NEWS DESK :: ಕೊಡಗಿನಲ್ಲಿ ಹುಟ್ಟಿದವರಿಗೆ 3 ಗುಣಗಳು ರಕ್ತಗತವಾಗಿಯೇ ಬಂದಿರುತ್ತವೆ. ಇದರಲ್ಲಿ ಮೊದಲನೆಯದು ಸೈನ್ಯ, ಎರಡನೆಯದು ಹಾಕಿ ಹಾಗೂ ಮೂರನೆಯದು ಮದ್ಯಪಾನ. ಇದರಲ್ಲಿ ಮದ್ಯಪಾನವನ್ನು ದೂರವಿಟ್ಟು ಉಳಿದ ಎರಡರ ಮೇಲೆ ನಮ್ಮ ಗಮನವಿದ್ದರೆ ನಾವು ಅದನ್ನು ಸಾಧಿಸಬಹುದು ಎಂದು ನುಡಿಯುತ್ತಾರೆ ಅಯ್ಯುಡ ಗಣಪತಿಯವರು. ದಿವಂಗತ ಅಯ್ಯುಡ ಈರಪ್ಪ ಹಾಗೂ ಗೌರಮ್ಮ ದಂಪತಿಯರ ಪುತ್ರನಾಗಿ ಗಣಪತಿಯವರು ಬೆಟ್ಟಗೇರಿಯಲ್ಲಿ ಜನಿಸುತ್ತಾರೆ. ಇವರ ತಂದೆ ಈರಪ್ಪ ಕೊಡಗಿನ ಪ್ರಥಮ ಮಾಸ್ಟರ್ ಟೈಲರ್ ಎಂದೇ ಪ್ರಸಿದ್ಧರಾಗಿದ್ದರು.
ಶಿಕ್ಷಣ :: ಸೆಂಟ್ರಲ್ ಹೈ ಸ್ಕೂಲ್ ಮಡಿಕೇರಿಯಲ್ಲಿ ಶಿಕ್ಷಣ ಪಡೆದರು. ಓದುತ್ತಿರುವಾಗಲೇ ಕ್ರಿಕೆಟ್ ಹಾಗೂ ಅಥ್ಲೆಟಿಕ್ಸ್ ಚಾಂಪಿಯನ್ ಆಗಿದ್ದರು. 400 ಮೀಟರ್ ಓಟದಲ್ಲಿ ಚಾಂಪಿಯನ್ ಆಗಿದ್ದರು. ಇವರು ಕೊಡಗಿನ ಮಿಲ್ಕಾ ಸಿಂಗ್ ಎಂದೆ ಪ್ರಸಿದ್ಧಿ ಪಡೆದಿದ್ದರು ಅಂದಿನ ಭಾರತದ ಖ್ಯಾತ ತರಬೇತುದಾರರಾದ ಡಾ.ಕೋದಂಡ ಮುತ್ತಯ್ಯ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಶಹಭಾಶ್ ಎನಿಸಿಕೊಂಡರು. ಎನ್.ಸಿ.ಸಿ ಯ ಜೂನಿಯರ್ ಡಿವಿಜನ್ ಕೆಡೆಟ್ ಆಗಿ ದಿವಂಗತ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಂದ ಬೆಳ್ಳಿಯ ಪದಕ ಪಡೆದ ಕೀರ್ತಿ ಇವರದು.
ಸೈನ್ಯಕ್ಕೆ ಸೇರ್ಪಡೆ :: ಗಪ್ಪು ಅವರು 1966 ರಲ್ಲಿ ಕೋರ್ ಆಫ್ ಸಿಗ್ನಲ್ಸ್ ಸೇರ್ಪಡೆಗೊಂಡರು. 1974ರಲ್ಲಿ ಡೆಹ್ರಾಡೂನ್ ನಲ್ಲಿರುವ I.M.A ಯ ಲ್ಯೂಟಿನೆಂಟ್ ಆಗಿ ಬಡ್ತಿ ಪಡೆದರು. ಅಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿ ಚಿನ್ನದ ಪದಕ ಪಡೆದುಕೊಂಡರು. ತದನಂತರ A.S.C ಗೆ ಸೇರಿದರು.
ಕೊಡಗಿನಿಂದ ಸೈನ್ಯಕ್ಕೆ ಯುವ ಆಟಗಾರರು :: 1976ರಲ್ಲಿ ಗಪ್ಪು ಅವರನ್ನು ಬೆಂಗಳೂರಿನಲ್ಲಿರುವ A.S.C ಗೆ ವರ್ಗಾವಣೆ ಮಾಡಲಾಗುತ್ತದೆ. ಇಲ್ಲಿ ಇವರೆಗೆ ಒಂದು ಉತ್ತಮ ಹಾಕಿ ತಂಡವನ್ನು ರಚಿಸುವಂತೆ ನಿರ್ದೇಶನ ನೀಡಲಾಗುತ್ತದೆ. ಈ ತಂಡವನ್ನು ಕಟ್ಟಲು ಗಪ್ಪು ಅವರು ಕೊಡಗಿಗೆ ಬಂದು 3 ಹಾಕಿ ಶಿಬಿರಗಳನ್ನು ಆಯೋಜಿಸಿ, 22 ಯುವ ಆಟಗಾರರನ್ನು ಜಾತಿ-ಮತ-ಭೇದವಿಲ್ಲದೆ A.S.C ಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಮಾರ್ಗದರ್ಶನದಲ್ಲೇ ಕಠಿಣ ತರಬೇತಿಯನ್ನು ಸಹ ನೀಡುತ್ತಾರೆ. ಈ ತಂಡವು ಕರ್ನಾಟಕ ರಾಜ್ಯ ಹಾಕಿ ಪಂದ್ಯಾಟದಲ್ಲಿ ಮೂರು ಡಿವಿಜನ್ ನಲ್ಲೂ ಚಾಂಪಿಯನ್ ಹಾಕಿ ಹೊರಹೊಮ್ಮುತ್ತಾರೆ. ನಂತರದ ದಿನಗಳಲ್ಲಿ ಸೂಪರ್ ಡಿವಿಜನ್ ನಲ್ಲೂ ಕೂಡ ತಮ್ಮ ಪ್ರಾಬಲ್ಯತೆಯನ್ನು ಮೆರೆಯುತ್ತಾರೆ. ಗಣಪತಿ ಅವರನ್ನು ಜಲಂಧರರಿಗೆ ನಂತರದ ದಿನಗಳಲ್ಲಿ ವಾಪಸು ಕರೆಸಿಕೊಳ್ಳಲಾಗುತ್ತದೆ. ಅಲ್ಲಿ ಒಲಂಪಿಯನ್ ಬಲ್ಬೀರ್ ಸಿಂಗ್ ಅವರು ತರಬೇತಿ ನೀಡುತ್ತಿದ್ದ ತಂಡವನ್ನು ಇವರ ಸುಪರ್ದಿಗೆ ವಹಿಸಲಾಗುತ್ತದೆ. ಇವರಿಂದ ತರಬೇತಿ ಪಡೆದ A.S.C ಜಲಂಧರ್ ತಂಡವು, 22 ಪ್ರಥಮ ಶ್ರೇಣಿಯ ಹಾಕಿ ಪಂದ್ಯಾಟಗಳನ್ನು ರಾಷ್ಟ್ರದಾದ್ಯಂತ ಗೆಲ್ಲುತ್ತವೆ. ಇದರಲ್ಲಿ ಹೆಸರುವಾಸಿಯಾದ ಬೇಟನ್ ಕಪ್, ಶಾಸ್ತ್ರಿ ಗೋಲ್ಡ್ ಕಪ್, ಸುರ್ಜಿತ್ ಸಿಂಗ್ ಪಂದ್ಯಾವಳಿ ಹಾಗೂ ಬಾಂಬೆ ಗೋಲ್ಡ್ ಕಪ್ ಅನ್ನು ಕೂಡ ಗೆಲ್ಲುತ್ತಾರೆ.
42 ಆಟಗಾರರನ್ನು ಕೊಡಗಿನಿಂದ ಜೊತೆಗೂಡಿಸಿದ ಕೀರ್ತಿ :: 1996 ರಲ್ಲಿ ಅವರ ಬೆಟಾಲಿಯನ್ ನ ಕಮಾಂಡಿಂಗ್ ಅಧಿಕಾರಿಯಾಗಿ ಹಲವಾರು ಅತ್ಯುತ್ತಮ ಹಾಕಿ ಆಟಗಾರರನ್ನು ತಯಾರು ಮಾಡಿದರು. ಅವರಲ್ಲಿ ವರ್ಲ್ಡ್ ಕಪರ್ ಕೂತಂಡ ಕೆ ಪೂಣಚ್ಚ, ಭಾರತ ತಂಡದ ತರಬೇತಿದಾರ ಬೊಳ್ಳೇಪಂಡ ಜೆ ಕಾರ್ಯಪ್ಪ, ಭಾರತದ ಆಯ್ಕೆ ಶಿಬಿರದ ಮೇಚಂಡ ಟಿ ಪೂವಯ್ಯ, ಸರ್ವಿಸಸ್ ಆಟಗಾರ ಅಂಜಪರುವಂಡ ದೀಪು ತಿಮ್ಮಯ್ಯ ಹಾಗೂ ಅದ್ಭುತ ಗೋಲ್ ಕೀಪರ್ ಚೌಕಿಮನೆ ತಿಮ್ಮಯ್ಯ. ಇವರಲ್ಲದೆ ಕೆ.ಜೆ.ಕುಟ್ಟಪ್ಪ, ಸಿ.ಪಿ.ಸುನಿಲ್, ಕೆ.ಟಿ.ಬೆಳ್ಳಿಯಪ್ಪ, ಸುರೇಶ್ ಬಾಬು, ಶ್ರೀನಿವಾಸ್, ಕೆ.ಬಿ.ಗಣಪತಿ, ಕೆ.ಎಂ.ಬೆಳ್ಳಿಯಪ್ಪ, ಪಿ.ಎಂ.ಸುನಿಲ್, ಬಿ.ಜಿ.ಸೋಮಯ್ಯ, ಸಿ.ಸಿ.ತಿಮಯ್ಯ, ಸಿ.ಅಯ್ಯಣ್ಣ, ಪಿ.ಅಚ್ಚಪ್ಪ, ಸಿ.ಯು.ಪೊನ್ನಪ್ಪ, ಎಂ.ಲಕ್ಷ್ಮಣ್ ಹಾಗೂ ಐ.ಪಿ.ಪೂವಯ್ಯ ಇಂತಹ ಸರ್ವಿಸಸ್, ಕಮಾಂಡ್ ಹಾಗೂ ಭಾರತದ ಆಯ್ಕೆ ಶಿಬಿರಗಳಿಗೆ ಆಡಿದಂತಹ ಅದ್ಭುತ ಆಟಗಾರರನ್ನು ಸೃಷ್ಟಿಸಿದ ಕೀರ್ತಿ ಇವರದು. ಹೀಗೆ ಕೊಡಗಿನಿಂದ 42 ಆಟಗಾರರನ್ನು ಜೊತೆಗೂಡಿಸಿ ಇವರ ಸುಪರ್ದಿಯಲ್ಲಿ ಆಡಿಸಿದ ಕೀರ್ತಿ ಇವರದು.
ಕುಟುಂಬವೇ ಕ್ರೀಡಾಪಟು :: ಗಪ್ಪು ಅವರ ತಮ್ಮ ವೇಣು ಉತ್ತಪ್ಪ ಅವರು ಕೊಡಗಿನ ಮೊದಲ ಅಂತರಾಷ್ಟ್ರೀಯ ಹಾಕಿ ತೀರ್ಪುಗಾರ ಹಾಗೂ ಅವರ ಮಗ ರಾಬಿನ್ ಉತ್ತಪ್ಪ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ. ಇವರಗಳ ಯಶಸ್ಸನ್ನು ಗಣಪತಿಯವರು ಸಂಭ್ರಮಿಸಿದರು.
ಕೊಡವ ಸಂಪ್ರದಾಯ :: ತಮ್ಮ ಊರಿನಲ್ಲಿ ಏನೇ ಕಷ್ಟ ಬಂದರೂ ಸಹಾಯ ಹಸ್ತ ನೀಡಲು ಪ್ರಥಮವಾಗಿ ಕೊಡವಕೇರಿಯನ್ನು ಸ್ಥಾಪಿಸಿದರು. ಈಗ ಈ ಕೇರಿಯು ಎಲ್ಲಾ ಕಡೆಯೂ ಪಸರಿಸಿದೆ.
ಅದ್ಭುತ ಮೈಕಟ್ಟು :: ಗಣಪತಿಯವರು 6 ಅಡಿ ಎತ್ತರ, ಗಾಂಭೀರ್ಯವುಳ್ಳ ಮೀಸೆ ಹಾಗೂ ಬಹಳ ಸ್ನೇಹಮಯಿ ವ್ಯಕ್ತಿತ್ವ ಉಳ್ಳವರು. ಪ್ರಸ್ತುತ ಸುಂಟಿಕೊಪ್ಪದ ನಾಕೂರಿನಲ್ಲಿ ಇವರ ಪತ್ನಿ ಬೀನಾ(ತಾಮನೆ ಬಾಳೆಯಡ) ಅವರೊಂದಿಗೆ ವಿಶ್ರಾಂತಿ ಜೀವನವನ್ನು ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಮಗಳು ಪೂಜಾ ಸೈನ್ಯಾಧಿಕಾರಿಯನ್ನು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಗ ಧ್ಯಾನ್ ಸುಬ್ಬಯ್ಯ ಸಿಡ್ನಿಯಲ್ಲಿ ನೆಲೆಸಿದ್ದಾರೆ.
ಗಣಪತಿಯವರ ಅನಿಸಿಕೆ :: ಹಾಕಿ ಆಟಗಾರರು ಹಾಕಿಯಿಂದ ಜೀವನವನ್ನು ರೂಪಿಸಿಕೊಂಡು ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ ಸೇವೆಯು ಹಾಕಿಗೂ ಹಾಗೂ ಕೊಡಗಿಗೂ ಅತ್ಯವಶ್ಯಕ. ಅವರು ತಮ್ಮ ಕೈಲಾದ ಸಹಾಯವನ್ನು ಯುವ ಪೀಳಿಗೆಗೆ ಮಾಡಲೇಬೇಕು. ಶಂಕರ್ ಸ್ವಾಮಿಯವರ ಗರಡಿಯಲ್ಲಿ ಪಳಗಿದ ಗಣಪತಿಯವರು, ಸೈನ್ಯದಿಂದ ನಿವೃತ್ತಿ ಪಡೆದ ನಂತರ ಮಡಿಕೇರಿಯಲ್ಲಿರುವ ಮ್ಯಾನ್ಸ್ ಕಾಂಪೌಂಡ್ ನಲ್ಲಿ ಕಿರಿಯ ಆಟಗಾರರಿಗೆ 9 ವರ್ಷಗಳ ಕಾಲ ಹಾಕಿ ತರಬೇತಿಯನ್ನು ನೀಡುತ್ತಾರೆ. ಇವರು ಒಳ್ಳೆಯ ಗಾಲ್ಫ್ ಆಟಗಾರರು ಕೂಡ ಹೌದು. ಕೇವಲ ಬೆರಳಣಿಕೆಯಷ್ಟು ವ್ಯಕ್ತಿಗಳು ಮಾತ್ರ ಕ್ರೀಡೆಯಲ್ಲಿ ಇವರಂತೆ ಕೊಡಗಿಗೆ ಗೌರವ ಹಾಗೂ ಹೆಸರು ತರಲು ಸಾಧ್ಯ. ಇವರಿಗೆ ಭಗವಂತನು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ.
ಕ್ರೀಡಾ ವಿಶ್ಲೇಷಣೆ :: ಚೆಪ್ಪುಡೀರ ಕಾರ್ಯಪ್ಪ