ನಾಪೋಕ್ಲು ಅ.16 NEWS DESK : ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 28ನೇ ವರ್ಷದ ಕಾವೇರಿ ರಥಯಾತ್ರೆ ಅ.16 ಮತ್ತು 17 ರಂದು ನಡೆಯಲಿದೆ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಹೇಳಿದರು. ನಾಪೋಕ್ಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಪ್ರತಿಮೆಯ ಭವ್ಯವಾದ ಪುಷ್ಪಾಲಂಕೃತ ಮೆರವಣಿಗೆಯು ನಾಪೋಕ್ಲುವಿನ ರಾಮಮಂದಿರದಿಂದ ಹೊರಡಲಿದ್ದು ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚೇರಂಬಾಣೆ, ಚೆಟ್ಟಿಮಾನಿ ಮಾರ್ಗವಾಗಿ ಭಾಗಮಂಡಲ-ತಲಕಾವೇರಿಗೆ ತೆರಳಲಿದೆ. ತಲಕಾವೇರಿಗೆ ತೆರಳಿ ತೀರ್ಥೋದ್ಭವದ ಬಳಿಕ ವಿವಿಧ ಸ್ಥಳಗಳಲ್ಲಿ ತೀರ್ಥ ವಿತರಿಸಿ ಪಾಲೂರಿನ ಸತ್ಯ ಹರಿಶ್ಚಂದ್ರ ದೇವಾಲಯದ ಕಾವೇರಿ ನದಿಯಲ್ಲಿ ತಾಯಿ ಕಾವೇರಿ ಮಾತೆಯ ಕಳಶ ವಿಸರ್ಜನೆಯೊಂದಿಗೆ ಅಂತ್ಯಗೊಳ್ಳಲಿದೆ ಎಂದರು. ಅ.17 ರಂದು ಬೆಳಿಗ್ಗೆ 9.30 ಗಂಟೆಗೆ ಭಾಗಮಂಡಲದಿಂದ ರಥಯಾತ್ರೆ ಆರಂಭಗೊಳ್ಳಲಿದ್ದು ಚೇರಂಗಾಲ, ಅಯ್ಯಂಗೇರಿ, ಪುಲಿಕೋಟು, ಪೇರೂರು, ಬಲ್ಲಮಾವಟಿ, ಚೋನಕೆರೆ ಮೂಲಕ ಭಕ್ತಾದಿಗಳಿಗೆ ಪುಣ್ಯ ತೀರ್ಥವನ್ನು ವಿತರಣೆ ಮಾಡುತ್ತಾ ಸಂಜೆ 4.30 ಗಂಟೆಗೆ ನಾಪೋಕ್ಲು ತಲುಪಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ, ಪದಾಧಿಕಾರಿಗಳಾದ, ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟ0ಡ ಸುಮಿತ್ರ ದೇವಯ್ಯ ಇದ್ದರು.
ವರದಿ : ದುಗ್ಗಳ ಸದಾನಂದ.