ಮಡಿಕೇರಿ ಅ.14 NEWS DESK : ಹುಲಿ ಸೆರೆ ಕಾರ್ಯಾಚರಣೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿಯಾದ ಸ್ಥಳಗಳಿಗೆ ಶಾಸಕರು ಭೇಟಿ ನೀಡಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತರು. ನಂತರ ಅರಣ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು ಹುಲಿ ಸೆರೆಗೆ ನಿರ್ದೇಶನ ನೀಡಿದರು. ವನ್ಯಜೀವಿ ಪಿ.ಸಿ.ಸಿ.ಎಫ್ ಪುಷ್ಕರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಹುಲಿ ಸೆರೆ ಅನಿವಾರ್ಯ ಎಂದು ತಿಳಿಸಿದರು.
ಪರಿಹಾರ ವಿತರಣೆ :: ಹುಲಿ ದಾಳಿಗೆ ಹಸು ಕಳೆದುಕೊಂಡ ಮಾಣೀರ ಕಿಶನ್ ಅವರಿಗೆ ಈಗಾಗಲೇ ರೂ.30 ಸಾವಿರ ಪರಿಹಾರವನ್ನು ಅರಣ್ಯ ಇಲಾಖೆ ನೀಡಿದೆ. ವಿಶೇಷ ಪ್ರಕರಣದಡಿ ಹೆಚ್ಚುವರಿ ಪರಿಹಾರವನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿಎಫ್ ನೆಹರು ಅವರಿಗೆ ಶಾಸಕ ಪೊನ್ನಣ್ಣ ಸೂಚಿಸಿದರು.
ಕೂಂಬಿಂಗ್ ಆರಂಭ :: ಶಾಸಕ ಎ.ಎಸ್.ಪೊನ್ನಣ್ಣ ಅವರ ನಿರ್ದೇಶನದಂತೆ ಶ್ರೀಮಂಗಲ ಹೋಬಳಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಹುಲಿ ಸೆರೆಗೆ ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ. ಮತ್ತಿಗೋಡು ಸಾಕಾನೆ ಶಿಬಿರದಿಂದ ಅಜಯ್ ಹಾಗೂ ಶ್ರೀರಾಮ್ ಸಾಕಾನೆ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಅರವಳಿಕೆ ತಜ್ಞ ಡಾ.ಚಿಟ್ಟಿಯಪ್ಪ ಹಾಗೂ ಶಾರ್ಪ್ ಶೂಟರ್ ರಂಜನ್ ಸ್ಥಳದಲ್ಲಿದ್ದಾರೆ. ಹುಲಿ ದಾಳಿಯಿಂದ ಮೃತಪಟ್ಟ ಜಾನುವಾರುವಿನೊಂದಿಗೆ ಬೋನ್ ಇರಿಸಲಾಗಿದೆ. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಕಾರ್ಯಾಚರಣೆ ಕುರಿತು ಅವಲೋಕಿಸಿದರು.
ಮಡಿಕೇರಿ ವನ್ಯಜೀವಿ ಡಿಎಫ್‍ಓ ನೆಹರು, ತಿತಿಮತಿ ಎಸಿಎಫ್ ಗೋಪಾಲ್, ಶ್ರೀಮಂಗಲ ಆರ್‍ಎಫ್‍ಓ ಅರವಿಂದ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಸ್ಥಳೀಯರಾದ ಪಲ್ವಿನ್ ಪೂಣಚ್ಚ, ಮಾಣೀರ ವಿಜಯ ನಂಜಪ್ಪ, ಚೊಟ್ಟೆಯಂಡಮಾಡ ವಿಶು ಮತ್ತಿತರರು ಹಾಜರಿದ್ದರು.