ಮಡಿಕೇರಿ, ಅ.16 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ , ಕೊಡಗು ಜಿಲ್ಲಾ ವತಿಯಿಂದ ಮಡಿಕೇರಿ ನಗರದ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ ಸಭಾಂಗಣದಲ್ಲಿ “ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು”* ಎನ್ನುವ ಧ್ಯೇಯದೊಂದಿಗೆ ವಿಶ್ವ ಆಹಾರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕೊಡಗು ಘಟಕದ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಆಹಾರದ ಕೊರತೆಯಿಂದ ಉಲ್ಬಣಿಸಿರುವ ಹಸಿವಿನ ಜಾಗತಿಕ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದರು. ಆಹಾರ ಪೋಲು – ರಾಷ್ಟ್ರೀಯ ನಷ್ಟ..ನಾವು ನಮ್ಮ ನೆಲೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮತ್ತು ಸಮಾಜಮುಖಿ ಚಿಂತನೆ, ಆಹಾರ ಸಂರಕ್ಷಣೆ ಕುರಿತು ಹೆಚ್ಚಿನ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಆಹಾರ ಅಪವ್ಯಯವನ್ನು ತಡೆಗಟ್ಟಲು ಸಂಘಟಿತ ಪ್ರಯತ್ನ ನಡೆಸಬೇಕು ಎಂದರು. ಒಮ್ಮೆ ಆಹಾರದ ಕೊರತೆ ಉಂಟಾದರೆ ಇಡೀ ದೇಶದಲ್ಲೇ ಹಾಹಾಕಾರ ಉಂಟಾಗುತ್ತದೆ. ಆದ್ದರಿಂದ ಕನಿಷ್ಠ ನಾವುಗಳು ಒಂದು ಎಚ್ಚರಿಕೆಯನ್ನಾದರೂ ವಹಿಸಬೇಕು. ಪ್ರತಿಯೊಬ್ಬರೂ ಆಹಾರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ವಿಶ್ವಾದ್ಯಂತ ಇಂದಿಗೂ ಕೋಟ್ಯಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ ನಡುವೆ ನಾವು ಪೋಲು ಮಾಡುತ್ತಿರುವ ಆಹಾರದ ಪ್ರಮಾಣವನ್ನು ತಗ್ಗಿಸಿ ಉತ್ತಮ ಭವಿಷ್ಯಕ್ಕಾಗಿ ಆಹಾರವನ್ನು ಸಂರಕ್ಷಿಸಬೇಕು ಎಂದು ಬೇಬಿಮ್ಯಾಥ್ಯೂ ಹೇಳಿದರು. ವಿಶ್ವ ಆಹಾರ ದಿನದ ಮಹತ್ವದ ಕುರಿತು ಮಾಹಿತಿ ನೀಡಿ, ಆಹಾರ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಸಂಸ್ಥೆಯ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಆಹಾರದ ಕೊರತೆಯಿಂದ ಉಲ್ಬಣಿಸಿರುವ “ಹಸಿವು” ಎಂಬುದು ಇಂದು ಜಾಗತಿಕ ಸಮಸ್ಯೆಯಾಗಿದೆ. ಈ ಜಾಗತಿಕ ಹಸಿವು ನಿವಾರಣೆಗೆ ಎಲ್ಲರೂ ಕೈಜೋಡಿಸಬೇಕು. ಆಹಾರದ ಹಕ್ಕು ಪ್ರತಿಯೊಬ್ಬರ ಹಕ್ಕು ಆಗಿದೆ. ನಮಗೆ ತಿನ್ನುವ ಹಕ್ಕಿದೆ. ಆದರೆ, ಬಿಸಾಡುವ ಹಕ್ಕು ಇಲ್ಲ ಎಂದರು. ಮಾನವನ ಅಭಿವೃದ್ಧಿ, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪೌಷ್ಟಿಕ ಆಹಾರ ಅತ್ಯಗತ್ಯ ಎಂದರು.
ಆಹಾರ ಪೋಲು ಮಾಡದಿರಿ : : ನಾವು ಆಹಾರವನ್ನು ಪೋಲು ಮಾಡದೇ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಆಹಾರವನ್ನು ಸಂರಕ್ಷಿಸಬೇಕು ಎಂದರು. ಕೊಡಗಿನ ಕುಶಾಲನಗರದಲ್ಲಿ ಎನ್.ಕೆ.ಮೋಹನ್ ಕುಮಾರ್ ನೇತೃತ್ವದಲ್ಲಿ 15 ವರ್ಷಗಳ ಹಿಂದೆ ಆರಂಭಗೊಂಡ ಆಹಾರ ಸಂರಕ್ಷಣಾ ಜನಜಾಗೃತಿ ಅಭಿಯಾನವು ಇಂದು ಬೆಂಗಳೂರು ಮತ್ತಿತರ ಕಡೆಗಳಲ್ಲಿ ವ್ಯಾಪಕವಾಗಿ ವಿಸ್ತೃತಗೊಂಡು ಆಹಾರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರೇಮಕುಮಾರ್ ತಿಳಿಸಿದರು. ಜಿಲ್ಲಾ ಸ್ಕೌಟ್ಸ್ ವಿಭಾಗದ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಪ್ರತಿಯೊಬ್ಬರೂ ಆಹಾರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜಿಲ್ಲಾ ಗೈಡ್ಸ್ ಸಂಸ್ಥೆಯ ಆಯುಕ್ತೆಯೂ ಆಗಿರುವ ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ, ಸ್ಥಾನೀಕ ಆಯುಕ್ತ ಎಚ್.ಆರ್.ಮುತ್ತಪ್ಪ, ಸಂಸ್ಥೆಯ ಸಹ ಕಾರ್ಯದರ್ಶಿಗಳಾದ ಬೊಳ್ಳಜಿರಬಿ.ಅಯ್ಯಪ್ಪ, ಈರಮಂಡ ಹರಿಣಿ ವಿಜಯ್, ಜಿಲ್ಲಾ ಗೈಡ್ಸ್ ನ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಸ್ಕೌಟ್ಸ್ ನ ತರಬೇತಿ ಆಯುಕ್ತ ಕೆ.ಯು.ರಂಜಿತ್, ಗೈಡ್ಸ್ ನ ತರಬೇತಿ ಆಯುಕ್ತೆ ಮೈಥಿಲಿರಾವ್, ಸ್ಕೌಟ್ಸ್ ತರಬೇತಿ ಆಯುಕ್ತ ಕೆ.ಯು.ರಂಜಿತ್, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ , ತರಬೇತಿ ಸಹಾಯಕ ಆಯುಕ್ತೆ ಅಲೀಮ, ಕಬ್ಸ್ ವಿಭಾಗದ ಮುಖ್ಯಸ್ಥೆ ಡೈಸಿ, ಸಂಸ್ಥೆಯ ದಳ ನಾಯಕಿ ಗಾಯನ ಇದ್ದರು.