ಮಡಿಕೇರಿ ಅ.10 NEWS DESK : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುವ ದಶಮಂಟಪಗಳ ಶೋಭಾಯಾತ್ರೆಯನ್ನು ಕಾನೂನು ನಿಯಮಗಳಿಗೆ ಬದ್ಧವಾಗಿ ಆಚರಿಸಲು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ.ಜಗದೀಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಮುಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವ ಸಲುವಾಗಿ ದಸರಾ ಸಮಿತಿಯ ಪ್ರಮುಖರು ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಈ ಬಾರಿಯ ದಶಮಂಟಪ ಶೋಭಯಾತ್ರೆಯಲ್ಲಿ ಹಲವು ಬದಲಾವಣೆಯನ್ನು ತರಲಾಗಿದೆ ಎಂದರು. ಶೋಭಾಯಾತ್ರೆಯಲ್ಲಿ ಮಂಟಪಗಳ ಕಥಾ ಸಾರಾಂಶವನ್ನು ಜನರಿಗೆ ತಲುಪಿಸಲು ಧ್ವನಿವರ್ಧಕ ಅತ್ಯವಶ್ಯ. ಆದರೆ ಪ್ರಸ್ತುತ ದಿನಗಳಲ್ಲಿ ಇದರಿಂದ ಜನರ ಆರೋಗ್ಯದ ಮೇಲೆ ಹಾನಿ ಉಂಟುಮಾಡುತ್ತಿದ್ದು, ಈ ನಿಟ್ಟಿನಲ್ಲಿ ಅಬ್ಬರದ ಧ್ವನಿ ಬಳಕೆಗೆ ಕಡಿವಾಣ ಹಾಕಿ, ಇತಿ ಮಿತಿಯಲ್ಲಷ್ಟೆ ಧ್ವನಿವರ್ಧಕ ಬಳಸುವಂತೆ ಎಲ್ಲಾ ಮಂಟಪಗಳಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಈ ಬಾರಿಯ ಶೋಭಾ ಯಾತ್ರೆಯಲ್ಲಿ ದಶ ಮಂಟಪಗಳು ಲೇಸರ್ ಲೈಟ್ ಮತ್ತು ಅನಗತ್ಯ ಸಿಡಿಮದ್ದುಗಳನ್ನು ಬಳಸದಂತೆ ತೀರ್ಮಾನಿಸಲಾಗಿದೆ. ಅಲ್ಲದೇ ಈ ಬಾರಿ ಪ್ರತಿ ಮಂಟಪಗಳು ತೀರ್ಪುಗಾರಿಕೆ ಸಂದರ್ಭದ ಪ್ರದರ್ಶನವನ್ನು ಹೊರತು ಪಡಿಸಿ ಕನಿಷ್ಟ ನಾಲ್ಕು ಪ್ರದರ್ಶನವನ್ನಾದರು ನೀಡಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು. ಬನ್ನಿ ಕಡೆಯುವ ಸಂದರ್ಭ ಶೋಭಾಯತ್ರೆಗಳು ಮೆರವಣಿಗೆಯ ಮೂಲಕ ಸಾಗಿ ಬರುವುದರಿಂದ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ದಶಮಂಟಪಗಳಿಗೆ ಬೈಲಾಗಳನ್ನು ಮಾಡಲಾಗುತ್ತಿದ್ದು, ಈಗಾಗಲೇ ತಯಾರಿ ಹಂತದಲ್ಲಿದೆ ಎಂದರು. ದಶಮಂಟಪಗಳನ್ನು ತೀರ್ಪಿಗಾಗಿ ನಿಲ್ಲಿಸುವ ಸ್ಥಳ ಮತ್ತು ಸಮಯ : ರಾತ್ರಿ 10 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಶ್ರೀ ಪೇಟೆ ಶ್ರೀ ರಾಮಮಂದಿರ, 11 ಗಂಟೆಗೆ ನಗರಸಭೆ ಮತ್ತು ಕೆ.ಇ.ಬಿ ರಸ್ತೆ ಮುಂಭಾಗ ದೇಚೂರು ಶ್ರೀ ರಾಮ ಮಂದಿರ, 11.40 ಗಂಟೆಗೆ ಹೊಟೇಲ್ ಪಾಲ್ಯುಲರ್ ಮುಂಭಾಗ ಶ್ರೀ ಚೌಡೇಶ್ವರಿ, ಬೆಳಿಗ್ಗೆ 12.20 ಗಂಟೆಗೆ ನಗರ ಪೊಲೀಸ್ ಠಾಣೆ ಮುಂಭಾಗ ಶ್ರೀ ಕೋಟೆ ಗಣಪತಿ, 1 ಗಂಟೆಗೆ ಮೆಟ್ರೋ ಫ್ರೆಷ್ ಮುಂಭಾಗ ಕೋದಂಡ ರಾಮ, 1.35 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ ಶ್ರೀ ಕೋಟೆ ಮಾರಿಯಮ್ಮ, 2.10ಕ್ಕೆ ಸಿಂದೂರ್ ಬಟ್ಟೆ ಮಳಿಗೆ ಮುಂಭಾಗ ಶ್ರೀ ಕರವಲೆ ಭಗವತಿ, ಬೆಳಿಗ್ಗೆ 2.50 ಗಂಟೆಗೆ ಕೊಡವ ಸಮಾಜ ಮುಂಭಾಗ ಶ್ರೀ ದಂಡಿನ ಮಾರಿಯಮ್ಮ, 3.25 ಗಂಟೆಗೆ ವಿನೋದ್ ಮೆಡಿಕಲ್ಸ್ ಮುಂಭಾಗ ಶ್ರೀ ಕಂಚಿ ಕಾಮಾಕ್ಷಿ, 4 ಗಂಟೆಗೆ ಕಾವೇರಿ ಕಲಾಕ್ಷೇತ್ರ ಮುಂಭಾಗ ಶ್ರೀ ಚೌಟಿ ಮಾರಿಯಮ್ಮ ಪ್ರದರ್ಶನ ನೀಡಲಿದೆ ಎಂದರು. ಮಡಿಕೇರಿ ನಗರ ದಸರಾ ಸಮತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್ ಮಾತನಾಡಿ, ಅ.11 ರಂದು ಆಯುಧ ಪೂಜೆ ಮತ್ತು ಅ.12 ರಂದು ವಿಜಯದಶಮಿ ನಡೆಯಲಿದ್ದು, ಅ.11 ರಂದು ಸಂಜೆ 6.30 ಗಂಟೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ವೆಂಕಟ್ ರಾಜಾ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಮಹಾಸ್ವಾಮೀಜಿ, ಸುಂಟಿಕೊಪ್ಪದ ಧರ್ಮಗುರು ಅಬ್ದುಲ್ ಹಮೀದ್ ಮೌಲ್ವಿ, ಮಡಿಕೇರಿ ಧರ್ಮಗುರು ಫಾದರ್ ಜಾರ್ಜ್ ದೀಪಕ್ ಮಡಿಕೇರಿ ನಗರಸಭೆ ಪೌರಾಯುಕ್ತ ರಮೇಶ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾತ್ರಿ 8.30 ಗಂಟೆಗೆ ಆಯುಧ ಪೂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ತಂಗಡಗಿ ಶಿವಕುಮಾರ್ ಸಂಗಪ್ಪ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಘನ ಉಪಸ್ಥಿತರಿರಲಿದ್ದಾರೆ ಎಂದರು. ಅ.12 ರಂದು ಸಂಜೆ 6.30 ಗಂಟೆಗೆ ವಿಜಯ ದಶಮಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ವಹಿಸಲಿದ್ದಾರೆ ಎಂದು ತಿಳಿಸಿದರು.
ಅ.13 ರಂದು ಬೆಳಿಗ್ಗೆ 5 ಗಂಟೆಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ವಿಜೇತ ಪಂಟಪಗಳಿಗೆ ಶಾಸಕ ಡಾ.ಮಂತರ್ ಗೌಡ ಬಹುಮಾನ ವಿತರಣೆ ಮಾಡಲಿದ್ದಾರೆ. ಸಮಿತಿಯ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಮಾತನಾಡಿ, ಎಲ್ಲಾ ಕ್ಷೇತ್ರದ ಗಣ್ಯರನ್ನು ಗುರುತಿಸಿ ಗೌರವಿಸುವ ಸಲುವಾಗಿ ಅ.11 ರಂದು ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ವೈದ್ಯಕೀಯ ಕ್ಷೇತ್ರ, ವಾಣಿಜ್ಯ ಕ್ಷೇತ್ರ, ಸಮಾಜಸೇವೆ, ಸಾಮಾಜಿಕ ಕ್ಷೇತ್ರ, ಕ್ರೀಡಾ ಕ್ಷೇತ್ರ ಹಾಗೂ ಹಾಗೂ ತನಲ್ ಸಂಸ್ಥೆಯ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದರು. ಅಲ್ಲದೇ ಅಂತರಾಷ್ಟ್ರೀಯ ಮಾದಕ ವಸ್ತು ಜಾಲವನ್ನು ಪತ್ತೆಮಾಡಿ ಆರೋಪಿಯನ್ನು ಬಂಧಿಸಿದ ಹಾಗೂ ಕೊಡಗನ್ನು ಡ್ರಗ್ಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ 34 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಜೊತೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ ಸಿಇಒ ಆನಂದ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪವಿಭಾಗಧಿಕಾರಿ ಕೆ.ವಿನಾಯಕ್ ನರ್ವಾಡೆ ಕೊಡಗಿನ ಜನತೆಯ ಪರವಾಗಿ ಸನ್ಮಾನಿಸಲಾಗುವುದು. ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ವಿಶ್ವವಿಖ್ಯಾತ ಮಡಿಕೇರಿ ದಸರಾದ ದಶಮಂಟಪಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಲಿದ್ದಾರೆ ಎಂದರು. ಸದ್ದಿಗೋಷ್ಠಿಯಲ್ಲಿ ದಸರಾ ಸಮಿತಿ ಖಜಾಂಚಿ ಅರುಣ್ ಶೆಟ್ಟಿ, ಉಪಾಧ್ಯಕ್ಷ ಬಿ.ಎಂ.ರಾಜೇಶ್ ಉಪಸ್ಥಿತರಿದ್ದರು.