ಸಿದ್ದಾಪುರ NEWS DESK ಸೆ.12 : : ಕರಡಿಗೋಡು ಆರೆಂಜ್ ಕೌಂಟಿ ಇವಾಲ್ವ್ ಬ್ಯಾಕ್ ರೆಸಾರ್ಟ್ ಸಂಸ್ಥೆ ವತಿಯಿಂದ ನೂತನ ತಂಗುದಾಣವನ್ನು ಕೊಡುಗೆಯಾಗಿ ನಿರ್ಮಿಸಿಕೊಡಲಾಯಿತು. ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ತೂಬನಕೊಲ್ಲಿ ಬಳಿ ಅಂದಾಜು 5 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ತಂಗುದಾಣವನ್ನು ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿಸ್ವಾಮಿ ಸೇರಿದಂತೆ ಮತ್ತಿತರರು ಸೇರಿ ಉದ್ಘಾಟನೆ ಮಾಡಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ ಹಲವು ವರ್ಷಗಳ ಹಿಂದೆ ಕರಡಿಗೋಡು ಗ್ರಾಮದಲ್ಲಿ ಆರೆಂಜ್ ಕೌಂಟಿ ಎಂಬ ರೆಸಾರ್ಟ್ ಸಂಸ್ಥೆಯನ್ನು ಪ್ರಾರಂಭಿಸಿ ಸಂಸ್ಥೆ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಲವು ಯೋಜನೆಗಳನ್ನು ರೂಪಿಸಿ ಗ್ರಾಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕರಡಿಗೋಡು ಸರ್ಕಾರಿ ಶಾಲೆ ದತ್ತು ಸ್ವೀಕಾರ, ಗ್ರಾಮ ವ್ಯಾಪ್ತಿಯಲ್ಲಿ ಸೋಲಾರ್ ದೀಪ ಅಳವಡಿಕೆ, ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಹೈಮಾಸ್ಟ್
ಲೈಟ್ ಅಳವಡಿಕೆ, ಶುಚಿತ್ವಕ್ಕೆ ಆದ್ಯತೆ, ಶಾಲಾ ಮಕ್ಕಳ ಶಿಕ್ಷಣಕ್ಕೆ ನೆರವು, ಸಿದ್ದಾಪುರ ಎಸ್ಎನ್‌ಡಿಪಿ ಸಂಸ್ಥೆ ಮೂಲಕ ಸಾರ್ವಜನಿಕ ಸೇವೆಗೆ ಆಂಬುಲೆನ್ಸ್ ಕೊಡುಗೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಸೇವಾ ಮನೋಭಾವದೊಂದಿಗೆ ಮುನ್ನಡೆಯುವುದರೊಂದಿಗೆ ಬಹು ದಿನಗಳ ಬೇಡಿಕೆಯಾಗಿದ್ದ ತೂಬನ ಕೊಲ್ಲಿ ಬಸ್ ನಿಲ್ದಾಣವನ್ನ ಉದಾರವಾಗಿ ನವೀಕರಿಸಿ ಸಾರ್ವಜನಿಕ ಸೇವೆಗೆ ನೀಡಿ
ಗ್ರಾಮದ ಅಭಿವೃದ್ಧಿ ಕಾಳಜಿಗೆ ಆರೆಂಜ್ ಕೌಟಿ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ ಎಂದರು. ಮಾಲ್ದಾರೆ ಗ್ರಾ.ಪಂ ಅಧ್ಯಕ್ಷೆ ಮಾಲತಿ, ಸಿದ್ದಾಪುರ ಗ್ರಾ.ಪಂ ಉಪಾಧ್ಯಕ್ಷ ಪಳನಿಸ್ವಾಮಿ ಮಾತನಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುತ್ತಿರುವ ಆರೆಂಜ್ ಕೌಂಟಿ ಸಂಸ್ಥೆಯ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರು. ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಸಂಸ್ಥೆ ಮೂಲಕ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕವನ್ನ ನಿರ್ಮಿಸಿ ಕೊಡುವಂತೆ ಮನವಿ ಮಾಡಿದ ಅವರು, ಪ್ಲಾಸ್ಟಿಕ್ ನಿರ್ಮೂಲನೆ ಯೊಂದಿಗೆ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿಸಲು ಪಂಚಾಯಿತಿಯೊಂದಿಗೆ ಕೈಜೋಡಿಸಬೇಕೆಂದರು. ಈ ಸಂದರ್ಭ ಆರೆಂಜ್ ಕೌಂಟಿ ಸಂಸ್ಥೆಯ ವ್ಯವಸ್ಥಾಪಕ ಥೋಮಸ್ ಪೌಲ್, ತೋಟದ ವ್ಯವಸ್ಥಾಪಕ ಪವನ್, ಪ್ರವೀಣ್, ಗ್ರಾ.ಪಂ ಸದಸ್ಯರಾದ ಮೊಹಮ್ಮದ್ ಅಲಿ, ಹನೀಫ್, ಹಸ್ಸನ್, ಶಮೀರ್, ಮಹೇಶ್ ಕುಮಾರ್, ಮುತ್ತಪ್ಪ, ಪ್ರಮುಖರಾದ ಮಹೇಶ್, ಗಿರೀಶ್ ಹಾಜರಿದ್ದರು.