ಮಡಿಕೇರಿ ಸೆ.23 NEWS DESK : `ಕನ್ನಡ ಭಾಷಾ ಬೋಧಕರು ಕೇವಲ ಬೋಧಕರಲ್ಲ. ಅವರು ಸಮಾಜವನ್ನು ತಿದ್ದುವ ರಾಯಭಾರಿಗಳು. ವಿದ್ಯಾರ್ಥಿಗಳಲ್ಲಿ ಅವರು ಸಾಹಿತ್ಯದ ಮೂಲಕ ಸಾಮಾಜಿಕ ಮೌಲ್ಯಗಳನ್ನು ಬಿತ್ತಬೇಕು’ ಎಂದು ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್ ತಿಳಿಸಿದರು. ದಲಿತ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕನ್ನಡ ಭಾಷಾ ಬೋಧಕರಿಗಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಭಾವನಾಜೀವಿಗಳೂ ಆಗಿರುವ ಅವರು ಸೋಮಾರಿತನ ತೋರದೇ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. `ಗೈಡ್’ ಮೇಲೆ ಅವಲಂಬಿತರಾಗದೇ ಪಠ್ಯವನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು. `ಕನ್ನಡ ಸಾಹಿತ್ಯದಲ್ಲಿ ಪರಿವರ್ತನೆಯ ಹೆಗ್ಗುರುತುಗಳು’ ವಿಷಯ ಕುರಿತು ಸುದೀರ್ಘ ಉಪನ್ಯಾಸ ನೀಡಿದ ಅವರು, `ಪಂಪ ಹೇಳಿದ `ಮನುಷ್ಯಜಾತಿ ತಾನೊಂದೆ ವಲಂ’ ಮಾತಿನಿಂದ ಹಿಡಿದು ದೇವನೂರ ಮಹಾದೇವ ಅವರ `ಸಂಬಂಜ ಅನ್ನೋದು ದೊಡ್ಡದು ಕಣಾ’ ಎಂಬ ಮಾತಿನವರೆಗೆ ಅನೇಕ ಕವಿವಾಣಿಗಳನ್ನು ಉಲ್ಲೇಖಿಸಿ ಗಮನ ಸೆಳೆದರು.
`ಇದು ಕೇವಲ ಮನುಷ್ಯ ಕೇಂದ್ರೀತ ಕಾಲಘಟ್ಟವಲ್ಲ, ಇದು ಜೀವಕೇಂದ್ರಿತ ಕಾಲಘಟ್ಟ’ ಎಂಬ ಮಾತನ್ನು ಪ್ರತಿಪಾದಿಸಿ, ಕಾಲಾತೀತವಾದ ಸತ್ಯಗಳನ್ನು ಪ್ರತಿಪಾದಿಸಿದ ಕವಿಗಳ ನುಡಿಗಳನ್ನು ಉದಾಹರಿಸಿದರು. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಪರಿವರ್ತನೆ ಹೆಜ್ಜೆ ಗುರುತುಗಳು ಕಂಡರೂ ದೊಡ್ಡ ಹೆಗ್ಗುರುತು ಮೂಡುವುದು ವಚನ ಸಾಹಿತ್ಯದ ಕಾಲಘಟ್ಟದಲ್ಲಿ ಎಂದು ಹೇಳಿದ ಅವರು, `ಇಡೀ ಜಗತ್ತಿಗೆ ಮಾದರಿ ಎಂಬ ಚಿಂತನಾಕ್ರಮ ವಚನ ಸಾಹಿತ್ಯದ್ದಾಗಿತ್ತು’ ಎಂದು ಶ್ಲಾಘಿಸಿದರು. “ಕಾಯಕವಾವುದೆಂದು ಬೆಸಗೊಂಡಡೆ ನಿಮ್ಮಾಣೆ’, ಎನಗಿಂತ ಕಿರಿಯರಿಲ್ಲ…ನಾನು ಹಾರುವನೆಂದರೆ ಕೂಡಲಸಂಗಮದೇವ ನಗುವ’ ಮೊದಲಾದ ವಚನಗಳನ್ನು ಉಲ್ಲೇಖಿಸಿ ಹೇಗೆ ವಚನದ ಕಾಲಘಟ್ಟದಲ್ಲಿ ಸಾಮಾಜಿಕ ಪರಿವರ್ತನೆಯ ಹೆಗ್ಗುರುತುಗಳು ಮೂಡಿದವು ಎಂಬುದನ್ನು ವಿವರಿಸಿದರು. ದಾಸಸಾಹಿತ್ಯ ಹಾಗೂ ನವೋದಯದಲ್ಲಿ ಮೂಡಿದ ಹೆಜ್ಜೆಗುರುತುಗಳನ್ನು ಹೇಳಿದ ತರುವಾಯ ಅವರು, ಪ್ರಗತಿಶೀಲ ಲೇಖಕರ ಸಂಘ, ಕರ್ನಾಟಕ ಬರಹಗಾರರು ಮತ್ತು ಕಲಾವಿದರ ಒಕ್ಕೂಟ, ದಲಿತ ಬಂಡಾಯ ಸಾಹಿತ್ಯ, ಸದ್ಯ ದಲಿತ ಸಾಹಿತ್ಯ ಪರಿಷತ್ತಿನ ಸ್ಥಾಪನೆಯವರೆಗೂ ಸವಿಸ್ತಾರವಾಗಿ ಹೇಳಿದರು. ಜೊತೆಗೆ, ಈಗ ಸಾಹಿತ್ಯ ಮರುರೂಪುಗೊಳ್ಳಬೇಕಿದೆ ಎಂಬ ಎಚ್ಚರಿಕೆಯ ನುಡಿಗಳನ್ನೂ ಹೇಳಿದರು. ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಮಾತನಾಡಿ, `ಬುದ್ಧ, ಬಸವ, ಅಂಬೇಡ್ಕರ್ ಅರಿವು, ಆಚಾರ, ಅನುಭಾವಗಳ ರೂಪಕ’ ಎಂದು ಪ್ರತಿಪಾದಿಸಿದರು.
`ಸಂವಿಧಾನದ ಸೌಲಭ್ಯಗಳು ನನಗೊಬ್ಬನಿಗೆ ಮಾತ್ರ ಸಿಕ್ಕರೆ ಸಾಲದು. ಅದು ಎಲ್ಲರಿಗೂ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಮಾಡಲು ಪ್ರಯತ್ನಿಸಬೇಕು’ ಎಂದು ಕರೆ ನೀಡಿದರು. `ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ’ ಎಂಬ ಬಸವಣ್ಣನವರ ವಚನದ ಸಾಲುಗಳನ್ನು ಉಲ್ಲೇಖಿಸಿದ ಅವರು, `ದಲಿತ ಸಾಹಿತ್ಯ ಪರಿಷತ್ತು ಎಂಬ ವೇದಿಕೆಯನ್ನು ಬಳಸಿಕೊಂಡು ಸಮಾಜದಲ್ಲಿ ಸಮಾನತೆ ತರಲು ಎಲ್ಲರೂ ಶ್ರಮಿಸಬೇಕು’ ಎಂದರು.
ಪರಿಷತ್ತಿನ ಮೈಸೂರು ವಿಭಾಗೀಯ ಸಂಯೋಜಕ ಚಂದ್ರಗುಪ್ತ, ರಾಜ್ಯ ಕಾರ್ಯದರ್ಶಿ ಸುಭಾಷ್ ಹೊದ್ಲುರು, ನಗರಸಭೆಯ ಮಾಜಿ ಅಧ್ಯಕ್ಷ ಎಚ್.ಎಂ.ನಂದಕುಮಾರ್, ಪರಿವರ್ತನಾ ಚಳವಳಿಯ ಮೋಹನ್ ಮೌರ್ಯ ಭಾಗವಹಿಸಿದ್ದರು. ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಅವರು ಸಹಿ ಹಾಕುವ ಮೂಲಕ ದಲಿತ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿದರು. ಹಲವು ಕ್ರಾಂತಿಗೀತೆಗಳು ಕಾರ್ಯಕ್ರಮಕ್ಕೆ ಮೆರುಗು ತುಂಬಿದವು.