ಸಿದ್ದಾಪುರ ಅ.14 NEWS DESK : ಸೂರ್ಯ ಫೌಂಡೇಶನ್ ಬೆಂಗಳೂರಿನ ಸ್ಪಾರ್ಕ್ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಸಹಯೋಗದಲ್ಲಿ ನೀಡಲಾಗುವ 2024-25ನೇ ಸಾಲಿನ ಉತ್ತಮ ಶಿಕ್ಷಕ ಶಿಕ್ಷಣ ಸಿಂಧು ಪ್ರಶಸ್ತಿಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಚನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಕೆ.ಸುಷಾ ಭಾಜನರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಶಾಲಾ ಹಂತದಲ್ಲಿ ಕೈಗೊಂಡ ವಿಶಿಷ್ಟ ಕಾರ್ಯಕ್ರಮ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಇಂಡೋ ಗ್ಲೋಬ್ ಸಂಸ್ಥೆ ಚಿಕ್ಕ ಬಾಣಾವಾರದಲ್ಲಿ ನಡೆಯುವ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗವುದು ಎಂದು ಸೂರ್ಯ ಫೌಂಡೇಶನ್ ಹಾಗೂ ಸ್ಟಾರ್ಕ್ ಅಕಾಡೆಮಿಯ ಮುಖ್ಯಸ್ಥ ಸೋಮೇಶ್ ನಮೋದಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚನ್ನಂಗಿ ಶಾಲೆಯ ಮುಖ್ಯ ಶಿಕ್ಷಕಿ ಕೆ.ಕೆ.ಸುಷಾ ಗ್ರಾಮೀಣ ಭಾಗದ ಶಾಲೆಯಲ್ಲಿ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಪರಿಸರ ಕಾಳಜಿ, ವೃತ್ತಿ ಶಿಕ್ಷಣ, ಕಲಾ ಸಾಹಿತ್ಯ ಸಂಸ್ಕೃತಿ ಸೇರಿದಂತೆ ತಿಂಗಳಿಗೊಮ್ಮೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಶಾಲೆಯ ಪರಿಸರವನ್ನು ಚಿತ್ರಕಲೆಗಳ ಮೂಲಕ ಶೃಂಗಾರಗೊಳಿಸಿ ಮಾದರಿ ಶಾಲೆಯನ್ನಾಗಿಸಿದ್ದಾರೆ. ಸೇವಾ ಸಾಧನೆಗಾಗಿ ಈ ಹಿಂದೆ ಶಿಕ್ಷಣ ಸಾರಥಿ, ಶಿಕ್ಷಕ ಸಿರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದಲೂ ಪ್ರಶಸ್ತಿ ಲಭಿಸಿದೆ.