ಮಡಿಕೇರಿ NEWS DESK ಸೆ.19 : ನಿವೇಶನ ರಹಿತರು, ದುರ್ಬಲರಿಗೆ ಮೀಸಲಾಗಿದ್ದ ಬಸವನಹಳ್ಳಿ ಗ್ರಾಮದ ‘ನವಗ್ರಾಮ ಯೋಜನೆ’ಯ ಮೀಸಲು ಜಾಗವನ್ನು ಸ್ಥಳೀಯ ಫಲಾನುಭವಿಗಳನ್ನು ಕಡೆಗಣಿಸಿ, ಉಳ್ಳವರಿಗೆ ಮತ್ತು ಇತರೆ ಪ್ರದೇಶದವರಿಗೆ ನೀಡಲಾಗಿದೆ ಎಂದು ಸೋಲಿಗ ಸಮಿತಿಯ ಉಪಾಧ್ಯಕ್ಷ ಮಹೇಶ್ ಬಿ.ಬಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ಹೋಬಳಿ ಬಸವನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿ ಪಕ್ಕದ 2 ಎಕರೆ ಜಾಗವನ್ನು ನವಗ್ರಾಮ ಯೋಜನೆಗೆಂದು 2013 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಕಾಯ್ದಿರಿಸಿದ್ದರು. ಈ ಜಾಗವನ್ನು ಗುಡ್ಡೆಹೊಸೂರು ಪಂಚಾಯ್ತಿ ವ್ಯಾಪ್ತಿಯ ಬಡವರು, ನಿರ್ಗತಿಕರು, ವಸತಿ ರಹಿತರಿಗೆ ನಿವೇಶನಗಳನ್ನಾಗಿ ನೀಡಲು ನಿರ್ಧರಿಸಲಾಗಿತ್ತು. ಆದರೆ, ಪ್ರಸ್ತುತ ಉಳ್ಳವರಿಗೆ ಹಾಗೂ ಇತರೆ ಪ್ರದೇಶಗಳವರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕೆಲ ನಿವೇಶನಗಳಲ್ಲಿ ಎರಡಂತಸ್ತಿನ ಮನೆಗಳ ನಿರ್ಮಾಣವಾಗುತ್ತಿದೆ ಎಂದರು. ನವಗ್ರಾಮ ಯೋಜನೆಯಡಿ ನಿವೇಶನಕ್ಕಾಗಿ ಬಸವನಹಳ್ಳಿ ಸುತ್ತಮುತ್ತಲ ನೂರಾರು ಮಂದಿ ನಿವೇಶನ ರಹಿತರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇವರಲ್ಲಿ ಕೇವಲ 8 ಮಂದಿಗಷ್ಟೆ ನಿವೇಶನ ನೀಡಲಾಗಿದ್ದು, ಉಳಿದವುಗಳನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ತಾಲ್ಲೂಕು ತಹಶೀಲ್ದಾರರಿಗೆ ದೂರು ನೀಡಲಾಗಿದೆ. ಸೂಕ್ತ ತನಿಖೆ ನಡೆಸಿ ವಸತಿ ರಹಿತರಿಗೆ ಜಿಲ್ಲಾಡಳಿತ ಅಗತ್ಯ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಬಸವನಹಳ್ಳಿ ಸೋಲಿಗ ಸಮಿತಿಯ ಗೌರವಾಧ್ಯಕ್ಷರಾದ ಪಿ.ಹೆಚ್.ಸಿದ್ದಲಿಂಗ, ದೊಡ್ಡಬೆಟ್ಟಗೇರಿ ಹಾಡಿ ನಿವಾಸಿ ಅನಿತಾ ಬಿ.ಆರ್., ಬಸವನಹಲ್ಳಿ ಹೊಸೂರು ಗ್ರಾಮದ ಎ.ತಾಹೀರ ಹಾಗೂ ಲಕ್ಷ್ಮಿ ಪಿ. ಉಪಸ್ಥಿತರಿದ್ದರು.