ಮಡಿಕೇರಿ ಅ.14 NEWS DESK : ಗಾಳಿಬೀಡು ಗ್ರಾಮದ ಅಡ್ಕದಬಾಣೆಯಲ್ಲಿ ಸ್ನೇಹಿತರ ಯುವಕ ಸಂಘದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಂಘದ ಅಧ್ಯಕ್ಷ ಕೋಳುಮುಡಿಯನ ಮೋಹನ್ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಜಿ.ವಿ.ಶ್ರೀನಾಥ್ ಸಂಪನ್ಮೂಲ ಅಧಿಕಾರಿಗಳಾಗಿ ಭಾಗವಹಿಸಿ, ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಹಾಗೂ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪೌಷ್ಟಿಕ ಆಹಾರ ಸೇವನೆಯ ಮಹತ್ವ, ರಕ್ತ ಹೀನತೆ ಮತ್ತು ನಿವಾರಣೆ, ಗರ್ಭಿಣಿ, ಬಾಣಂತಿ ಆರೈಕೆ, ಲಸಿಕಾ ಕಾರ್ಯಕ್ರಮ, ಮಾನಸಿಕ ಆರೋಗ್ಯದ ಕುರಿತು ಗ್ರಾಮಸ್ಥರಿಗೆ ಸಂಪೂರ್ಣ ಮಾಹಿತಿ ನೀಡಿದರು. ಶಿಬಿರದಲ್ಲಿ ಮಡಿಕೇರಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ಗಾಳಿಬೀಡು ಆಯುಷ್ಮಾನ್ ಆರೋಗ್ಯ ಮಂದಿರದ ಸಮುದಾಯ ಆರೋಗ್ಯ ಅಧಿಕಾರಿ ರಮ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಷಾ ಹಾಗೂ ಆಶಾ ಕಾರ್ಯಕರ್ತೆ ಕವಿತ ಹಾಜರಿದ್ದರು. ಆರೋಗ್ಯ ತಪಸಣಾ ಶಿಬಿರಕ್ಕೆ ಹಾಜರಾದ ಗ್ರಾಮಸ್ಥರಿಗೆ ಬಿಪಿ, ಮಧುಮೇಹ, ಹಿಮೋಗ್ಲೋಬಿನ್ ತಪಾಸಣೆ ನಡೆಸಲಾಯಿತು. ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಂಡರು. ಶ್ರೀನಿಧಿ, ತ್ರಿವೇಣಿ ಹಾಗೂ ಮಾಧುರಪ್ಪ ಸ್ವಸಹಾಯ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಾಳಿಬೀಡು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಣಿ ಮುತ್ತಣ್ಣ ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಷಾ ವಂದಿಸಿದರು.