಧ್ಯಕ್ಷರು, ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ಭಾರತ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರು, ರಾಷ್ಟ್ರ ರಕ್ಷಣೆಗಾಗಿ ನಡೆಸಿದ ಹೋರಾಟದ ಮೂಲಕ ಎಲ್ಲ ವಿಚಾರಗಳಿಗೂ ಮಿಗಿಲಾಗಿ ‘ದೇಶ ಮೊದಲು’ ಎನ್ನುವುದನ್ನು ತೋರಿಸಿಕೊಡುವ ಮೂಲಕ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿದ್ದಾರೆಂದು ಹೇಳಿದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಅವರು ಮಾತನಾಡಿ, ರಾಷ್ಟ್ರದ ಹೆಮ್ಮೆಯ ಪುತ್ರ ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಭಾವಚಿತ್ರವನ್ನು ಮಡಿಕೇರಿ ಕೊಡವ ಸಮಾಜದಲ್ಲಿ ಅಳವಡಿಸಲಾಗುತ್ತದೆಂದು ಸ್ಪಷ್ಟಪಡಿಸಿ, ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರು ತಮ್ಮ ದೇಶ ಪ್ರೇಮ, ಸಾಹಸ, ಕೆಚ್ಚೆದೆಯ ನಿಲುವುಗಳ ಮೂಲಕ ಯುವಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು. ಸೈನ್ಯಕ್ಕೆ ಯುವ ಸಮೂಹ ಸೇರ್ಪಡೆಯಾಗಲಿ– ಮಡಿಕೇರಿ ನಗರಸಭಾ ಮಾಜಿ ಅಧ್ಯಕ್ಷರಾದ ಅನಿತಾ ಪೂವಯ್ಯ ಮಾತನಾಡಿ, ಯೋಧರ ನಾಡೆಂದು ಕರೆಯಲ್ಪಡುವ ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಸೈನ್ಯಕ್ಕೆ ಭರ್ತಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ಕಾ÷್ವ.ಲೀ.ದೇವಯ್ಯ ಅವರ ಆದರ್ಶಗಳನ್ನು ಯುವ ಪೀಳಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಭರ್ತಿಯಾಗಲು ಮುಂದೆ ಬರುವಂತೆ ಕರೆ ನೀಡಿದರು. ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯು ಅವರು, ದೇಶ ಕಾಯುವ ಯೋಧರು ರಾಷ್ಟ್ರದ ಬೆನ್ನೆಲುಬು ಮಾತ್ರವಲ್ಲ ಅವರೊಂದು ದೊಡ್ಡ ಶಕ್ತಿಯೇ ಆಗಿದ್ದಾರೆ ಎಂದು ನುಡಿದರು. ಮಾಜಿ ಯೋಧ ಬಾಳೆಯಡ ಶಂಭು ಮಾತನಾಡಿ, ಸ್ಕ್ವಾಡ್ರನ್ ಲೀಡರ್.ದೇವಯ್ಯ ಅವರದ್ದು ಈ ದೇಶ ರಕ್ಷಣೆಗಾಗಿ ಮಾಡಿರುವ ಸರ್ವೋಚ್ಛ ಬಲಿದಾನವಾಗಿದೆ. ಇಂತಹ ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. 1965ರ ಭಾರತ-ಪಾಕ್ ಯುದ್ಧದಲ್ಲಿ ದೇವಯ್ಯ ಅವರು ಬದುಕಿ ಹಿಂದಕ್ಕೆ ಬರುವ ಅವಕಾಶಗಳಿತ್ತು. ಆದರೆ, ಈ ಅವಕಾಶವನ್ನು ಕೈಬಿಟ್ಟು ಶತ್ರು ರಾಷ್ಟ್ರ ಪಾಕ್ನ ಅತ್ಯಾಧುನಿಕ ಯುದ್ಧವಿಮಾನವನ್ನು ಕೆಚ್ಚೆದೆಯ ಸಾಹಸದ ಮೂಲಕ ಹೊಡೆದುರುಳಿಸಿ ಹುತಾತ್ಮರಾಗಿದ್ದಾರೆ. ಅವರ ಈ ಮಹಾನ್ ಬಲಿದಾನ ಹಲವಾರು ವರ್ಷಗಳ ಬಳಿಕ ಪಾಕ್ ಸೇನೆಯ ಅಧಿಕಾರಿಯೊಬ್ಬರನ್ನು ಬಿಬಿಸಿಯವರು ಸಂದರ್ಶನ ಮಾಡಿದ ಸಂದರ್ಭ ಬೆಳಕಿಗೆ ಬಂದಿತು. ಇಂತಹ ಮಹಾನ್ ಯೋಧನ ಭಾವ ಚಿತ್ರವನ್ನು ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲು ಅಳವಡಿಸುವಂತಾಗಬೇಕೆನ್ನುವ ಆಶಯ ವ್ಯಕ್ತಪಡಿಸಿದರು. ಕೇಂದ್ರದಿಂದ ಸ್ಮಾರಕ ನಿರ್ಮಾಣವಾಗಲಿ- ಸೈನ್ಯದ ಉನ್ನತ ಗೌರವವಾದ ‘ಮಹಾವೀರ ಚಕ್ರ’ವನ್ನು ಪಡೆದ ಕೊಡಗಿನ ಮೊದಲ ವೀರ ಸೇನಾನಿ ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರಾಗಿದ್ದಾರೆ. ಆ ಬಳಿಕ ಈ ಗೌರವ ಪಡೆದವರು ಪುಟ್ಟಿಚಂಡ ಗಣಪತಿಯವರು ಎಂದು ಸ್ಮರಿಸಿಕೊಂಡ ಬಾಳೆಯಡ ಶಂಭು ಅವರು, ಭಾರತ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಅಂತ್ಯ ಸಂಸ್ಕಾರ ನಡೆದಿದೆ ಎನ್ನಲಾಗುತ್ತದೆ. ಈ ಬಗ್ಗೆ ಭಾರತ ಸರ್ಕಾರ ಪರಿಶೀಲನೆ ನಡೆಸಿ, ಅವರ ಅಸ್ಥಿ ದೊರಕಿದಲ್ಲಿ, ವೀರ ಯೋಧನ ಹೆಸರಿನ ಸ್ಮಾರಕವನ್ನು ನಿರ್ಮಿಸಬೇಕೆಂದು ಮನವಿ ಮಾಡಿದರು. ಮಾಜಿ ಯೋಧ ಮುಂಜಾಂದಿರ ಅಪ್ಪಯ್ಯ ರಾಜಾ ಅವರು, ಮಡಿಕೇರಿಯ ಕೇಂದ್ರ ಸ್ಥಾನದಲ್ಲಿ ಸ್ಕ್ವಾಡ್ರನ್ ಲೀಡರ್ ದೇವಯ್ಯ ವೃತ್ತ ನಿರ್ಮಾಣ, ಪ್ರತಿಮೆ ನಿರ್ಮಾಣದ ಬಗೆಗಿನ ಪರಿಶ್ರಮವನ್ನು ನೆನಪು ಮಾಡಿಕೊಂಡರು.
::: ಭಾವಚಿತ್ರ ಕೊಡುಗೆ ::: ಕೊಡವ ಮಕ್ಕಡ ಕೂಟದ ಬೊಳ್ಳಜಿರ ಅಯ್ಯಪ್ಪ ಅವರು ಕಾರ್ಯಕ್ರಮದ ಬಳಕ ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಭಾವ ಚಿತ್ರವನ್ನು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಅವರಿಗೆ ಕೊಡುಗೆಯಾಗಿ ನೀಡಿದರು. ::: ಏ.ಮಾ.ಕೆ.ಸಿ.ಕಾರ್ಯಪ್ಪ ಗೌರವ ನಮನ ::: ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ವೃತ್ತಕ್ಕೆ ಆಗಮಿಸಿ ವೀರ ಯೋಧನಿಗೆ ಗೌರವ ನಮನ ಸಲ್ಲಿಸಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಸರ್ವರನ್ನು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಮಾಜಿ ಯೋಧರಾರ ಮಲಚ್ಚೀರ ಅಚ್ಚಯ್ಯ, ಮಾಜಿ ಯೋಧರಾದ ಬೊಟ್ಟಂಗಡ ಜಪ್ಪು, ಮಾಜಿ ಯೋಧರಾದ ಬಾಳೆಯಡ ಮಂದಪ್ಪ, ಅಜ್ಜಮಾಡ ಕುಟುಂಬಸ್ಥರಾದ ಅಜ್ಜಮಾಡ ಬೆಳ್ಯಪ್ಪ, ಅಜ್ಜಮಾಡ ಕಾರ್ಯಪ್ಪ, ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಬೋಪಯ್ಯ, ಅಜ್ಜಮಾಡ ಅಯ್ಯಣ್ಣ, ಪುಟ್ಟಿಚಂಡ ಡಾನ್ ದೇವಯ್ಯ, ಕೂಟದ ಪದಾಧಿಕಾರಿ ಪುತ್ತೇರಿರ ಕಾಳಯ್ಯ ಮೊದಲಾದವರು ಪಾಲ್ಗೊಂಡು ವೀರ ಯೋಧನಿಗೆ ಗೌರವ ಸಲ್ಲಿಸಿದರು.
Breaking News
- *ಸೋಮವಾರಪೇಟೆ : ಆರೋಗ್ಯ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರ*
- *ಸೋಮವಾರಪೇಟೆ : ಇಂದಿರಾ ಕ್ಯಾಂಟೀನ್ ಕಾಮಗಾರಿ ಅಪೂರ್ಣ : ಅಸಮಾಧಾನ*
- *ಡಿಜಿಟಲ್ ಸಾಕ್ಷರತೆ ಮಹಿಳೆಯರ ಬದುಕಿಗೆ ಸಹಕಾರಿಯಾಗಲಿದೆ : ಆನಂದ್ ಪ್ರಕಾಶ್ ಮೀನಾ*
- *ಸೋಮವಾರಪೇಟೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ದಿನಾಚರಣೆ*
- *ಸುಂಟಿಕೊಪ್ಪ : ಅಪ್ರಾಪ್ತರಿಗೆ ವಾಹನ ನೀಡಿದರೆ ಪೋಷಕರಿಗೆ ಶಿಕ್ಷೆ*
- *ಮಡಿಕೇರಿ : ನ.22 ರಂದು ಉದ್ಯೋಗ ಮೇಳ*
- *ನ.20 ರಂದು ಶಾಂತಳ್ಳಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಮಡಿಕೇರಿ : ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ : ಸಮವಸ್ತ್ರ ವಿತರಣೆ*
- *ರಾಷ್ಟ್ರೀಯ ಐಕ್ಯತಾ ದಿನ : ಮಡಿಕೇರಿಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ*
- *ಮಡಿಕೇರಿಯಲ್ಲಿ ವಿಶ್ವ ಪ್ರತಿಜೀವಕ ನಿರೋಧಕ ಜಾಗೃತಿ ಸಪ್ತಾಹ*