ಮಡಿಕೇರಿ NEWS DESK ಅ.7 : ದೀರ್ಘಕಾಲಿಕವಾದ “ಕಾಫಿ ಕೃಷಿ”ಯ ಬಗ್ಗೆ ಕಾಫಿ ಬೆಳೆೆಗಾರರಲ್ಲಿ ಯಾವುದೇ ಗೊಂದಲ ಅಥವಾ ಆತಂಕ ಬೇಡ, ಈ ಕೃಷಿಯನ್ನು ನಂಬಿ ಮುಂದುವರೆಯಿರಿ ಎಂದು ಸಕಲೇಶಪುರದ ಪ್ರಗತಿಪರ ಕೃಷಿಕ ಧರ್ಮರಾಜ ಅವರು ಕರೆ ನೀಡಿದ್ದಾರೆ. ಮಡಿಕೇರಿ ದಸರಾ ಸಮಿತಿಯಿಂದ ಆಯೋಜಿತ ಕಾಫಿ ದಸರಾದ ದ್ವಿತೀಯ ದಿನದಂದು ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಮುಖ ಬೆಳೆಯಾಗಿ ಕಾಫಿ ಕೃಷಿಯನ್ನು ನಡೆಸುವುದರೊಮದಿಗೆ ಮಿಶ್ರ ಬೆಳೆಯಾಗಿ ಇತರೆ ಬೆಳೆಗಳನ್ನು ನಿಮಗೆ ಅಗತ್ಯವಿರುವಷ್ಟು ಬೆಳೆಯಿರಿ. ಆದರೆ, ಕಾಫಿಗೆ ಪರ್ಯಾಯವಾಗಿ ಬಟರ್ ಫ್ರೂಟ್ ಇನ್ನಿತರ ಬೆಳೆಗಳನ್ನು ದೀರ್ಘ ಕಾಲಿಕವಾಗಿ, ದೊಡ್ಡ ಪ್ರಮಾಣದಲ್ಲಿ ಬೆಳೆಯುವುದು ಸುಲಭ ಸಾಧ್ಯವಲ್ಲವೆಂದು ಅಭಿಪ್ರಾಯಿಸಿ, ಯಾವುದೇ ರೀತಿಯ ವೈಫರೀತ್ಯಗಳ ನಡುವೆಯೂ ಕಾಫಿ ಕೃಷಿ ಬೆಳೆÉಗಾರರನ್ನು ಕೈ ಬಿಟ್ಟಿಲ್ಲವೆಂದು ನುಡಿದರು. ಪೋಷಕಾಂಶಗಳನ್ನು ಬಗ್ಗೆ ನಿಗಾ ಇರಲಿ- ಪ್ರಸ್ತುತ ಕಾಫಿ ಬೆಳೆಗಾರರು ತಾವು ಯಾವ ರೀತಿಯಲ್ಲಿ ಕೃಷಿ ನಡೆಸಬೇಕು, ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡಬೇಕೆ, ಸಾವಯವ ಕೃಷಿ ಕಾಫಿಗೆ ಒಗ್ಗೀತೆ ಮೊದಲಾದ ಗೊಂದಲಗಳಲ್ಲಿ ಇದ್ದಾರೆ. ಆಯಾ ವಿಧಾನಗಳಲ್ಲಿ ಸಾಧನೆ ಮಾಡಿರುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ, ಬೆಳೆÉಗಾರ ತನ್ನ ತೋಟದ ಮಣ್ಣಿನ ಪರೀಕ್ಷೆಯ ಮೂಲಕ, ಅಗತ್ಯವಿರುವ ರಸಗೊಬ್ಬರ, ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸಿ ಮಣ್ಣಿನ ಆರೋಗ್ಯನ್ನು ಕಾಯ್ದುಕೊಳ್ಳುವ ಮೂಲಕ ಕಾಫಿ ಉತ್ಪಾದನೆಯನ್ನು ಹೆಚ್ಚಿಸಿಕೊಂಡು ಉತ್ತಮ ಕೃಷಿ ಮಾಡಲು ಸಾಧ್ಯವಿದೆಯೆಂದು ಸ್ಪಷ್ಟಪಡಿಸಿದರು. ಕಾಫಿ ತೋಟಗಳನ್ನು ಉತ್ತಮವಾಗಿ ನಿರ್ವಹಿಸಲು ಮಣ್ಣಿನ ಸಾರ ಪಿಹೆಚ್ 6.5 ರಿಂದ 7 ರ ಒಳಗೆ ಇರಬೇಕು. ಈ ಪಿಹೆಚ್ 5 ಕ್ಕಿಂತ ಕೆಳಕ್ಕಿಳಿದರೆ, ಇಲ್ಲವೆ ನಿಗದಿತ ಮಾನದಂಡಕ್ಕಿಂತ ಹೆಚ್ಚಿದ್ದ ಸಂದರ್ಭ ನೀವು ಯಾವುದೇ ರಸಗೊಬ್ಬರಗಳನ್ನ ನೀಡಿದರು ಅದು ಪ್ರಯೋಜನಕಾರಿಯಾಗಲಾರದೆಂದು, ಮಣ್ಣಿನ ಪರೀಕ್ಷೆಯ ಮಹತ್ವದತ್ತ ಬೊಟ್ಟು ಮಾಡಿದರು. ದ್ವ್ವಿತೀಯ ಹಂತವನ್ನು ಮರೆತಿದ್ದೇವೆ- ಬಹುತೇಕ ಕಾಫಿ ಬೆಳೆಗಾರರು ಮೊದಲ ಹಂತದ ನೈಟ್ರೋಜನ್, ಫಾಸ್ಫರಸ್ ಮತ್ತು ಪೊಟೇಶ್(ಎನ್‌ಪಿಕೆ) ರಸ ಗೊಬ್ಬರವನ್ನು ನಿಯಮಿತವಾಗಿ ನೀಡುತ್ತಾರಾದರು, ದ್ವಿತೀಯ ಹಂತದಲ್ಲಿ ಅತ್ಯವಶ್ಯವಾಗಿ ನೀಡಬೇಕಾದ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಸಲ್ಫರ್‌ನ್ನು ಕಾಫಿ ಗಿಡಗಳಿಗೆ ನೀಡುವುದನ್ನು ಮರೆತಿದ್ದಾರೆ. ಈ ಹಂತವನ್ನು ಬಿಟ್ಟು ಮೂರನೇ ಹಂತದ ಸೂಕ್ಷ್ಮ ಪೋಷಕಾಂಶಗಳನ್ನು ನೀಡುತ್ತಿದ್ದಾರೆ. ದ್ವಿತೀಯ ಹಂತವನ್ನು ಮರೆತಿರುವುದರಿಂದ ಕಾಫಿ ಇಳುವರಿಯನ್ನು ನಿರೀಕ್ಷೆಯ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ಅಭಿಪ್ರಾಯಿಸಿದರು. ಕಳೆ ನಾಶಕವನ್ನೆಂದ ಬಳಸದಿರಿ- ಕಾಫಿ ತೋಟಗಳಲ್ಲಿ ಕಳೆ ಗಿಡಗಳು ಹೆಚ್ಚಿದೆಯೆಂದರೆ ಅಲ್ಲಿನ ಮಣ್ಣು ಆರೋಗ್ಯ ಪೂರ್ಣವಾಗಿದೆಯೆಂದೇ ಅರ್ಥ. ಇಂತಹ ಕಳೆಯನ್ನು ತೆಗೆದು ಮತ್ತೆ ಭೂಮಿಗೆ ಸೇರಿಸಬೇಕೇ ಹೊರತು, ಕಳೆನಾಶಕದ ಮೂಲಕ ಅದನ್ನು ಕೊಲ್ಲುವ ಕೆಲಸ ಬೇಡ. ಕಳೆ ನಾಶಕದಿಂದ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ಸಂಪೂರ್ಣವಾಗಿ ನಾಶವಾಗುವ ಅಪಾಯವಿದೆಯೆಂದು ಎಚ್ಚರಿಕೆಯನ್ನಿತ್ತರು. ಮಿತಿ ಮಿರಿದ ರಸಗೊಬ್ಬರ ಕಾಫಿ ಪರಿಮಳ ಮಾಯ!- ಸುಂಟಿಕೊಪ್ಪ ವಿಭಾಗದ ಸಾವಯವ ಕಾಫಿ ಕೃಷಿಕ ಖಲಿಸ್ತಾ ಡಿಸಿಲ್ವಾ ಅವರು ಮಾತನಾಡಿ, ಕಾಫಿ ಕೃಷಿಯಲ್ಲಿ ಅತಿಯಾದ ರಸಗೊಬ್ಬರ ಬಳಕೆಯಿಂದ ಕಾಫಿಯ ಗುಣಮಟ್ಟ ಹಾಳಾಗಿದೆ.ಮೊದಲು ಕಾಫಿ ಅಂಗಡಿಗಳಿಂದ ಕಾಫಿಯ ಪರಿಮಳ ಸುತ್ತಮುತ್ತಲೆಲ್ಲ ಪಸರಿಸುತಿತ್ತಾದರೆ, ಇಂದು ಅಂಗಡಿಯ ಬಳಿ ಹೋಗಿ ಮೂಸಿ ನೋಡುವ ಸ್ಥಿತಿ ತಲುಪಿದೆಯೆಂದು ಹಾಸ್ಯದ ಧಾಟಿಯಲ್ಲಿ ನುಡಿದು, ಪ್ರಸ್ತುತ ತಾನು ಕಾಫಿ ಕೃಷಿಯಲ್ಲಿ ರಸಗೊಬ್ಬರಗಳ ಬಳಕೆಯನ್ನು ಸಂಪುರ್ಣವಾಗಿ ಕೈ ಬಿಟ್ಟಿದ್ದು, ಮಣ್ಣಿನ ಆರೋಗ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನ ಪ್ರಯತ್ನಗಳನ್ನಷ್ಟೆ ನಡೆಸುವ ಮೂಲಕ ಉತ್ತಮ ಫಸಲನ್ನು ಪಡೆಯುತ್ತಿರುವುದಾಗಿ ತಿಳಿಸಿದರು. ಜೇನು ಕೃಷಿಯಿಂದ ಕಾಫಿ ಫಸಲು ಹೆಚ್ಚಳ- ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಡಾ. ಕೆಂಚರೆಡ್ಡಿ ಅವರು ಮಾತನಾಡಿ, ಕಾಫಿ ತೋಟಗಳಲ್ಲಿ ಜೇನು ಕೃಷಿಯನ್ನು ನಡೆಸಿದಲ್ಲಿ, ಶೇ.21 ರಿಂದ ಶೇ.31 ರಷ್ಟು ಫಸಲು ಹೆಚ್ಚಿರುವುದು ವೈಜ್ಞಾನಿಕವಾಗಿ ದೃಢಪಟ್ಟ ವಿಚಾರ. ಜೇನು ಹುಳುಗಳು ಪರಾಗ ಸ್ಪರ್ಶಕ್ಕೆ ಸಾಕಷ್ಟು ಸಹಕಾರ ನೀಡುವುದೇ ಇದಕ್ಕೆ ಕಾರಣ. ಕಾಫಿ ಕೃಷಿ ಫಸಲನ್ನು ಹೆಚ್ಚು ಮಾಡುವುದರೊಂದಿಗೆ, ಜೇನು ಉತ್ಪಾದನೆಯೂ ಆರ್ಥಿಕವಾಗಿ ಬೆಳೆಗಾರನಿಗೆ ಪ್ರಯೋಜನಕಾರಿಯಾಗಿದೆಯೆಂದು ತಿಳಿಸಿದರು. ಆಂತರಿಕ ಬಳಕೆ ಹೆಚ್ಚಲಿ- ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ಕರ್ನಾಟಕ ಲಾಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ. ರಾಜೀವ್ ಮಾತನಾಡಿ, ಕಾಫಿಯ ಉತ್ಪಾದಕತೆ ಮತ್ತು ಉತ್ಪಾದನೆ ಇಂದಿನ ಅಗತ್ಯವಾಗಿದೆ. ಪ್ರಸ್ತುತ ಅಂತರಾಷ್ಟ್ರೀಯ ಮಟ್ಟದಲ್ಲಿ ರೋಬಸ್ಟಾ ಕಾಫಿಗೆ ಉತ್ತಮ ಬೆಲೆ ಮತ್ತು ಬೇಡಿಕೆ ಇರುವುದಾಗಿ ತಿಳಿಸಿ, ಕಾಫಿಯ ಆಂತರಿಕ ಬಳಕೆಯೂ ಹೆಚ್ಚಬೇಕೆಂದು ಅಭಿಪ್ರಾಯಿಸಿದರು. ಕಾಫಿ ಕೃಷಿಯೊಂದಿಗೆ ಮೀನು ಕೃಷಿ, ಜೇನು ಕೃಷಿಗೂ ಬೆಳೆಗಾರರು ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿ, ಕಾಫಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಕಾಫಿಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಇದರಿಂದ ಇಲ್ಲಿನ ಕಾಫಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಿರಸ್ಕೃತಗೊಳ್ಳುವ ಅಪಾಯವೂ ಇದೆಯೆಂದು ಎಚ್ಚರಿಕೆಯ ನುಡಿಗಳನ್ನಾಡಿದರು. ಸನ್ಮಾನ- ಇದೇ ಸಂದರ್ಭ ಜಿಲ್ಲೆಯ 12 ಮಂದಿ ಪ್ರಗತಿಪರ ಕಾಫಿ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಚಾರ ಸಂಕಿರಣದಲ್ಲಿ ಪ್ರಗತಿಪರ ಕಾಫಿ ಕೃಷಿಕರಾದ ನಡಿಕೇರಿಯಂಡ ಬೋಸ್ ಮಂದಣ್ಣ, ಮೀನುಗಾರಿಕಾ ಇಲಾಖಾ ಅಧಿಕಾರಿ ಮಿಲನಾ ಭರತ್, ಸಿಪಿಎ ಅಧ್ಯಕ್ಷ ನಂದಾ ಬೆಳ್ಯಪ್ಪ, ಕಾಫಿ ಬೆಳೆಗಾರರಾದ ಕೆ.ಕೆ.ವಿಶ್ವನಾಥ್, ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಉಪಸ್ಥಿತರಿದ್ದರು. ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ. ಸ್ವಾಗತಿಸಿ, ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು.