ಕುಶಾಲನಗರ, ಸೆ.23 NEWS DESK : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರತಿಭೆ ಮತ್ತು ಹವ್ಯಾಸ ಅನ್ವೇಷಣೆಗಳನ್ನು ಗುರುತಿಸಲು ಮತ್ತು ಪ್ರಶಂಸಿಸಲು ವಿಜ್ಞಾನ ವಸ್ತು ಪ್ರದರ್ಶನಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯ ಪ್ರಾಂಶುಪಾಲ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಆಡಳಿತ) ಎಂ.ಚಂದ್ರಕಾಂತ್ ಹೇಳಿದರು. ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಸಹಯೋಗದೊಂದಿಗೆ ಶಾಲಾ ಶಿಕ್ಷಣ ಇಲಾಖೆ ಹಾಗೂ ಕೂಡಿಗೆ ಡಯಟ್ ಸಂಸ್ಥೆಯ ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಮತ್ತು ಗಣಿತ ಸಂಘದ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ತಾರ್ಕಿಕ ಶಕ್ತಿ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು. ವಿಜ್ಞಾನ ವಸ್ತು ಪ್ರದರ್ಶನದಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಯ ಅವಕಾಶವನ್ನು ನೀಡುವುದು ಹಾಗೂ ಅವರಲ್ಲಿ ವೈಜ್ಞಾನಿಕ ಸಾಮರ್ಥ್ಯಗಳನ್ನು ಉದ್ದೀಪನಗೊಳಿಸುವುದು ವಸ್ತು ಪ್ರದರ್ಶನದ ಉದ್ದೇಶವಾಗಿದೆ ಎಂದು
ಚಂದ್ರಕಾಂತ್ ಹೇಳಿದರು. ವಿಜ್ಞಾನ ವಸ್ತು ಪ್ರದರ್ಶನದ ಉದ್ದೇಶ ಕುರಿತು ಮಾಹಿತಿ ನೀಡಿದ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ವಿ. ವಿಜಯ್ , ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಯೊಂದಿಗೆ ವೈಜ್ಞಾನಿಕ ಸಂಶೋಧನಾ ಪ್ರವೃತ್ತಿ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ವೈ.ಜೆ. ಪರಮೇಶ್ವರಪ್ಪ ಮಾತನಾಡಿ, ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕ್ರೀಯಾಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುತ್ತವೆ ಎಂದರು. ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕ ಎಂ.ಕೃಷ್ಣಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕೋಶಾಧಿಕಾರಿ ಎ.ಸಿ.ಮಂಜುನಾಥ್, ತೀರ್ಪುಗಾರರರಾದ ಉಪನ್ಯಾಸಕ ಹೆಚ್.ಎಸ್.ಗುರುಸ್ವಾಮಿ, ಮುಖ್ಯ ಶಿಕ್ಷಕ ಸೂದನ ಎಸ್.ಗೋಪಾಲ್, ವಿಜ್ಞಾನ ಶಿಕ್ಷಕ ವೇಣುಗೋಪಾಲ್, ವಿಜ್ಞಾನ ಶಿಕ್ಷಕಿ ಬಿ.ಡಿ.ರಮ್ಯ, ವಿವಿಧ ಶಾಲೆಯ ವಿಜ್ಞಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಗಮನ ಸೆಳೆಯಿತು. ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದಂತೆ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಪರಿಸರ ವಿಜ್ಞಾನ, ಭೂಮಿ ಮತ್ತು ಬಾಹ್ಯಾಕಾಶ, ರಾಕೇಟ್ ಉಡಾವಣೆಯ ಮಾದರಿಗಳು, ಸ್ವಚ್ಚ ಪರಿಸರ ಮತ್ತು ಆರೋಗ್ಯ ಅಭಿಯಾನ, ಎಂಜಿನಿಯರಿಂಗ್ ಕ್ಷೇತ್ರ, ವಿದ್ಯುತ್ಕಾಂತೀಯ ಕ್ರೇನ್, ಪರಿಸರ ಮಾಲಿನ್ಯ ನಿಯಂತ್ರಣ, ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ ಸೇರಿದಂತೆ ನಾನಾ ಬಗೆಯ ವಿಜ್ಞಾನ ಮಾದರಿ ಪ್ರದರ್ಶನ ಆಕರ್ಷಕವಾಗಿತ್ತು. ಮಕ್ಕಳ ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ಕ್ಷೇತ್ರದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನದಲ್ಲಿ ಪ್ರೌಢಶಾಲಾ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ವಸ್ತು ಪ್ರದರ್ಶನ ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಜತೆಗೆ ಜ್ಞಾನ ಹೆಚ್ಚಿಸುವಲ್ಲೂ ಯಶಸ್ವಿಯಾಯಿತು.