ಮಡಿಕೇರಿ ಸೆ.18 NEWS DESK : ರೋಟರಿ ಮಡಿಕೇರಿ ಸಂಸ್ಥೆಯಿಂದ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಇಂಟರ‍್ಯಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ನಡೆಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಇಂಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಮಿಥುನ್ ಪೂವಯ್ಯ ಹಾಗೂ ಕಾರ್ಯದರ್ಶಿಯಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಕೆ.ಅನುಷಾ ಅಧಿಕಾರ ಸ್ವೀಕರಿಸಿದರು.
ಪಿ.ಡಿ.ಜಿ.ರೋಟರಿಯನ್ ಡಾ.ಕೆ.ರವಿ ಅಪ್ಪಾಜಿ ಪದಗ್ರಹಣ ಅಧಿಕಾರಿಯಾಗಿ ಪಾಲ್ಗೊಂಡು ಕ್ಲಬ್‍ನ 25 ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ತಾಳ್ಮೆಯನ್ನು ರೂಢಿಸಿಕೊಂಡರೆ ಆತ್ಮಸ್ಥೈರ್ಯ ಹೆಚ್ಚಾಗಿ ಮುಂದೆ ಎದುರಾಗಬಹುದಾದ ಎಲ್ಲಾ ಕಷ್ಟಗಳನ್ನು ಎದುರಿಸಬಹುದಾಗಿದೆ. ಪ್ರಪಂಚದ ಅತ್ಯಂತ ಯಶಸ್ವಿ ವ್ಯಕ್ತಿಗಳು ಜೀವನದಲ್ಲಿ ತಾಳ್ಮೆಯಿಂದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಸತ್ಯವನ್ನು ಅಮೆರಿಕದ ಸ್ಟೆಂಡ್‍ಫರ್‍ಡ್ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆ ಬಹಿರಂಗ ಪಡಿಸಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಸಂಸ್ಥೆಯ ಅಧ್ಯಕ್ಷ ರೋಟರಿಯನ್ ಎಂ.ಸುದಯ್ ನಾಣಯ್ಯ ಅವರು, 1950 ರಲ್ಲಿ ರೋಟರಿ ಸಂಸ್ಥೆ ಸ್ಥಾಪನೆಯಾಗಿದೆ, ರೋಟರಿ ಮೂಲಕ ಅದರ ಸದಸ್ಯರು ತಾವು ಬೆಳೆದು ಬಂದ ಪರಿಸರಕ್ಕೆ ತಮ್ಮ ಕೈಯಲ್ಲಾದ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ. ಆಸ್ಟ್ರೇಲಿಯಾದ ಮೆಲ್‍ಬೋರ್ನ್ ನಲ್ಲಿ ಪ್ರಥಮ ಇಂಟರ‍್ಯಾಕ್ಟ್ ಕ್ಲಬ್ ಸ್ಥಾಪನೆಯಾಯಿತು. ಇಂದು ಪ್ರಪಂಚದ 145 ದೇಶಗಳಲ್ಲಿ 1,490 ಇಂಟರ್ಯಾಕ್ಟ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ ಎಂದರು. ಕ್ಲಬ್ 12 ರಿಂದ 18 ವರ್ಷದ ವಯೋಮಿತಿಯವರಿಗೆ ಸಿಮೀತವಾಗಿ ಕಾರ್ಯನಿರ್ವಹಿಸುತ್ತಿದೆ. ಯುವ ಸಮುದಾಯಕ್ಕೆ ತಮ್ಮ ಪರಿಸರದಲ್ಲಿ ಸಮಾಜಮುಖಿಯಾದ ಚಿಂತನೆಯನ್ನು ಬೆಳೆಸುವ ಹಾಗೂ ನಾಯಕತ್ವದ ಗುಣಗಳನ್ನು ರೂಡಿಸಿಕೊಳ್ಳುವ ನಿಟ್ಟಿನಲ್ಲಿ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ಕಾಲೇಜ್ ನ ಪ್ರಾಂಶುಪಾಲ ವಿಜಯ್ ಅವರು ಮಾತನಾಡಿ, ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಂಡು ಇಂಟರ‍್ಯಾಕ್ಟ್ ಕ್ಲಬ್ ಮೂಲಕ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‍ನ ಯೂತ್ ಸರ್ವಿಸ್ ಡೆರೆಕ್ಟರ್ ರೋಟರಿಯನ್ ಕೆ.ಸಿ.ಕಾರ್ಯಪ್ಪ, ರೋಟರೆಕ್ಟ್ ಚೇರ್‍ಮೆನ್ ಸಿ.ಟಿ.ಮಂದಣ್ಣ, ರೋಟರಿಯನ್ ಲಲಿತಾ ರಾಘವನ್, ರೋಟರಿಯನ್ ಎನ್.ಪಿ.ಚೀಯಣ್ಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಂಟರ‍್ಯಾಕ್ಟ್ ಕ್ಲಬ್‍ನ ಸಂಯೋಜಕರಾದ ಸೋನಾ ಚೋಂದಮ್ಮ ಉಪಸ್ಥಿತರಿದ್ದರು. ಇಂಟರ್ಯಾಕ್ಟ್ ಕ್ಲಬ್ ನ ಸದಸ್ಯರು ಕಾರ್ಯಕ್ರಮ ನಿರೂಪಿಸಿದರು.