ಕೂಡಿಗೆ ಸೆ.12 NEWS DESK : ಮೈಸೂರು ರಾಜ್ಯವು ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡು 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ: 50 ರ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥವು ಕೊಡಗು ಜಿಲ್ಲೆಯಲ್ಲಿ ಐದು ದಿನಗಳ ಕಾಲ ಸಂಚರಿಸಿ ಕುಶಾಲನಗರ ತಾಲ್ಲೂಕಿನಿಂದ ನೆರೆಯ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿಗೆ ತೆರಳಿತು. ಕನ್ನಡ ಜ್ಯೋತಿ ರಥಕ್ಕೆ ಕೊಡಗಿನ ಗಡಿಭಾಗವಾದ ಶಿರಂಗಾಲ ಗೇಟ್ ಬಳಿ ಹಾಸನ ಜಿಲ್ಲೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರವಾಗಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಮತ್ತು ಶಿರಂಗಾಲ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಬೀಳ್ಕೊಟ್ಟರು.
ಕೂಡಿಗೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ :: ಇದಕ್ಕೂ ಮುನ್ನ ಕೂಡಿಗೆ ವೃತ್ತದ ಹಾಲಿನ ಡೇರಿ ಬಳಿ ಕನ್ನಡ ಜ್ಯೋತಿ ರಥವನ್ನು ಸ್ವಾಗತಿಸಿ ಮುಂದಿನ ಗ್ರಾಮಗಳಿಗೆ ಬೀಳ್ಕೊಡಲಾಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ತಾಲ್ಲೂಕು ಸ್ಥಳೀಯ ಸಂಸ್ಥೆ, ಕುಶಾಲನಗರ ಲಯನ್ಸ್ ಕ್ಲಬ್ , ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕ.ಸಾ.ಪ.ಘಟಕ, ಕೂಡುಮಂಗಳೂರು ಗ್ರಾ.ಪಂ ಹಾಗೂ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) , ಕನ್ನಡ ಭಾಷಾ ಸಂಘ, ಎಸ್.ಡಿ.ಎಂ.ಸಿ. ಹಾಗೂ ವಿದ್ಯಾರ್ಥಿ ಸಂಘದ ಸಂಯುಕ್ತಾಶ್ರಯದಲ್ಲಿ
ಕೂಡಿಗೆ ವೃತ್ತದ ಹಾಲಿನ ಡೈರಿ ಬಳಿ ಏರ್ಪಡಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮಾಚರಣೆಯಲ್ಲಿ ಕನ್ನಡ ನಾಡು- ನುಡಿ, ಸಂಸ್ಕೃತಿ, ಪರಂಪರೆಯ ಬಗ್ಗೆ ಜನಜಾಗೃತಿ ಮೂಡಿಸಲಾಯಿತು. ಕುಶಾಲನಗರ ಲಯನ್ಸ್ ಕ್ಲಬ್ ನ ಅಧ್ಯಕ್ಷ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ತಾಲ್ಲೂಕು ಸ್ಥಳೀಯ ಸಂಸ್ಥೆಯ ಡಾ.ದೇವರಗುಂಡ ಪ್ರವೀಣ್ , ಎಲ್ಲರೂ ಕನ್ನಡ ನಾಡು- ನುಡಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಕರ್ನಾಟಕ ಸುವರ್ಣ ಸಂಭ್ರಮ: 50 ದ ಉದ್ದೇಶ ಹಾಗೂ ಕನ್ನಡ ನಾಡಿನ ನಾಡು, ನುಡಿ, ಸಂಸ್ಕೃತಿ, ಪರಂಪರೆಯ ಮಹತ್ವದ ಕುರಿತು ಮಾತನಾಡಿದರು. ತಾಲ್ಲೂಕು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಗಣೇಶ್,
ಲಯನ್ಸ್ ಕ್ಲಬ್ ನ ವಲಯ ಅಧ್ಯಕ್ಷ ವಿ.ಎಸ್.ಸುಮನ್ ಬಾಲಚಂದ್ರ, ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕೊಡಗನ ಹರ್ಷ, ಟಿ.ಕೆ.ರಾಜಶೇಖರ್, ಕೂಡ್ಲೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎನ್.ವೆಂಕಟನಾಯಕ್ , ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ.ವಿಠಲ,ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಎ.ಎಂ.ಜವರಯ್ಯ, ಶಾಲಾ ವಿದ್ಯಾರ್ಥಿ ನಾಯಕ ಗೌತಮ್ ಇತರರು ಇದ್ದರು.
ಈ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬಿತ್ಯಾದಿ ಕನ್ನಡ ಭಾಷೆ, ಸಂಸ್ಕೃತಿ ಪ್ರತಿಬಿಂಬಿಸುವ ಕನ್ನಡ ಘೋಷಣೆಗಳನ್ನು ಪ್ರಚುರಪಡಿಸಲಾಯಿತು. ನಂತರ ಕೂಡಿಗೆ, ಹೆಬ್ಬಾಲೆ , ತೊರೆನೂರು, ಶಿರಂಗಾಲ ಗ್ರಾಮ ಪಂಚಾಯತಿಗಳ ವತಿಯಿಂದ ಶಾಲಾ ಕಾಲೇಜು ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ಜತೆಗೂಡಿ ಕನ್ನಡ ಜ್ಯೋತಿ ರಥವನ್ನು ಹಾಸನ ಜಿಲ್ಲೆಗೆ ಬೀಳ್ಕೊಡಲಾಯಿತು. ಕನ್ನಡ ಜ್ಯೋತಿ ರಥವು ಕೂಡಿಗೆ, ಕಣಿವೆ, ಹೆಬ್ಬಾಲೆ, ತೊರೆನೂರು ಹಾಗೂ ಜಿಲ್ಲೆಯ ಗಡಿಭಾಗವಾದ ಶಿರಂಗಾಲ ಗ್ರಾಮದ ಮೂಲಕ ನೆರೆಯ ಹಾಸನ ಜಿಲ್ಲೆಗೆ ತೆರಳಿತು.
ಹಾಸನ ಜಿಲ್ಲೆಗೆ ಕನ್ನಡ ರಥ ಬೀಳ್ಕೊಡುಗೆ: ಕೊಡಗು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ತೆರಳಿದ ಕನ್ನಡ ಜ್ಯೋತಿ ರಥಕ್ಕೆ ಗುರುವಾರ ಕೊಡಗಿನ ಗಡಿಭಾಗ ಶಿರಂಗಾಲ ಗೇಟ್ ಬಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರವಾಗಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಮತ್ತು ಶಿರಂಗಾಲ ಗ್ರಾಮಸ್ಥರು ಬೀಳ್ಕೊಟ್ಟರು. ಕೊಡಗು – ಹಾಸನ ಜಿಲ್ಲೆಯ ಗಡಿಭಾಗದ ಶಿರಂಗಾಲದ ಸೇತುವೆ ಬಳಿ ಕನ್ನಡ ಜ್ಯೋತಿ ರಥವನ್ನು ಹಾಸನ ಜಿಲ್ಲೆಯ ವತಿಯಿಂದ ಸ್ವಾಗತಿಸಲಾಯಿತು.










